ಬೆಂಗಳೂರು: ಮಹಾದಾಯಿ ನ್ಯಾಯಮಂಡಳಿ ರಾಜ್ಯದ ಮಧ್ಯಂತರ ಅರ್ಜಿ ತಿರಸ್ಕರಿಸಿರುವುದನ್ನು ಖಂಡಿಸಿ ನಡೆಯುತ್ತಿರುವ ‘ಕರ್ನಾಟಕ ಬಂದ್’ ಬಿಸಿ ‘ಕಬಾಲಿ’ಗೂ ತಟ್ಟಿದೆ.
ಕನ್ನಡ ಚಿತ್ರರಂಗ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿರುವುದರಿಂದ ಚಿತ್ರಮಂದಿರಗಳು ಶನಿವಾರ ಮುಚ್ಚಿವೆ. ಆದರೆ, ಪರಭಾಷಾ ಚಿತ್ರಗಳು ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರಗಳ ಹೊರಭಾಗದ ಬೃಹತ್ ಕಟೌಟ್‌ಗಳನ್ನು ರಕ್ಷಿಸಿಕೊಳ್ಳುವುದು ಸದ್ಯ ಸುಲಭದ ಮಾತೇನಲ್ಲ.
‘ಕಬಾಲಿ’ ಚಿತ್ರ ಪ್ರದರ್ಶನಗೊಳ್ಳುತ್ತಿರುವ ಬೆಂಗಳೂರಿನ ಶೇಷಾದ್ರಿಪುರದ ನಟರಾಜ್ ಚಿತ್ರಮಂದಿರದ ಹೊರಭಾಗದಲ್ಲಿ ರಜಿನಿಕಾಂತ್ ಅವರ ಬೃಹತ್ ಕಟೌಟ್‌ಗಳನ್ನು ಹಾಕಲಾಗಿದೆ. ಈ ಕಟೌಟ್‌ಗಳ ರಕ್ಷಣೆಗೆ ಚಿತ್ರಮಂದಿರದ ಸಿಬ್ಬಂದಿ ‘ಹೊದಿಕೆ’ ತಂತ್ರ ಅನುಸರಿಸಿದ್ದಾರೆ!
ಬೃಹತ್ ಬ್ಯಾನರ್‌ಗಳನ್ನು ಕಟೌಟ್‌ಗಳ ಉದ್ದಕ್ಕೂ ಹೊದಿಕೆಯಂತೆ ಕಟ್ಟಲಾಗಿದೆ. ರಜಿನಿಕಾಂತ್ ಚಿತ್ರಗಳಿದ್ದ ಬ್ಯಾನರ್‌ಗಳನ್ನೂ ತಿರುವಿಹಾಕಿ ಕಟ್ಟಲಾಗಿದೆ. ಚಿತ್ರಮಂದಿರದ ಸುತ್ತಮುತ್ತ ಹಾಕಿದ್ದ ರಜಿನಿಕಾಂತ್ ಅಭಿಮಾನಿಗಳ ಚಿತ್ರಗಳಿದ್ದ ಬ್ಯಾನರ್‌ಗಳನ್ನೂ ‘ಉಲ್ಟಾ’ ಮಾಡಲಾಗಿದೆ.
‘ಕಬಾಲಿ’ ಚಿತ್ರ ಬಿಡುಗಡೆಯಾದ ದಿನ ಕನ್ನಡಪರ ಸಂಘಟನೆಗಳ ಸದಸ್ಯರು ಚಿತ್ರಮಂದಿರದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ರಜಿನಿಕಾಂತ್ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳ ಸದಸ್ಯರ ಮಧ್ಯೆ ಘರ್ಷಣೆ ನಡೆದಿತ್ತು.
ಶನಿವಾರ ‘ಕರ್ನಾಟಕ ಬಂದ್’ ಇರುವುದರಿಂದ ಮತ್ತೆ ಅಂತಹ ಘರ್ಷಣೆಯಾಗದಂತೆ ಮುನ್ನೆಚ್ಚರಿಕೆ ವಹಿಸಿರುವ ಚಿತ್ರಮಂದಿರದ ಸಿಬ್ಬಂದಿ ಈ ರೀತಿಯ ಹೊದಿಕೆ ತಂತ್ರಕ್ಕೆ ಮುಂದಾಗಿದ್ದಾರೆ!
Comments are closed.