ಚಿತ್ರ: ನನ್ನ ನಿನ್ನ ಪ್ರೇಮಕಥೆ
ನಿರ್ಮಾಣ: ಆನಂದ ಸಿ ನ್ಯಾಮಗೌಡ ನಿರ್ದೇಶನ: ಶಿವು ಜಮಖಂಡಿ
ತಾರಾಗಣ: ವಿಜಯ ರಾಘವೇಂದ್ರ, ನಿಧಿ ಸುಬ್ಬಯ್ಯ, ತಿಲಕ್, ಸುಧಾ ಬೆಳವಾಡಿ ಮತ್ತಿತರರು.
ಆತ ತನ್ನ ಪ್ರೀತಿ ಉಳಿಸಿಕೊಳ್ಳಲು ಎಷ್ಟು ಸಾಧ್ಯವೋ ಅಷ್ಟು ಹೋರಾಡುತ್ತಾನೆ. ಅದಕ್ಕಾಗಿ ಆತ ಪಡುವ ಕಷ್ಟ ಒಂದೆರಡಲ್ಲ. ಆದರೆ, ಆತನ ಪ್ರೀತಿಗೆ ಅಡೆತಡೆಗಳು ಎದುರಾಗುತ್ತಲೇ ಇರುತ್ತವೆ. ಆತ ಒಬ್ಬ ಸಾಮಾನ್ಯ ವ್ಯಕ್ತಿ. ಆದರೆ ಆತ ಪ್ರೀತಿಸಿದ ಹುಡುಗಿ ಮಾತ್ರ ಶ್ರೀಮಂತ ಕುಟುಂಬದವಳು. ಇವನ ಪ್ರೀತಿಗೆ ಮುಳುವಾಗಿರುವ ಏಕೈಕ ಅಂಶವೆಂದರೆ ಅದು ಶ್ರೀಮಂತಿಕೆ ಹಾಗೂ ಆಕೆಯ ಅಣ್ಣ. ಆರ್ಕೆಸ್ಟ್ರಾದಲ್ಲಿ ಹಾಡುತ್ತಾ, ಚೆಂದಗೆ ಮದರಂಗಿ ಬಿಡಿಸುತ್ತಾ ಹಾಯಾಗಿದ್ದ ಆತನ ಹೃದಯದಕ್ಕೆ ಆಕೆ ಯಾವಾಗ ಪ್ರೀತಿಯ ರಂಗೋಲಿ ಬಿಡಿಸುತ್ತಾಳ್ಳೋ ಅಂದಿನಿಂದ ಆತನಿಗೆ ಸಮಸ್ಯೆ ಶುರುವಾಗುತ್ತದೆ. ಅದು ಪ್ರೇಮಿಗಳಿಗೆ ಎದುರಾಗುವ ಸಹಜ ಸಮಸ್ಯೆ. ಆದರೆ, ಈ ಸಹಜ ಸಮಸ್ಯೆಯನ್ನು ಬಗೆಹರಿಸಿಕೊಂಡು ಹೊರಬರಲು ಆತ ಪಡುವ ಪಾಡು ಒಂದಾ, ಎರಡಾ. ಒಂದು ಹಂತದಲ್ಲಿ ಆತ ನಿಸ್ಸಹಾಯಕನಾಗುತ್ತಾನೆ, ಆಕೆಯ ಕ್ರೂರಿ ಅಣ್ಣನೆದುರು ಆತನಿಗೆ ಏನು ಮಾಡಬೇಕೆಂದು ತೋಚುವುದಿಲ್ಲ. ಹಾಗಾದರೆ ಪ್ರೀತಿ ದೂರವಾಗುತ್ತಾ, ರಾಧೆ-ಶ್ಯಾಮ್ ಬೇರಾಗುತ್ತಾರಾ ಎಂಬ ನಿಮ್ಮ ಕುತೂಹಲದ ಪ್ರಶ್ನೆಗಳಿಗೆ ಇಲ್ಲಿ ನಾವು ಉತ್ತರಿಸುವುದಿಲ್ಲ.
“ನನ್ನ ನಿನ್ನ ಪ್ರೇಮಕಥೆ’ ಸಿನಿಮಾ ಇಂಟರ್‌ವಲ್ ಗೆ ಬಂದು ನಿಲ್ಲುವ ಹೊತ್ತಿಗೆ ನಿಮಗೆ ಈ ಸಿನಿಮಾ ಹೀಗೆ ಸಾಗಬಹುದು ಎಂಬ ಒಂದು ನಿರ್ಧಾರಕ್ಕೆ ಬಂದು ಬಿಡುತ್ತೀರಿ. ನಿರ್ದೇಶಕ ಶಿವು ಜಮಖಂಡಿ ಆ ಮಟ್ಟಿಗೆ ಕನ್ನಡ ಪ್ರೇಕ್ಷಕರಿಗೆ ಒಂದು ಚಿರಪರಿಚಿತ ಕಥೆಯನ್ನು ಈ ಸಿನಿಮಾ ಮೂಲಕ ಹೇಳಿದ್ದಾರೆ. ಕುಟುಂಬಗಳನ್ನು ದೂರವಿಟ್ಟು ಬರುತ್ತಿರುವ ಲವ್‌ಸ್ಟೋರಿಗಳ ನಡುವೆ “ನನ್ನ ನಿನ್ನ ಪ್ರೇಮಕಥೆ’ ಒಂದು ತುಂಬಿದ ಮನೆಯ ಕಥೆ. ತುಂಬಿದ ಮನೆಯಲ್ಲಿ ಎಲ್ಲರೂ ಒಳ್ಳೆಯವರಾಗಿರಬೇಕಿಲ್ಲ.
ತಂಗಿಯ ಆಸೆಯನ್ನು ಒಪ್ಪಲೇಬೇಕೆಂಬ ನಿಯಮವೂ ಇಲ್ಲ. ಈ ಮನೆಯಲ್ಲೂ ಅಂತಹ ಒಬ್ಬ ಅಣ್ಣ ಇರುತ್ತಾನೆ. ಮುಗ್ಧ ಪ್ರೇಮಿಗಳ ಪ್ರೀತಿಗೆ ಆತನೇ ವಿಲನ್. ಇಷ್ಟು ಹೇಳಿದ ಮೇಲೆ ನಿಮಗೆ ಒಂದಷ್ಟು ಹಳೆಯ ಕನ್ನಡ ಸಿನಿಮಾಗಳು ನೆನಪಾಗಬಹುದು. ತಂಗಿ ಪ್ರೀತಿಗೆ ವಿಲನ್ ಆಗುವ ಅಣ್ಣನನ್ನು ಈ ಹಿಂದೆ ನೀವು ಅನೇಕ ಚಿತ್ರಗಳಲ್ಲಿ ನೋಡಿರುತ್ತೀರಿ. ಆ ಮಟ್ಟಿಗೆ “ನನ್ನ ನಿನ್ನ ಪ್ರೇಮಕಥೆ’ ಹಳೆಯ ಸಿನಿಮಾಗಳನ್ನು ಮೆಲುಕು ಹಾಕಿಸುತ್ತಾ ಸಾಗುತ್ತದೆ.
ಮನೆಯವರ ವಿರೋಧವಿದ್ದಾಗ ಪ್ರೇಮಿಗಳಿಗೆ ಇರೋದು ಎರಡೇ ಆಪ್ಶನ್; ಒಂದಾ ಮನೆಯವರನ್ನು ಕಾಡಿಬೇಡಿಯಾದರೂ ಒಪ್ಪಿಸಿ ಮದುವೆಯಾಗಬೇಕು, ಇಲ್ಲಾ, ಮನೆಬಿಟ್ಟು ಓಡಿಹೋಗಬೇಕು. ಓಡಿಹೋದರೆ ಅಲ್ಲಲ್ಲಿ ಅಡೆತಡೆಗಳು, ಓಡಾಟ, ಹೊಡೆದಾಟ, ಗೇಮ್ ಪ್ಲ್ರಾನ್…. ಒಂದು ಸಾಮಾನ್ಯ ಲವ್‌ಸ್ಟೋರಿ ಇದನ್ನು ಬಿಟ್ಟು ಆಚೆ ಬರೋದಿಲ್ಲ. “ನನ್ನ ನಿನ್ನ ಪ್ರೇಮಕಥೆ’ ಕೂಡಾ ಈ ಪರಿಧಿಯೊಳಗೆ ಸಾಗುವ ಸಿನಿಮಾ. ಇಲ್ಲೂ ಓಡಾಟ, ಹೊಡೆದಾಟ, ಮೋಸದಾಟ … ಎಲ್ಲವೂ ಇದೆ. ಒಬ್ಬ ಅಮಾನಯಕ ಪ್ರೇಮಿ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಏನೆಲ್ಲಾ ಮಾಡಬಹುದೆಂಬುದನ್ನು ಡಿಸೈನ್ ಡಿಸೈನ್ ಆಗಿ ತೋರಿಸಲಾಗಿದೆಯಷ್ಟೇ.
ಹಾಗಾಗಿ, ನಿಮಗೆ “ನನ್ನ ನಿನ್ನ ಪ್ರೇಮಕಥೆ’ ಒಂದು ಸಾಮಾನ್ಯ ಸಿನಿಮಾ. ಈ ಸಿನಿಮಾದಲ್ಲಿ ನಿಮಗೆ ಹೊಸತಾಗಿ ಕಂಡರೆ ಅದು ಉತ್ತರ ಕರ್ನಾಟಕದ ಭಾಷೆ. ಇಡೀ ಸಿನಿಮಾ ಉತ್ತರ ಕರ್ನಾಟಕ ಬ್ಯಾಕ್ ಡ್ರಾಪ್‌ನಲ್ಲಿ ಸಾಗುತ್ತದೆ. ಹಾಗಾಗಿ, ಆ ಭಾಷೆ ನಿಮಗೆ ಖುಷಿಕೊಡಬಹುದು. ಜೊತೆಗೆ ಒಂದಷ್ಟು ಸುಂದರ ಲೊಕೇಶನ್‌ಗಳು ಇಷ್ಟವಾಗುತ್ತದೆ. ಕಾಮಿಡಿ ಸೇರಿದಂತೆ ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಿ ಸಿನಿಮಾವನ್ನು ಮತ್ತಷ್ಟು ಚುರುಕು ಮಾಡುವ ಅವಕಾಶ ಕೂಡಾ ನಿರ್ದೇಶಕರಿಗಿತ್ತು. ಆದರೆ, ಅದಿಲ್ಲಿ ಆಗಿಲ್ಲ. ಕಾಮಿಡಿ ನಟ ಚಿಕ್ಕಣ್ಣ ಇದ್ದರೂ ಅವರನ್ನು ಅಷ್ಟಾಗಿ ಬಳಸಿಕೊಂಡಿಲ್ಲ.
ನಾಯಕ ವಿಜಯ ರಾಘವೇಂದ್ರ ಎಂದಿನಂತೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರೀತಿಯನ್ನು ಉಳಿಸಿಕೊಳ್ಳಲು ಕಷ್ಟಪಡುವ ಪ್ರೇಮಿಯಾಗಿ ಇಷ್ಟವಾಗುತ್ತಾರೆ. ನಿಧಿ ಸುಬ್ಬಯ್ಯ ನಾಯಕಿಯಾಗಿ ನಟಿಸಿದ್ದಾರಷ್ಟೇ. ಅದು ಬಿಟ್ಟರೆ ಸುಧಾ ಬೆಳವಾಡಿ, ಗುರುರಾಜ್ ಹೊಸಕೋಟೆ, ತಿಲಕ್ ಸೇರಿದಂತೆ ಇತರರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಎರಡು ಹಾಡು ಇಷ್ಟವಾಗುತ್ತದೆ.
ರವಿಪ್ರಕಾಶ್ ರೈ
-ಉದಯವಾಣಿ
Comments are closed.