ಮಣಿರತ್ನಂರ ಚಿತ್ರವನ್ನ ರಿಜೆಕ್ಟ್ ಮಾಡಿಬಿಟ್ರಾ?
ಹಾಗಂತ ಬಹಳಷ್ಟು ಜನ ಆಶ್ಚರ್ಯ ಪಟ್ಟಿದ್ದರು. ಆದರೆ, ಅಷ್ಟರಲ್ಲಾಗಲೇ ಆಕೆ ನಿರ್ಧಾರ ಮಾಡಿದ್ದಾಗಿತ್ತು. ಈ ಚಿತ್ರ ಮುಗಿಯುವವರೆಗೂ ಬೇರೆ ಚಿತ್ರವನ್ನು ಒಪ್ಪಿಕೊಳ್ಳುವುದಿಲ್ಲ ಎಂದು. ಅದರಂತೆ, ಅವರು ಯಾವ ಚಿತ್ರವನ್ನೂ ಒಪ್ಪಲಿಲ್ಲ. ಈಗ ಆ ಚಿತ್ರ ಬಿಡುಗಡೆಯಾಗಿದೆೆ. ಮೊನ್ನೆ ಶುಕ್ರವಾರ ಗ್ರಾಂಡ್ ರಿಲೀಸ್…
ಅಂದ ಹಾಗೆ, ಚಿತ್ರದ ಹೆಸರು, ಮೊಹೆಂಜೋದಾರೋ ಮತ್ತು ಮೇಲಿನ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಪೂಜಾ ಹೆಗ್ಡೆ.
ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ- ಹೃತಿಕ್ ರೋಶನ್ ಜೊತೆಗೆ ಮೊಹೆಂಜೋದಾರೋ ಚಿತ್ರದಲ್ಲಿ ನಟಿಸಿರುವುದು ಬೇರೆ ಯಾರೂ ಅಲ್ಲ, ಪೂಜಾ ಹೆಗ್ಡೆ ಎಂಬ ಕನ್ನಡತಿ ಎಂದು! ಪೂಜಾ ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಮುಂಬೈನಲ್ಲಾದರೂ, ಮೂಲ ಇರುವುದು ಮಂಗಳೂರಿನಲ್ಲಿ. ಮುಂಬೈನಲ್ಲಿ ಹಲವಾರು ವರ್ಷಗಳಿಂದ ಪೂಜಾ ಅವರ ಕುಟುಂಬ ನೆಲೆಸಿರುವುದರಿಂದ, ಓದು, ಬಾಲ್ಯ ಕಳೆದಿದ್ದೆಲ್ಲ ಅದೇ ಊರಿನಲ್ಲಿ. 2010ರವರೆಗೂ ಬಹುಶಃ ಪೂಜಾ ಹೆಗ್ಡೆೆ ಬಗ್ಗೆ ಹೆಚ್ಚು ಜನರಿಗೆ ಗೊತ್ತಿರಲಿಲ್ಲ. ಯಾವಾಗ 2010ರಲ್ಲಿ ಮಿಸ್ ಇಂಡಿಯೂ ಯೂನಿವರ್ಸ್ ಸ್ಪರ್ಧೆಯಲ್ಲಿ ಪೂಜಾ ರನ್ನರ್ ಅಪ್ ಆದರೋ ಮತ್ತು ಅದೇ ವರ್ಷ ಯಾವಾಗ ಮಿಸ್ ಇಂಡಿಯಾ ಸೌಥ್ ಗ್ಲಾಮರಸ್ ಹೇರ್ ಎಂಬ ಪಟ್ಟ ಅಲಂಕರಿಸಿದರೋ, ಆಗಿನಿಂದ ಪೂಜಾ ಹೆಸರು ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಚ್ಚು ಚಾಲ್ತಿಗೆ ಬಂತು.
ಮುಂಬೈನಲ್ಲಿ ಒಂದು ಮಾತಿದೆ. ಮಾಡೆಲಿಂಗ್‌ಗೆ ಬಂದವರು ಸಿನೆಮಾಗೆ ಬರುವುದಿಲ್ಲವಾ ಅಂತ. ಅದೇ ರೀತಿ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಪೂಜಾ, ಬಾಲಿವುಡ್‌ಗೆ ಯಾವಾಗ ಬರಬಹುದು ಎಂದು ಎಲ್ಲರೂ ಕಾದಿದ್ದೇ ಬಂತು. ಆದರೆ, ಅಷ್ಟರಲ್ಲಿ ತಮಿಳು ನಿರ್ದೇಶಕ ಮಿಸ್ಕಿನ್, ಪೂಜಾರನ್ನು ಹೈಜಾಕ್ ಮಾಡಿಕೊಂಡು, ತಮ್ಮ ಮುಗಮೂಡಿ ಚಿತ್ರಕ್ಕೆ ಜೀವಾ ಎದುರು ನಾಯಕಿಯನ್ನಾಗಿ ಮಾಡಿದರು.
ಆ ನಂತರ ಪೂಜಾಗೆ ಕರೆ ಬಂದಿದ್ದು ತೆಲುಗು ಚಿತ್ರದಿಂದ. ನಾಗಚೈತನ್ಯ ಅಭಿನಯದ ಒಕ ಲೈಲಾ ಕೋಸಂ ಚಿತ್ರದಲ್ಲಿ ಪೂಜಾಗೆ ನಾಯಕಿ ಪಾತ್ರ ಸಿಕ್ಕಿತ್ತು. ಅದೇ ವರ್ಷ ಮುಕುಂದ ಎಂಬ ಇನ್ನೊಂದು ತೆಲುಗು ಚಿತ್ರದಲ್ಲಿ ಪೂಜಾ ನಾಯಕಿಯಾದರು. ಹೀಗೆ ಒಂದೇ ವರ್ಷದಲ್ಲಿ ಎರಡು ತೆಲುಗು ಸಿನೆಮಾಗಳಲ್ಲಿ ನಟಿಸಿದ ಪೂಜಾ, ಮುಂದೇನು ಎಂದು ಯೋಚಿಸುವಷ್ಟರಲ್ಲೇ, ಆಕೆಯನ್ನು ನಿರ್ದೇಶಕ ಅಶುತೋಶ್ ಗೊವಾರಿಕರ್ ಪತ್ನಿ ಸುನೀತಾ ಯಾವುದೋ ಜಾಹೀರಾತಿನಲ್ಲಿ ಗಮನಿಸಿದರಂತೆ. ಮೊಹೆಂಜೋದಾರೋ ಚಿತ್ರದಲ್ಲಿನ ನಾಯಕಿ ಪಾತ್ರಕ್ಕೆ ಪೂಜಾ ಸೆಟ್ ಆಗಬಹುದು ಎಂದು ಆಡಿಷನ್‌ಗೆ ಕರೆಸಿದರಂತೆ. ಆಡಿಷನ್‌ನಲ್ಲಿ ಪಾಸ್ ಆದ ಪೂಜಾಗೆ ನಾಯಕಿ ಪಾತ್ರ ಸಿಕ್ಕಿತ್ತು.
ಮೊಹೆಂಜೋದಾರೋ ಬಿಡುಗಡೆಯಾಗುವವರೆಗೂ ಬೇರೆ ಚಿತ್ರದಲ್ಲಿ ನಟಿಸಬಾರದು ಮತ್ತು ಆ ಚಿತ್ರದಲ್ಲಿ ಪೂರ್ತಿಯಾಗಿ ತೊಡಗಿಸಿಕೊಳ್ಳಬೇಕು ಎಂದು ಪೂಜಾ ಹೆಗಡೆ ನಿರ್ಧಾರ ಮಾಡಿದ್ದು ಆಗಲೇ.
ಈ ಚಿತ್ರದ ಬಗ್ಗೆ ಎಲ್ಲರಿಗೂ ನಿರೀಕ್ಷೆ ಇದೆ ಮತ್ತು ಇದರಲ್ಲಿ ನಟಿಸಿರುವ ಕನ್ನಡತಿಯ ಬಗ್ಗೆ ಹೆಮ್ಮೆಯಂತೂ ಇದ್ದೇ ಇದೆ.
-ಉದಯವಾಣಿ
Comments are closed.