ಓದೇಶ ಸಕಲೇಶಪುರ
‘ಸಿನಿಮಾಗಳಲ್ಲಿ ವ್ಯಕ್ತಿ ಪೂಜೆ ನಿಂತಾಗ ಒಳ್ಳೆಯ ಸಿನಿಮಾಗಳು ಬರಲು ಸಾಧ್ಯವಾಗುತ್ತದೆ’ ಎನ್ನುವ ಯೋಗೇಶ್ ಮಾಸ್ಟರ್ ‘ಮರಳಿ ಮನೆಗೆ’ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ.
ರಹ ಮತ್ತು ನಾಟಕಗಳ ಮೂಲಕ ಗಮನ ಸೆಳೆದಿರುವ ಲೇಖಕ ಯೋಗೇಶ್ ಮಾಸ್ಟರ್ ಈಗ ಸಿನಿಮಾದತ್ತ ಮುಖ ಮಾಡಿದ್ದಾರೆ. ‘ಮರಳಿ ಮನೆಗೆ’ ಎಂಬ ತಮ್ಮ ಕಾದಂಬರಿಯನ್ನು ಅದೇ ಶೀರ್ಷಿಕೆಯಲ್ಲಿ ಬೆಳ್ಳಿಪರದೆ ಮೇಲೆ ತರುವ ತವಕದಲ್ಲಿರುವ ಅವರು, ಈಗಾಗಲೇ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ.
ಯೋಗೇಶ್ ಅವರ ಕುಟುಂಬಕ್ಕೂ ಸಿನಿಮಾಗೂ ಹಿಂದಿನಿಂದಲೂ ನಂಟಿದೆ. ಅವರ ಸೋದರತ್ತೆ ಶಾಂತಾ ಪ್ರಕಾಶ್ ಗೀತಪ್ರಿಯ ನಿರ್ದೇಶನದ ‘ಪ್ರೇಮ ಜ್ವಾಲೆ’ ಚಿತ್ರದಲ್ಲಿ ಅನಂತನಾಗ್ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದರು. ಅವರ ಮಾವ ಸಿನಿಮಾ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದರು.
‘ಚಿಕ್ಕವನಿದ್ದಾಗಿಂದಲೂ ಸಿನಿಮಾ ಬಗ್ಗೆ ಆಸಕ್ತಿ ಇತ್ತು. ಆದರೆ, ಸಿನಿಮಾದಲ್ಲಿ ಕೆಲಸ ಮಾಡಲು ಆರಂಭಿಸುವ ಹೊತ್ತಿಗೆ ಕುಟುಂಬದವರು ನಟನೆ ಮತ್ತು ನಿರ್ಮಾಣ ಕೆಲಸವನ್ನು ನಿಲ್ಲಿಸಿ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡರು’ ಎನ್ನುವ ಯೋಗೇಶ್, ‘ಮರಳಿ ಮನೆಗೆ’ ಸಿನಿಮಾಕ್ಕೂ ಮುಂಚೆ ‘ಆನಂದ ವನ’, ‘ಕ್ಷಮೆಯಿರಲಿ’ ಸೇರಿದಂತೆ ಹಲವು ಕಿರುಚಿತ್ರಗಳನ್ನು ಮಾಡಿದ್ದಾರಂತೆ.
‘ಘರ್ ವಾಪಸಿ’ ಕಥೆ
‘ಮರಳಿ ಮನೆಗೆ’ ಕಾದಂಬರಿಯನ್ನು ಯೋಗೇಶ್ ಬರೆದದ್ದು ಪಿಯುಸಿಯಲ್ಲಿದ್ದಾಗ. ದೇಶದಲ್ಲೀಗ ಚರ್ಚೆಯಾಗುತ್ತಿರುವ ‘ಘರ್ ವಾಪಸಿ’ ಕಾದಂಬರಿಯ ಕಥಾವಸ್ತು. ಹದಿನೆಂಟು ವರ್ಷದ ಹಿಂದೆ ಅದನ್ನು ನಾಟಕ ರೂಪಕ್ಕಿಳಿಸಿ ಮೌಂಟ್ ಕಾರ್ಮೆಲ್ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳಿಗೆ ‘ಆನಂದ ಕಂದ’ ಎಂಬ ನಾಟಕ ಮಾಡಿಸಿದ್ದರು. ಅದೇ ನಾಟಕವನ್ನು ಸಿನಿಮಾದಂತಹ ಪರಿಣಾಮಕಾರಿ ಮಾಧ್ಯಮದಲ್ಲಿ ಹೇಳಬೇಕು ಅನ್ನಿಸಿ ಈಗ ಸಿನಿಮಾ ಮಾಡಿದ್ದಾರೆ. ನಿರ್ದೇಶನದ ಜತೆಗೆ ಸಾಹಿತ್ಯ, ಸಂಗೀತ, ಸಂಭಾಷಣೆ ಜವಾಬ್ದಾರಿಯನ್ನು ಅವರೇ ನಿರ್ವಹಿಸಿದ್ದಾರೆ.
ಚಿತ್ರದ ತಯಾರಿ ಮಾಡಿಕೊಳ್ಳುವಾಗ ‘ನಾವು ನಿಮ್ಮ ಚಿತ್ರಕ್ಕೆ ಬಂಡವಾಳ ಹಾಕುತ್ತೇವೆ’ ಎಂದು ಮುಂದೆ ಬಂದಿದ್ದ ಕೆಲವರು ಅಂತಿಮ ಗಳಿಗೆಯಲ್ಲಿ ಸುಳಿವು ಕೂಡ ನೀಡದೆ ಜಾರಿಕೊಂಡರಂತೆ. ಈಗೇನು ಮಾಡುವುದು ಎಂಬ ಯೋಚನೆಯಲ್ಲಿದ್ದಾಗ, ಅವರ ಗೆಳೆಯರೂ ಆದ ‘ನಿಖಿಲ್ ಹೋಮ್ ಸ್ಕ್ರೀನ್ಸ್’ನ ಲಿಂಗೇಗೌಡ ‘ನಾನು ನಿಮ್ಮ ಚಿತ್ರಕ್ಕೆ ಹಣ ಹಾಕುತ್ತೇನೆ’ ಎಂದು ಮುಂದೆ ಬಂದರಂತೆ.
‘ಘರ್ ವಾಪಸಿ ಮತ್ತು ಪೌರೋಹಿತ್ಯಕ್ಕೆ ಮೊದಲಿನಿಂದಲೂ ನನ್ನ ವಿರೋಧವಿದೆ. ನನ್ನ ಸಿನಿಮಾದಲ್ಲೂ ಅದನ್ನೇ ಹೇಳುತ್ತಿದ್ದು, ಕಥೆ ಎಲ್ಲರಿಗೂ ಪಥ್ಯವಾಗಲಿದೆ’ ಎಂಬ ವಿಶ್ವಾಸ ನಿರ್ದೇಶಕರದು.
‘ಸೇತು’ ಸಿನಿಮಾ
ನನ್ನದು ಪ್ರಯೋಗಾತ್ಮಕ ಸಿನಿಮಾ ಅಲ್ಲ. ಸಿದ್ಧ ಸೂತ್ರಗಳಡಿಯೂ ಬರುವುದಿಲ್ಲ. ನಿರೂಪಣಾ ತಂತ್ರದಲ್ಲಿ ರಂಗಭೂಮಿ ಹಾಗೂ ಸಿನಿಮಾ ತಂತ್ರಗಳನ್ನು ಸಹ ಬಳಸಿಕೊಂಡಿದ್ದೇನೆ. ಹಾಗಾಗಿ ನಮ್ಮದು ಒಂದು ರೀತಿಯಲ್ಲಿ ‘ಸೇತು ಚಿತ್ರ’ ಎಂದು ಯೋಗೇಶ್ ಹೇಳುತ್ತಾರೆ.
‘ಇದು ಅತ್ಯಂತ ಪ್ರಯೋಗಶೀಲವಾದ ಹಾಗೂ ಎಲ್ಲರೂ ನೋಡಲೇಬೇಕಾದ ಚಿತ್ರ ಎಂದು ಹೇಳಿಕೊಳ್ಳುವ ಎದೆಗಾರಿಕೆ ನನಗಿಲ್ಲ. ಆದರೆ, ಹೇಳಲೇಬೇಕಾದ ವಿಷಯವನ್ನು ಚಿತ್ರದ ರೂಪದಲ್ಲಿ ಹೇಳುತ್ತಿದ್ದೇನೆ. ಚಿತ್ರದಲ್ಲಿ ಶ್ರುತಿ, ಸುಚೇಂದ್ರ ಪ್ರಸಾದ್, ಅರುಂಧತಿ ಜಟ್ಕರ್, ನಾಗೇಶ್ ಗೌಡ, ಶಂಕರ್ ಆರ್ಯನ್, ಸಹನಾ ನಟಿಸಿದ್ದಾರೆ.
ಅತಿಥಿ ಪಾತ್ರವೊಂದರಲ್ಲಿ ನಟ ಅನಿರುದ್ಧ್ ಇದ್ದಾರೆ. ಚಿತ್ರವನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡುವ ಆಲೋಚನೆ ಇದೆ’ ಎನ್ನುತ್ತಾರೆ.
‘ಸಿನಿಮಾಗಳಲ್ಲಿ ವ್ಯಕ್ತಿಪೂಜೆ ಫ್ಯೂಡಲಿಸಂ ಇದ್ದಂತೆ. ವ್ಯಕ್ತಿ ಪೂಜೆ ನಿಂತಾಗ ಒಳ್ಳೆಯ ಸಿನಿಮಾಗಳು ಬರಲು ಸಾಧ್ಯವಾಗುತ್ತದೆ’ ಎನ್ನುವ ಅನಿಸಿಕೆ ಅವರದು.
Comments are closed.