ತಿರುವನಂತಪುರ (ಪಿಟಿಐ): ಕೇರಳದ ಕ್ರೀಡಾ ಸಚಿವ ಇ.ಪಿ. ಜಯರಾಜನ್ ಅವರು ತಮ್ಮನ್ನು ‘ಭ್ರಷ್ಟ’ರೆಂದು ಅವಹೇಳನ ಮಾಡಿದ್ದಾರೆ ಎಂದು ಕೇರಳ ಕ್ರೀಡಾ ಪರಿಷತ್ನ (ಕೆಎಸ್ಸಿ) ಅಧ್ಯಕ್ಷರೂ ಆಗಿರುವ ಕ್ರೀಡಾಪಟು ಅಂಜು ಬಾಬಿ ಜಾರ್ಜ್ ಆರೋಪಿಸಿದ್ದಾರೆ.
ಈ ಸಂಬಂಧ ಅಂಜು ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೂ ದೂರು ನೀಡಿದ್ದಾರೆ.
ಕೇರಳದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನೂತನ ಕ್ರೀಡಾ ಸಚಿವ ಜಯರಾಜನ್ ಅವರು ಜೂನ್ 7ರಂದು ಕ್ರೀಡಾ ಪರಿಷತ್ ಸದಸ್ಯರ ಸಭೆ ಕರೆದಿದ್ದರು. ಆ ಸಭೆಯಲ್ಲಿ ಪರಿಷತ್ನ ಸದಸ್ಯರೆಲ್ಲರನ್ನೂ ಸಚಿವರು ‘ಭ್ರಷ್ಟ’ರೆಂದು ಕರೆದಿದ್ದಾರೆ ಎಂದು ಅಂಜು ಆರೋಪಿಸಿದ್ದಾರೆ.
‘ರಾಜ್ಯದ ಕ್ರೀಡಾ ಸ್ಥಿತಿಯನ್ನು ಅರಿಯಲು ಸಚಿವರು ಸಭೆ ಕರೆದಿದ್ದಾರೆ ಎಂದುಕೊಂಡಿದ್ದೆವು. ಆದರೆ, ಸಭೆಯಲ್ಲಿ ಸಚಿವರು, ‘ನೀವೆಲ್ಲರೂ ಹಿಂದಿನ ಸರ್ಕಾರದ ಅವಧಿಯಲ್ಲಿ ಸದಸ್ಯರಾದವರು. ನೀವೆಲ್ಲಾ ಬೇರೆ ಪಕ್ಷದ ಸದಸ್ಯರು. ನೀವು ಮಾಡುತ್ತಿರುವ ವರ್ಗಾವಣೆ, ನೇಮಕಾರಿಗಳೆಲ್ಲಾ ಅಕ್ರಮ’ ಎಂದು ಅವಹೇಳನ ಮಾಡಿದರು’ ಎಂದು ಅಂಜು ತಿಳಿಸಿದ್ದಾರೆ.
‘ನಾವೆಲ್ಲರೂ ಭ್ರಷ್ಟರು ಎಂದು ಸಚಿವರು ಸಭೆಯಲ್ಲಿ ಆರೋಪ ಮಾಡಿದ್ದಾರೆ. ಆದರೆ, ಯಾವ ಭ್ರಷ್ಟಾಚಾರದಲ್ಲೂ ನಾವು ಭಾಗಿಯಾಗಿಲ್ಲ. ನಾವು ಯಾವ ಪಕ್ಷಕ್ಕೂ ಸೇರಿಲ್ಲ. ನಮ್ಮದು ಕ್ರೀಡಾ ಪಕ್ಷ’ ಎಂದು ಅಂಜು ಹೇಳಿದ್ದಾರೆ.
ಆದರೆ, ಅಂಜು ಅವರ ಆರೋಪವನ್ನು ಜಯರಾಜನ್ ಅಲ್ಲಗಳೆದಿದ್ದಾರೆ.
Comments are closed.