ಮುಂಬೈ (ಸೆಪ್ಟೆಂಬರ್ 1): ಟೆಲಿಕಾಂ ಸಂಶ್ಥೆಗಳು ಕಟ್ಟಬೇಕಿರುವ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ವಿಚಾರದಲ್ಲಿ ಸುಪ್ರೀಂಕೋರ್ಟ್ನಲ್ಲಿ ಮಹತ್ವದ ತೀರ್ಪು ನೀಡಿದೆ. ಬಾಕಿ ಇರುವ ಎಜಿಆರ್ಅನ್ನು 10 ವರ್ಷದ ಒಳಗೆ ಕಟ್ಟುವಂತೆ ಸುಪ್ರೀಂಕೋರ್ಟ್ ಟೆಲಿಕಾಂ ಸಂಸ್ಥೆಗಳಿಗೆ ಸೂಚಿಸಿದೆ. ಇದರಿಂದ ಟೆಲಿಕಾಂ ಸಂಸ್ಥೆಗಳು ನಿಟ್ಟುಸಿರು ಬಿಟ್ಟಿವೆ.
ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ ಅಥವಾ ಒಟ್ಟು ಹೊಂದಾಣಿಕೆ ಆದಾಯವನ್ನು ಹೇಗೆ ನಿರ್ಧರಿಸಬೇಕೆಂಬ ಗೊಂದಲ 14 ವರ್ಷಗಳಿಂದಲೂ ಇದೆ. ಟೆಲಿಕಾಂಯೇತರ ಆದಾಯ ಮತ್ತು ಮುಖ್ಯ ಭಾಗದ ಆದಾಯಗಳು ಎಜಿಆರ್ ವ್ಯಾಪ್ತಿಗೆ ತರಬಾರದು ಎಂಬದು ಟೆಲಿಕಾಂ ಕಂಪನಿಗಳ ವಾದವಾಗಿತ್ತು. ಆದರೆ, ಟರ್ಮಿನೇಶನ್ ಫೀ (ಕರೆ ಕಡಿತ ಶುಲ್ಕ) ಮತ್ತು ರೋಮಿಂಗ್ ಶುಲ್ಕ ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ಆದಾಯವೂ ಎಜಿಆರ್ ವ್ಯಾಪ್ತಿಗೆ ಬರಬೇಕು ಎಂಬುದು ದೂರ ಸಂಪರ್ಕ ಇಲಾಖೆ (ಡಿಓಟಿ) ವಾದ . ಈದೇ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು.
ಇದರನ್ವಯ ವೊಡಾಫೋನ್ ಐಡಿಯಾ 50,399 ಕೋಟಿ ರೂಪಾಯಿ ಹಾಗೂ ಭಾರ್ತಿ ಏರ್ಟೆಲ್ 25, 976 ಕೋಟಿ ರೂಪಾಯಿ ಪಾವತಿಸಬೇಕು. ಇಷ್ಟು ದೊಡ್ಡ ಮೊತ್ತದ ಹಣವನ್ನು ಒಂದೇ ಬಾರಿಗೆ ನೀಡಲು ಸಾಧ್ಯವಿಲ್ಲ. ಹೀಗಾಗಿ ನಮಗೆ ಹೆಚ್ಚಿನ ಸಮಯಾವಕಾಶ ನೀಡಬೇಕು ಎಂದು ಟೆಲಿಕಾಂ ಸಂಸ್ಥೆಗಳು ಮನವಿ ಮಾಡಿದ್ದವು.
ಈ ಅರ್ಜಿಯನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್, ಟೆಲಿಕಾಂ ಸಂಸ್ಥೆಗಳಿಗೆ ಬಾಕಿ ಇರುವ ಎಜಿಆರ್ಗಳನ್ನು ಕಟ್ಟಲು 10 ವರ್ಷ ಸಮಯ ನೀಡಿದೆ. ಈ ಮೂಲಕ 2031 ಮಾರ್ಚ್ ಒಳಗೆ ಈ ಬಾಕಿ ಹಣವನ್ನು ಕಟ್ಟುವಂತೆ ಸೂಚಿಸಿದೆ. ಅಲ್ಲದೆ, ಮಾರ್ಚ್ 31ರ ಒಳಗೆ ಶೇ.10 ಬಾಕಿ ಹಣವನ್ನು ಹಿಂದಿರುಗಿಸಲು ಸೂಚಿಸಿದೆ. ಬಾಕಿ ಹಣ ಪಾವತಿಸಲು ಏರ್ಟೆಲ್ 20 ವರ್ಷ ಹಾಗೂ ವಡಾಫೋನ್ ಐಡಿಯಾ 15 ವರ್ಷ ಸಮಯಾವಕಾಶ ಕೇಳಿದ್ದವು. ಇನ್ನು ಈ ಆದೇಶ ಹೊರ ಬರುತ್ತಿದ್ದಂತೆ ಏರ್ಟೆಲ್ ಷೇರು ಶೇ.5.63 ಏರಿಕೆ ಕಂಡರೆ, ವಡಾಫೋನ್ ಷೇರು ಶೇ.16.65 ಕುಸಿತ ಕಂಡಿದೆ.
Comments are closed.