ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಇತ್ತೀಚೆಗೆ ಕನ್ನಡ ಚಿತ್ರರಂಗದವರ ಕೈಗೆ ಸಿಗುತ್ತಿಲ್ಲ. ಅವರ ನೋಟವೀಗ ಪರಭಾಷಾ ಚಿತ್ರಗಳತ್ತ ನೆಟ್ಟಿದೆ. ಬೇರೆ ಚಿತ್ರರಂಗಗಳಲ್ಲಿ ತೊಡಗಿಸಿಕೊಂಡಿರುವ ಅವರೀಗ ಕನ್ನಡದತ್ತ ಮುಖ ಮಾಡುತ್ತಿಲ್ಲ.
ಅವರೀಗ ಸುಲಭವಾಗಿ ಯಾರ ಸಂಪರ್ಕಕ್ಕೂ ಸಿಗುವುದಿಲ್ಲ ಎಂಬ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿವೆ. ‘‘ನನ್ನ ಬಗ್ಗೆ ಸ್ಯಾಂಡಲ್‌ವುಡ್ ಗಲ್ಲಿಗಳಲ್ಲಿ ಕೇಳಿಬರುತ್ತಿವ ಮಾತುಗಳೆಲ್ಲ ಸುಳ್ಳು’’ ಎನ್ನುತ್ತಾ ಮಾತು ಆರಂಭಿಸಿದರು ಹರ್ಷಿಕಾ.
‘‘ಫೋಟೊಶೂಟ್‌ಗಾಗಿ ಮುಂಬೈಗೆ ಹೋಗಿದ್ದು ನಿಜ. ಹಾಗೆಂದು ನಾನು ಬಾಲಿವುಡ್ ಚಿತ್ರಗಳಲ್ಲಿ ಬಿಜಿಯಾಗಿದ್ದೀನಿ ಎಂಬುದು ಗಾಳಿಸುದ್ದಿ. ಯಾರು ಆ ಸುದ್ದಿಯನ್ನು ಹಬ್ಬಿಸಿದರೋ ಗೊತ್ತಿಲ್ಲ. ಬಾಲಿವುಡ್‌ನಲ್ಲಿ ಅಭಿನಯಿಸುತ್ತಿರುವೆ ಎಂದು ನಾನೆಲ್ಲೂ ಹೇಳಿಕೊಂಡಿಲ್ಲ.
ಕನ್ನಡದ ‘ರೇ’ ಚಿತ್ರದ ಬಳಿಕ, ತೆಲುಗಿನ ಚಿತ್ರವೊಂದಕ್ಕೆ ಸಹಿ ಹಾಕಿದ್ದೆ. ಒಂದು ಚಿತ್ರದ ಪ್ರಮೋಷನ್ ಹಾಗೂ ಮತ್ತೊಂದರ ಶೂಟಿಂಗ್ ಇದ್ದಿದ್ದರಿಂದ ಎರಡೂ ಕಡೆಗೆ ಓಡಾಡಬೇಕಾಯಿತು. ಹಾಗಾಗಿ ಎಲ್ಲೂ ಕಾಣಿಸಿಕೊಳ್ಳಲಾಗಲಿಲ್ಲ.
ಈ ನಡುವೆ ಪೋಟೊಶೂಟ್‌ಗಾಗಿ ಹೋಗಿದ್ದು ಊಹಾಪೋಹಕ್ಕೆ ಕಾರಣವಿರಬಹುದು. ನನ್ನ ನಟನೆ ಆರಂಭವಾಗಿದ್ದೇ ಕನ್ನಡದಿಂದ. ಹೀಗಿರುವಾಗ ಕನ್ನಡದತ್ತ ಬೆನ್ನು ತಿರುಗಿಸುವುದುಂಟೆ? ಇಲ್ಲಿ ಸವಾಲಿನ ಪಾತ್ರಗಳಿಗೆ ಎದುರು ನೋಡುತ್ತಿದ್ದೇನೆ’’ ಎಂದರು.
‘‘ಬೇರೆ ಬೇರೆ ಚಿತ್ರರಂಗದ ನಿರ್ದೇಶಕರು ಮತ್ತು ನಿರ್ಮಾಪಕರು ನನ್ನನ್ನು ಸಂಪರ್ಕಿಸಿ ನಿಮ್ಮ ಫೋಟೊಗಳನ್ನು ಕಳುಹಿಸಿ ಎಂದು ಹೇಳುತ್ತಿದ್ದರು. ಹಾಗಾಗಿ ಮುಂಬೈಗೆ ಹೋಗಿ ಫೋಟೊಶೂಟ್ ಮಾಡಿಸಿದೆ.
ಈ ವೇಳೆ ನಿರ್ದೇಶಕ ಮಧುರ್ ಭಂಡಾರ್ಕರ್ ಸೇರಿದಂತೆ ಕೆಲವರನ್ನು ಭೇಟಿ ಮಾಡಿದ್ದು ನಿಜ. ಹಾಗೆಂದು ನಾನ್ಯಾವ ಚಿತ್ರಗಳಿಗೂ ಇನ್ನೂ ಸಹಿ ಹಾಕಿಲ್ಲ’’ ಎಂದು ಹೇಳಿದರು.
‘‘ಹಿಂದಿ ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಬರುತ್ತಿವೆ. ಆದರೆ, ಪಾತ್ರಗಳು ಇಷ್ಟವಾಗದ ಕಾರಣ ತಿರಸ್ಕರಿಸಿದ್ದೇನೆ. ಗ್ಲಾಮರಸ್ ಆಗಿಯಷ್ಟೇ ಕಾಣಿಸಿಕೊಳ್ಳುವಂತಹ ಪಾತ್ರಗಳ ಬದಲು, ನಟನೆಯ ಮೂಲಕವೂ ಗಮನ ಸೆಳೆಯುವ ಪಾತ್ರಗಳಿಗಾಗಿ ಕಾಯುತ್ತಿದ್ದೇನೆ.
ತಂಗಿ ಪಾತ್ರ ಸೇರಿದಂತೆ ಇದುವರೆಗೆ ಗ್ಲಾಮರಸ್ ಅಲ್ಲದ ಅನೇಕ ಪಾತ್ರಗಳನ್ನು ಮಾಡಿದ್ದೇನೆ. ಸೋಲುಂಡಿರುವ ಚಿತ್ರಗಳಿಂದ ಪಾಠ ಕಲಿತಿದ್ದೇನೆ. ಹಾಗಾಗಿ ಅಭಿನಯಕ್ಕೆ ಆದ್ಯತೆ ನೀಡುವ ಪಾತ್ರಗಳಿಗೆ ಇನ್ನು ಮುಂದೆ ಹೆಚ್ಚು ಒತ್ತು ನೀಡಲು ನಿರ್ಧರಿಸಿದ್ದೇನೆ’’ ಎಂದ ಹರ್ಷಿಕಾ ಈಚೆಗೆ ತೆಲುಗಿನ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರಂತೆ.
‘‘ನಾನು ಸದಾ ಬಿಜಿಯಾಗಿರಲು ಬಯಸುವವಳು. ನನ್ನದೇ ಒಂದು ಈವೆಂಟ್ ಮೇನೇಜ್‌ಮೆಂಟ್ ಕಂಪೆನಿ ಇದೆ. ಚಿತ್ರಗಳ ಶೂಟಿಂಗ್ ಜತೆಗೆ, ಕಂಪೆನಿ ಕೆಲಸದಲ್ಲೂ ನಾನು ತೊಡಗಿಕೊಂಡಿರುತ್ತೇನೆ. ಜತೆಗೆ, ಪ್ರವಾಸವೆಂದರೆ ನನಗೆ ಬಲು ಇಷ್ಟ. ಬಿಡುವಿದ್ದಾಗ ಸ್ನೇಹಿತರ ಜೊತೆಗೆ ಸುತ್ತುತ್ತಿರುತ್ತೇನೆ’ ಎಂದರು.
Comments are closed.