ಅದು “ಸಿಪಾಯಿ’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ. ಸಾಮಾನ್ಯವಾಗಿ ಹೊಸಬರ ಆಡಿಯೋ ಸಿಡಿ ರಿಲೀಸ್ ಅಂದಮೇಲೆ, ಚಿತ್ರರಂಗದ ಗಣ್ಯರು, ನಟರು, ರಾಜಕಾರಣಿಗಳು ವೇದಿಕೆ ಅಲಂಕರಿಸಿರುತ್ತಾರೆ. ಅಂತಹ ಸಂದರ್ಭ “ಸಿಪಾಯಿ’ ಆಡಿಯೋ ಸಿಡಿ ವೇಳೆಯೂ ಕಂಡುಬಂತು. ಇತ್ತೀಚೆಗೆ ಕಲರ್‌ಫುಲ್ ವೇದಿಕೆ ಮೇಲೆ “ಸಿಪಾಯಿ’ ಚಿತ್ರದ ಹಾಡುಗಳನ್ನು ಹೊರತರಲಾಯಿತು. ನಿರ್ಮಾಪಕ ಚಿನ್ನೇಗೌಡ ಅವರು ಆಡಿಯೋ ಸಿಡಿ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಶುಭಹಾರೈಸಿದರು. ಅಂದು ಸಚಿವ ರಾಮಲಿಂಗಾರೆಡ್ಡಿ, ನಟರಾದ ಶ್ರೀಮುರಳಿ, ಸಂಚಾರಿ ವಿಜಯ್, ನಿರ್ದೇಶಕರಾದ ಯೋಗರಾಜ್‌ಭಟ್, ಪವನ್‌ಕುಮಾರ್, ಡಿ ಬೀಟ್ಸ್‌ನ ಶೈಲಜಾ ಸೇರಿದಂತೆ ಹಲವರು ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಅಂದಿನ ಹೀರೋ ಸಂಗೀತ ನಿರ್ದೇಶಕ ಅಜನೀಶ್. ವೇದಿಕೆ ಮೇಲೆ ಬಂದವರೆಲ್ಲರೂ ಅಜನೀಶ್ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ಮುರಳಿ ಹೊಸಬರ ಸಿನಿಮಾವನ್ನು ಪ್ರೋತ್ಸಾಹಿಸಿ, ಹೊಸಬರನ್ನು ಬೆಳೆಸಿ ಅಂತ ಮನವಿ ಇಟ್ಟರು. “ಚಿತ್ರರಂಗದಲ್ಲಿ ತುಂಬಾ ಒಳ್ಳೆಯವನಾಗಬೇಡ, ಸ್ವಲ್ಪ ಕೆಟ್ಟವನಾಗು ಅನ್ನುತ್ತಲೇ, ಹೊಸಬರು ಸೇರಿ ಪ್ರೀತಿಯಿಂದ ಸಿನಿಮಾ ಮಾಡಿದ್ದಾರೆ. ಈ ಚಿತ್ರಕ್ಕೆ ಹಾಡೊಂದನ್ನು ಬರೆಯಬೇಕಿತ್ತು. ಆದರೆ ನಾನು “ದನ ಕಾಯೋನು’ ಚಿತ್ರದಲ್ಲಿ ಬಿಜಿ ಇದ್ದುದರಿಂದ ಬರೆದು ಕೊಡಲು ಸಾಧ್ಯವಾಗಲಿಲ್ಲ. ಕ್ಷಮೆ ಇರಲಿ ಅಂದರು ಯೋಗರಾಜ್‌ಭಟ್.
“ನನ್ನ ಹಾಡುಗಳನ್ನು ಮೆಚ್ಚಿಕೊಂಡವರಿಗೆಲ್ಲರಿಗೂ ಥ್ಯಾಂಕ್ಸ್.
ಮೊದಲ ಸಲ ಮಾಸ್ ಹಾಗು ಆಕ್ಷನ್ ಚಿತ್ರಕ್ಕೆ ಸಂಗೀತ ನೀಡಿದ್ದೇನೆ. ಎಂದಿನಂತೆ ನಿಮ್ಮೆಲ್ಲೆರ ಪ್ರೋತ್ಸಾಹವಿರಲಿ’ ಅಂದರು ಅಜನೀಶ್. “ಈ ಚಿತ್ರ ಮಾಡಲು ಒಪ್ಪಿಕೊಂಡಿದ್ದು, ನಿರ್ದೇಶಕರು ಹೇಳಿದ ಕಥೆ ಹಾಗು ಲೂಸಿಯಾದಲ್ಲಿ ಅವರ ಕೆಲಸ ನೋಡಿ’ ಅಂತ ಹೇಳಿಕೊಂಡರು ಶ್ರುತಿಹರಿಹರನ್.
ನಿರ್ದೇಶಕ ರಜತ್ ಮಹೇಶ್, ಅವರಿಲ್ಲಿ ನಾಯಕನಿಗೆ ಪತ್ರಕರ್ತನ ಪಾತ್ರ ಕೊಟ್ಟಿದ್ದಾರಂತೆ. ಸಮಾಜಘಾತಕರ ವಿರುದ್ದ ಹೋರಾಡುವ ಪತ್ರಕರ್ತ, ಯಾಕೆ ಎಂಬುದನ್ನು ಸಿನಿಮಾದಲ್ಲೇ ನೋಡಿ ಅಂದರು. ಸಿದ್ಧಾರ್ಥ ಮಹೇಶ್ ಹೀರೋ ಆಗಲು ಅವರ ಅಪ್ಪ ಕಾರಣವಂತೆ. ತಂದೆಯ ಪ್ರೋತ್ಸಾಹವೇ ಚಿತ್ರವಾಗಲು ಕಾರಣ ಅಂದರು ಸಿದ್ಧಾರ್ಥ ಮಹೇಶ್. ನಿರ್ಮಾಪಕ ಮಹೇಶ್, ರಾಜಕಾರಣಿಗಳನ್ನು ಆಹ್ವಾನಿಸಿ, ಅಂದು ಚಿತ್ರದ ಟೀಸರ್ ಅನಾವರಣಗೊಳಿಸಿದರು.
-ಉದಯವಾಣಿ
Comments are closed.