ಮಹೇಶ್ ಸುಖಧರೆ ನಿರ್ದೇಶನದ “ಹ್ಯಾಪಿ ಬರ್ತ್ಡೇ’ ಇದೀಗ ತೆರೆಗೆ ಬರಲು ಸಜ್ಜಾಗಿದೆ. ಚೆಲುವರಾಯಸ್ವಾಮಿ ಪುತ್ರ ಸಚಿನ್ಗೆ ಇದು ಚೊಚ್ಚಲ ಸಿನಿಮಾ. ಈಗಾಗಲೇ ಪಕ್ಕಾ ದೇಸಿ ಸಿನಿಮಾ ಅಂತ ಸುದ್ದಿಯಾಗಿರುವ ಈ ಚಿತ್ರ, ಈಗ ಹಾಡುಗಳ ಮೂಲಕವೂ ಗಮನಸೆಳೆದಿದೆ ಅನ್ನೋದು ವಿಶೇಷ. ಇದಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಈಗ ಹರಿಕೃಷ್ಣ ಹೆಚ್ಚು ಕಮ್ಮಿ ನೂರರ ಗಡಿಯಲ್ಲಿದ್ದಾರೆ! ಕನ್ನಡದ ಬಹುತೇಕ ಸ್ಟಾರ್ನಟರ ಚಿತ್ರಗಳಿಗೆ ಸಂಗೀತ ಕೊಟ್ಟಿರುವ ಹರಿಕೃಷ್ಣ, ಮೊದಲ ಬಾರಿಗೆ “ಹ್ಯಾಪಿ ಬರ್ತ್ಡೇ’ ಚಿತ್ರಕ್ಕೆ ಜನಪದ ಶೈಲಿಯ ಹಾಡುಗಳನ್ನು ಕೊಟ್ಟಿದ್ದಾರೆ. ಹಾಗಂತ, ಈಗಿನ ಟ್ರೆಂಡ್ಗೆ ತಕ್ಕಂತೆ ಹಾಡುಗಳಿಲ್ಲ ಎಂಬುದನ್ನು ಯಾರೂ ಅಂದುಕೊಳ್ಳಬೇಕಿಲ್ಲ. ಹಾಡುಗಳು ಈಗಷ್ಟೇ ಅಲ್ಲ, ಎಂದೆಂದಿಗೂ ಕೇಳುವಂತಹ ಮಧುರ ಹಾಡುಗಳನ್ನು ಕೊಟ್ಟಿದ್ದಾರೆ ಎಂಬುದು ನಿರ್ದೇಶಕ ಮಹೇಶ್ ಸುಖಧರೆ ಮಾತು. ಈ ಚಿತ್ರಕ್ಕೆ ಪಕ್ಕಾ ದೇಸೀ ಸೊಗಡಿರುವ ಸಂಗೀತ ಹಾಗು ಹಾಡು ಕೊಡಬೇಕು ಎಂಬ ಷರತ್ತಿನಿಂದಲೇ ಹರಿಕೃಷ್ಣ ಅವರ ಜತೆ ಕೆಲಸ ಮಾಡಿದ್ದೆ. ಅವರು ನನ್ನ ಸವಾಲು ಸ್ವೀಕರಿಸಿ, ನನ್ನ ನಿರೀಕ್ಷೆಗೂ ಹೆಚ್ಚು ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ.
ಇಲ್ಲಿ ಸಾಹಿತ್ಯ ಕೂಡ ಪಕ್ಕಾ ನಮ್ಮತನದಲ್ಲೇ ಇದೆ. ಕೇಳುಗರಿಗೆ ಈಗಾಗಲೇ ಹಾಡುಗಳು ಇಷ್ಟವಾಗಿದ್ದು, ಎಲ್ಲೆಡೆಯಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಂದು “ನಾಗರಹಾವು’, ಇನ್ನೊಂದು “ಪುಟ್ನಂಜ’ ಮತ್ತೂಂದು “ಜನುಮದ ಜೋಡಿ’ ಚಿತ್ರಗಳ ಗೀತೆಗಳು ಹೇಗೆ ಇಂದಿಗೂ ಎವರ್ಗ್ರೀನ್ ಆಗಿವೆಯೋ, ಹಾಗೆಯೇ “ಹ್ಯಾಪಿ ಬರ್ತ್ಡೇ’ ಚಿತ್ರದ ಹಾಡುಗಳೂ ಕೂಡ ವಿಶೇಷವೆನಿಸುವಷ್ಟರ ಮಟ್ಟಿಗೆ ಕೇಳುಗರನ್ನು ತಲುಪಿವೆ. ಕಥೆಗೆ ಪೂರಕವಾಗಿಯೇ ಸಂಗೀತವಿರಬೇಕು, ಗೀತ ಸಾಹಿತ್ಯ ಕೂಡ ಹಾಗೇ ಮೂಡಿಬರಬೇಕು ಎಂಬ ಮಾತಿನೊಂದಿಗೇ ಹರಿಕೃಷ್ಣ ಜತೆ ಚರ್ಚಿಸಿದ್ದೆ. ಹರಿ ತಮ್ಮ ಕೆಲಸದಲ್ಲಿ ಫೇಲ್ ಆಗಲಿಲ್ಲ. ನಾಗೇಂದ್ರಪ್ರಸಾದ್, ಕೆ.ಕಲ್ಯಾಣ್ ಹಾಗೂ ಕೃಷ್ಣೇಗೌಡರು ಸಾಹಿತ್ಯ ಕೂಡ ಚಿತ್ರಕಥೆಗೆ ಪೂರಕವಾಗಿವೆ. ಎಲ್ಲಾ ಹಾಡುಗಳು ಜನಪದಕ್ಕೆ ಅಂಟಿಕೊಂಡಿದ್ದರೂ, ಹೊಸ ರೀತಿಯಲ್ಲಿ ನಿನಾದ ಹುಟ್ಟಿಸುತ್ತವೆ. ಐದು ಹಾಡುಗಳಿಗಳನ್ನು ಆಯ್ಕೆ ಮಾಡಲು ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಹಾಡುಗಳನ್ನು ಮಾಡಿಸಲಾಗಿತ್ತು. ಆ ಪೈಕಿ ಬೆಸ್ಟ್ ಎನಿಸುವ ಹಾಡುಗಳನ್ನು ಆಯ್ಕೆ ಮಾಡಿಂಡಿದ್ದರಿಂದಲೇ ಇಂದು ಹಾಡುಗಳು ಹಿಟ್ ಆಗಿವೆ. ಪ್ರತಿ ಹಾಡಿನ ಸೌಂಡಿಂಗ್ ಕೂಡ ಫ್ರೆಶ್ ಎನಿಸಿದೆ ಎನ್ನುತ್ತಾರೆ ಸುಖಧರೆ.
ನನ್ನ ಹಿಂದಿನ “ಸಂಭ್ರಮ’, “ಸೈನಿಕ’ದಲ್ಲೂ ಹಾಡುಗಳಲ್ಲಿ ಸಂಭ್ರಮವಿತ್ತು. ಅದೇ ಸಂಭ್ರಮ, ಸೊಗಸು “ಹ್ಯಾಪಿ ಬರ್ತ್ಡೇ’ನಲ್ಲೂ ಇದೆ. ನಮ್ಮ ನೆಲದ ಹಾಡುಗಳ ಸಾಲಿಗೆ ಈ ಚಿತ್ರದ ಹಾಡುಗಳೂ ಸೇರಲಿವೆ ಎಂಬ ನಂಬಿಕೆ ಇದೆ. ಲವ್ಗೆ ಒತ್ತು ಇದ್ದಷ್ಟು ಆ್ಯಕ್ಷನ್ಗೂ ಇದೆ. ಆ್ಯಕ್ಷನ್ ಹಾಗೂ ಲವ್ಗೆ ಒತ್ತು ಇದ್ದಷ್ಟೂ ನಮ್ಮ ಸೊಗಡಿನ ಹಾಡಿಗೂ ಇದೆ. ಸ್ಟಂಟ್ ಮಾಸ್ಟರ್ ರವಿವರ್ಮ ಕಥೆ ಕೇಳಿಯೇ, ಹೊಸ ಬಗೆಯ ಸ್ಟಂಟ್ ಮಾಡಿಸಿದರು. ಅವರೇ ಇಂತಹ ಕಥೆಗೆ ಹೊಸತನದ ಸಾಹಿತ್ಯ, ಸಂಗೀತವಿದ್ದರೆ, ಚಿತ್ರದ ಕಲರ್ ಚೇಂಜ್ ಆಗುತ್ತೆ ಅಂದಿದ್ದರು. ಈಗ ಹಾಡು ಕೇಳಿ ಅವರೂ ಖುಷಿಯಾಗಿದ್ದಾರೆ. ಹರಿಕೃಷ್ಣ ಸ್ಟಾರ್ನಟರಿಗೆ ಆನೇಕ ರೆಫರೆನ್ಸ್ ಇಟ್ಟುಕೊಂಡು ಹಾಡು ಕಟ್ಟಿಕೊಟ್ಟವರು. ಆದರೆ, ಇಲ್ಲಿ ಯಾವುದೇ ರೆಫರೆನ್ಸ್ ಇಲ್ಲದೆಯೇ ವಿಭಿನ್ನವಾಗಿ ಹಾಡುಗಳು ಹುಟ್ಟಿಕೊಂಡಿವೆ. ಇದರ ಕಥಾವಸ್ತು ಜತೆಗೆ ಹಾಡುಗಳು ನೆನಪಲ್ಲುಳಿಯುವಂತಿವೆ. ಹರಿಕೃಷ್ಣ ಕೊಟ್ಟ ಭರವಸೆ ಉಳಿಸಿಕೊಂಡಿದ್ದಾರೆ. ಹಳ್ಳಿಸೊಗಡಿನ ಪದಗಳೇ ಹಾಡಿಗೆ ಜೀವಾಳ. ಅಂತಹ ಅದ್ಭುತ ಸಾಲುಗಳನ್ನು ಕಟ್ಟಿಕೊಟ್ಟಿರುವ ಗೀತಸಾಹಿತಿಗಳಿಗೊಂದು ಥ್ಯಾಂಕ್ಸ್ ಎನ್ನುತ್ತಾರೆ ಮಹೇಶ್ ಸುಖಧರೆ.
-ಉದಯವಾಣಿ
Comments are closed.