ಮುಂಬೈ

ಕ್ರಾಂತಿಕಾರಿ ಕವಿ ವರವರ ರಾವ್ ಅವರಿಗೆ ಕೊರೋನಾ ಸೋಂಕು

Pinterest LinkedIn Tumblr


ಮುಂಬೈ: ಭೀಮಾ ಕೋರೆಗಾಂವ್ ಹಿಂಸಾಚಾರದ ಆರೋಪದಲ್ಲಿ ಮುಂಬೈನ ತಾಲೋಜ ಜೈಲಿನಲ್ಲಿದ್ದ ಕ್ರಾಂತಿಕಾರಿ ಕವಿ ಹಾಗೂ ಸಾಮಾಜಿಕ ಕಾರ್ಯಕರ್ತ ವರವರ ರಾವ್ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಪ್ರಸ್ತುತ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 80 ವರ್ಷ ವಯಸ್ಸಿನ ಕವಿಯನ್ನು ಇದೀಗ ನಗರದ ಸೇಂಟ್ ಜಾರ್ಜ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ರಾವ್ ಅವರನ್ನು ಈ ಹಿಂದೆ ನೆರೆಯ ನವೀ ಮುಂಬಯಿಯ ತಾಲೋಜ ಜೈಲಿನಲ್ಲಿ ದಾಖಲಿಸಲಾಗಿತ್ತು. ಸೋಮವಾರ ರಾತ್ರಿ ದಕ್ಷಿಣ ಮುಂಬೈನ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಅವರ ಕೋವಿಡ್‌ ಪರೀಕ್ಷಾ ವರದಿ ಗುರುವಾರ ಕೈಸೇರಿದ್ದು ಅವರಿಗೆ ಪಾಸಿಟೀವ್ ಇರುವುದು ಕಂಡುಬಂದಿದೆ ಎಂದು ಜೆಜೆ ಆಸ್ಪತ್ರೆಯ ಮುಖ್ಯಸ್ಥ ಡಾ. ರಂಜಿತ್‌ ಮಾಂಕೇಶ್ವರ ತಿಳಿಸಿದ್ದಾರೆ.

ಎಲ್ಗರ್‌ ಪರಿಷತ್ ಪ್ರಕರಣದಲ್ಲಿ ರಾವ್ ಮತ್ತು ಇತರ ಒಂಬತ್ತು ಕಾರ್ಯಕರ್ತರನ್ನು ಪುಣೆ ಪೊಲೀಸರು ಬಂಧಿಸಿದ್ದರು. ಪ್ರಕರಣದ ಸಂಬಂಧ ತನಿಖೆ ನಡೆಸಿದ್ದ ಪುಣೆ ಪೊಲೀಸರು ನಂತರ ಈ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಲಾಗಿತ್ತು. ಹೀಗಾಗಿ ಕವಿ ವರವರ ರಾವ್‌ ಕಳೆದ 22 ತಿಂಗಳಿನಿಂದ ಜೈಲಿನಲ್ಲೇ ಇದ್ದಾರೆ. ಪರಿಣಾಮ ಅವರ ಕುಟುಂಬದವರು ವೈದ್ಯಕೀಯ ಕಾರಣ ನೀಡಿ ಜಾಮೀನು ಕೋರಿ ವಿಶೇಷ ಎನ್‌ಐಎ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಆದರೆ, ಜಾಮೀನು ನೀಡಲಾಗಿರಲಿಲ್ಲ.

ಡಿಸೆಂಬರ್ 31, 2017 ರಂದು ಪುಣೆಯಲ್ಲಿ ನಡೆದ ಎಲ್ಗರ್ ಪರಿಷತ್ ಸಮಾವೇಶದಲ್ಲಿ ಇವರು ಉದ್ವೇಗಕಾರಿ ಭಾಷಣ ಮಾಡಿದ್ದರಿಂದ ಮರುದಿನ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದ ಬಳಿ ಹಿಂಸಾಚಾರ ಉಂಟಾಯಿತು ಎಂದು ಆರೋಪಿಸಿ ಅವರನ್ನು ಬಂಧಿಸಲಾಗಿತ್ತು. ಅಲ್ಲದೆ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಇವರು ಸಂಚು ರೂಪಿಸಿದ್ದರು ಎಂಬ ಆರೋಪ ಕೂಡಾ ಮಾಡಲಾಗಿದೆ.

ರಾವ್ ಅವರನ್ನು ತಕ್ಷಣ ಬಿಡುಗಡೆ ಮಾಡಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಬೇಕೆಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಒತ್ತಾಯಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, “ವರವರ ರಾವ್ ಅವರ ಕುಟುಂಬವು ವಿವರಿಸಿದಂತೆ ಅವರ ಸ್ಥಿತಿ ಗಂಭೀರವಾಗಿದೆ. ರಾಜ್ಯ, ಪೊಲೀಸ್ ಮತ್ತು ಜೈಲು ಅಧಿಕಾರಿಗಳು ರಾವ್ ಅವರ ವಿಚಾರದಲ್ಲಿ ಮಾನವೀಯವಾಗಿ ವರ್ತಿಸುತ್ತಾರೆ ಎಂಬ ನಂಬಿಕೆ ಕೈಮೀರಿದೆ. ಹೀಗಾಗಿ ತಕ್ಷಣ ಅವರನ್ನು ಬಿಡುಗಡೆ ಮಾಡಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಬೇಕು, ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Comments are closed.