ಮನೋರಂಜನೆ

ರಾಕ್ ಆನ್–2 (ಹಿಂದಿ): ಚಿತ್ರವಿಮರ್ಶೆ

Pinterest LinkedIn Tumblr

rock-on-2ರಾಕ್ ಆನ್–2 (ಹಿಂದಿ)
ನಿರ್ಮಾಪಕರು: ಫರ್‍ಹಾನ್ ಅಖ್ತರ್‌ ಮತ್ತು ರಿತೇಶ್‌ ಸಿಧ್ವಾನಿ
ನಿರ್ದೇಶಕ: ಶುಜಾತ್ ಸೌದಾಗರ್‌
ತಾರಾಗಣ: ಫರ್‍ಹಾನ್ ಅಖ್ತರ್‌, ಶ್ರದ್ಧಾ ಕಪೂರ್, ಅರ್ಜುನ್ ರಾಮ್‌ಪಾಲ್, ಪುರಬ್ ಕೊಹ್ಲಿ, ಪ್ರಾಚಿ ದೇಸಾಯಿ
2008ರಲ್ಲಿ ತೆರೆಕಂಡಿದ್ದ, ಅಭಿಷೇಕ್ ಕಪೂರ್ ನಿರ್ದೇಶನದ ‘ರಾಕ್ ಆನ್‌’ ಚಿತ್ರ ಶಾಸ್ತ್ರೀಯ ನೆಲೆಗಟ್ಟಿನಾಚೆಗಿನ ಸಂಗೀತವನ್ನು ಅಪ್ಪಿಕೊಳ್ಳುವ ಯುವ ಮನಸುಗಳು ಮತ್ತು ಮಹಾನಗರದಲ್ಲಿನ ಅವರ ಬದುಕಿನ ಸಂಘರ್ಷ–ತೊಳಲಾಟಗಳ ತೀವ್ರತೆಯನ್ನು ಸೂಕ್ಷ್ಮವಾಗಿ ತೆರೆದಿಟ್ಟಿತ್ತು. ಆ ಚಿತ್ರದ ಬಹುತೇಕ ಪ್ರಮುಖ ಪಾತ್ರಧಾರಿಗಳು ಅದರ ಎರಡನೆಯ ಆವೃತ್ತಿಯಲ್ಲಿ ಇದ್ದಾರೆ. ಹಳೆಯ ಕಥನದೊಂದಿಗೆ ನೇರ ತಳಕು ಹಾಕಿಕೊಳ್ಳದಿದ್ದರೂ, ಅದರ ಮುಂದುವರಿದ ಭಾಗವಾಗಿಯೇ ಕಾಣಿಸುತ್ತದೆ.

‘ರಾಕ್‌ ಆನ್‌’ ಮುಂಬೈ ನಗರ ಮತ್ತು ಅರ್ಜುನ್ ರಾಮ್‌ಪಾಲ್‌ ಅವರ ಪಾತ್ರದ ಮೇಲೆ ಹೆಚ್ಚು ಕೇಂದ್ರಿತವಾಗಿತ್ತು. ‘ರಾಕ್ ಆನ್‌–2’ ಈಶಾನ್ಯ ರಾಜ್ಯದತ್ತಲೂ ಹೊರಳುತ್ತದೆ. ಹಾಗೆಯೇ ಫರ್‍ಹಾನ್ ಅಖ್ತರ್‌ ಪಾತ್ರವೇ ಇಲ್ಲಿ ಕೇಂದ್ರವಾಗಿದೆ.

ಸಂಗೀತಗಾರನಾಗುವ ಹಂಬಲವುಳ್ಳ ಯುವಕನ ಆತ್ಮಹತ್ಯೆಗೆ ತನ್ನ ನಿರ್ಲಕ್ಷ್ಯವೇ ಕಾರಣ ಎಂದು ಭಾವಿಸಿ ಸಂಗೀತದಿಂದ ವಿಮುಖನಾಗುವ ಆದಿತ್ಯ ಶ್ರಾಫ್ (ಫರ್‍ಹಾನ್ ಅಖ್ತರ್‌) ತನ್ನ ಬದುಕನ್ನು ನಗರದಿಂದ ಮೇಘಾಲಯದ ಪುಟ್ಟ ಹಳ್ಳಿಗೆ ಸ್ಥಳಾಂತರಿಸಿದ್ದಾನೆ. ಸವಲತ್ತುಗಳಿಂದ ವಂಚಿತವಾದ ಆ ಹಳ್ಳಿ ಬೆಂಕಿಗೆ ಆಹುತಿಯಾಗುತ್ತದೆ. ತನ್ನ ಬದುಕಿಗೆ ಅರ್ಥ ನೀಡಿರುವ ಹಳ್ಳಿಗರಿಗೆ ನೆರವಾಗುವುದು ಆತನ ಗುರಿ. ಆದರೆ, ಪತಿಗೆ ತನಗಿಂತಲೂ ಹಳ್ಳಿ ಜನರೇ ಮುಖ್ಯ ಎಂಬ ಕಾರಣಕ್ಕೆ ಸಂಬಂಧವನ್ನೇ ತ್ಯಜಿಸಲು ಮುಂದಾಗುವಷ್ಟು ಪತ್ನಿ ಹತಾಶಳಾಗಿದ್ದಾಳೆ.

ಇತ್ತ, ಖ್ಯಾತ ಸಂಗೀತಗಾರನ ಮಗಳು ಜಿಯಾ (ಶ್ರದ್ಧಾ ಕಪೂರ್‌) ಆಧುನಿಕ ಸಂಗೀತದ ಸೆಳೆತಕ್ಕೆ ಒಳಗಾಗಿ, ಅಪ್ಪನ ಭಯಕ್ಕೆ ಅದನ್ನು ಬಚ್ಚಿಟ್ಟುಕೊಂಡಿದ್ದಾಳೆ. ಹಾಡುಗಾತಿಯಾಗಿ ಬೆಳೆಯುವ ಅವಕಾಶವನ್ನು ಒಪ್ಪಿಕೊಳ್ಳಲೂ ಆಕೆಗೆ ಹಿಂಜರಿಕೆ. ಅಪ್ಪನ ಭಯದೊಂದಿಗೆ ಅಣ್ಣನ ಸಾವಿನ ಕಾರಣವೂ ಆಕೆಯನ್ನು ಕಾಡುತ್ತಿದೆ. ಈ ಬಂಧಗಳನ್ನು ಮೀರುವ ಹೆಜ್ಜೆಗಳನ್ನು ಸಾವಧಾನವಾಗಿ ಚಿತ್ರಿಸಿದ್ದಾರೆ ನಿರ್ದೇಶಕ ಶುಜಾರ್ ಸೌದಾಗರ್‌.

ಮನುಷ್ಯ ಸಂಬಂಧಗಳನ್ನು ಸಾಂದ್ರವಾಗಿಸುವ ಪ್ರಯತ್ನಕ್ಕಿಂತಲೂ ಮಾನವೀಯತೆಯನ್ನೇ ಪ್ರಧಾನವಾಗಿಸುವ ಮತ್ತು ಅದಕ್ಕೆ ಅಡೆತಡೆಗಳನ್ನು ತೋರಿಸುವುದು ಹೆಚ್ಚು ನಾಟಕೀಯವಾಗಿದೆ. ಇದು ಕಥನವನ್ನು ಸಂಗೀತದ ಚೌಕಟ್ಟಿನೊಳಗೆ ಸೀಮಿತಗೊಳಿಸದೆ ಬೇರೊಂದು ಮಜಲಿನಲ್ಲಿ ವಿಸ್ತರಿಸುವ ತುಡಿತವಾಗಿಯೂ ಕಾಣಿಸುತ್ತದೆ. ತೆಳುವಾಗಿರುವ ಶಾಸ್ತ್ರೀಯ ಮತ್ತು ಆಧುನಿಕ ಸಂಗೀತದ ಮಿಶ್ರಣದೆಡೆಗಿನ ಪರ–ವಿರೋಧದ ಚರ್ಚೆ, ವಿಷಾದದ ಅಂತ್ಯ ಪಡೆದುಕೊಳ್ಳುತ್ತದೆ.

ಪಾತ್ರಗಳು ಮತ್ತು ಅವುಗಳ ಮೂಲಕ ಧ್ವನಿಸುವ ಸಂಗೀತ ಹಾಗೂ ಜೀವನದ ನೋಟಗಳನ್ನು ಸಿನಿಮಾ ಪರಿಣಾಮಕಾರಿಯಾಗಿ ಚಿತ್ರಿಸಿದೆ. ಕಥೆಯಷ್ಟೇ ಗಾಢವಾಗಿ ಶಂಕರ್‌–ಎಹ್ಸಾನ್‌–ಲಾಯ್‌ ಸಂಗೀತ ಮತ್ತೆ ಮತ್ತೆ ಕೇಳಿಸಿಕೊಳ್ಳುವ ಗುಣ ಹೊಂದಿದೆ. ಎರಡು ರೂಪಕ್ಕಾಗಿ ದೇಹಾಕೃತಿ ಮತ್ತು ಆಂಗಿಕ ಅಭಿನಯ ಎರಡನ್ನೂ ಬದಲಿಸಿಕೊಂಡಿರುವ ಫರ್‍ಹಾನ್ ಅಖ್ತರ್‌ ಬದ್ಧತೆ ಪ್ರಶಂಸಾರ್ಹ. ಸಂಭಾಷಣೆ ಮತ್ತು ಗಾಯನದಲ್ಲಿಯೂ ಅವರ ಛಾಪು ವ್ಯಕ್ತವಾಗಿದೆ. ಶ್ರದ್ಧಾ, ಅರ್ಜುನ್ ರಾಮ್‌ಪಾಲ್, ಪುರಬ್ ಕೊಹ್ಲಿ, ಶಶಾಂಕ್ ಅರೋರಾ, ಕುಮುದ್‌ ಮಿಶ್ರಾ ಅವರದು ಹದವರಿತ ಅಭಿನಯ.

Comments are closed.