ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರು ಅಭಿಮಾನಿ ದೇವರು ಡಾ. ರಾಜ್ ಕುಮಾರ್ ಅವರ ಬಹುದೊಡ್ಡ ಅಭಿಮಾನಿ ಎಂಬುದು ಎಲ್ಲರಿಗೂ ತಿಳಿದ ವಿಷಯವೇ, ಆದರೆ ಮತ್ತೊಮ್ಮೆ ರಜನಿ ಅವರು ತಮ್ಮ ಬಾಲ್ಯದ ನೆನಪು ಮಾಡಿಕೊಳ್ಳುವ ಮೂಲಕ ರಾಜ್ ಕುಮಾರ್ ಅವರ ಬಗೆಗಿನ ತಮ್ಮ ಅಭಿಮಾನವನ್ನು ಹಂಚಿಕೊಂಡಿದ್ದಾರೆ.
ಚೆನ್ನೈನ ಕೂಡಂಬಾಕಂ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ತಮ್ಮ ಅಭಿಮಾನಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ನಿಮ್ಮ ತವಕ ಅರ್ಥವಾಗುತ್ತದೆ, ನಾನು ಸಹ ನನ್ನ ಬಾಲ್ಯದ ದಿನಗಳಲ್ಲಿ ರಾಜ್ ಕುಮಾರ್ ಅವರನ್ನು ನೋಡಲು ಇದೇ ರೀತಿ ಹೋಗಿದ್ದೆ ಎಂದು ತಮ್ಮ ಹಿಂದಿನ ದಿನಗಳನ್ನು ಮೆಲುಕು ಹಾಕಿ ಕೊಂಡಿದ್ದಾರೆ.
ನನ್ನ 16 ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ ಕುಮಾರ್ ಅವರ ಚಲನಚಿತ್ರದ 100 ನೇ ದಿನದ ಕಾಯಕ್ರಮಕ್ಕೆ ಹೋಗಿದ್ದೆ. ಶಿವಾಜಿ ಗಣೇಶನ್ ಸರ್, ಎಂ ಜಿ ಆರ್ ಸರ್ ಸೇರಿದರೆ ಹೇಗೆ, ಹಾಗೆ ಕರ್ನಾಟಕದಲ್ಲಿ ರಾಜ್‍ಕುಮಾರ್. ಮೊದಲ ಬಾರಿ ಅವರನ್ನು ನೋಡಿದ ಕ್ಷಣ ನಾನು ಮೈರೆತು ನಿಂತು ಬಿಟ್ಟೆ. ನನ್ನ ಕಣ್ಣ ಮುಂದೆ ಅವರ ಚಲನಚಿತ್ರದ ದೃಶ್ಯಗಳು ಮಾತ್ರ ಕಾಣಿಸುತ್ತಿತ್ತು. ಈ ವೇಳೆ ಅವರನ್ನು ನಾನು ಮುಟ್ಟಲು ಹೋಗಿದ್ದೆ. ಹಾಗೆಯೇ ಪ್ರಸ್ತುತ ನಿಮ್ಮ ತವಕ ನನಗೇ ಅರ್ಥವಾಗುತ್ತದೆ ಎಂದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಅಭಿಮಾನಿಗಳು ತಮ್ಮ ಕಾಲ ಮೇಲೆ ಬೀಳದಂತೆ ಮನವಿ ಮಾಡಿದ ಅವರು, ನಿಮ್ಮ ತಂದೆ ತಾಯಿ, ದೇವರು ಇವರ ಪಾದಕ್ಕೆ ಮಾತ್ರ ನಮಸ್ಕರಿಸಿ. ಒಳ್ಳೆ ಆರೋಗ್ಯ, ಉತ್ತಮ ಜೀವನ ಪಡೆಯಲು ಪ್ರಾರ್ಥನೆ ಮಾಡಿ ಎಂದರು. ಆದರೂ ಅಭಿಮಾನಿಗಳು ರಜನಿ ಅವರ ಮನವಿಯನ್ನು ಸ್ವೀಕರಿಸದೆ ಅವರ ಕಾಲಿಗೆ ಬಿದ್ದು ಆರ್ಶೀವಾದ ಪಡೆಯವುದು ಸಾಮಾನ್ಯವಾಗಿತ್ತು.
ಅಂದ ಹಾಗೇ ರಜನಿ ಅವರ ರಾಜಕೀಯ ರಂಗ ಪ್ರವೇಶ ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದ್ದರು, ಅವರು ಯಾವುದೇ ನಿರ್ಣಯವನ್ನು ಸ್ಪಷ್ಟಪಡಿಸಿರಲಿಲ್ಲ. ಆದರೆ ಪ್ರಸ್ತುತ ನಡೆಯುತ್ತಿರುವ ಅಭಿಮಾನಿಗಳ ಜೊತೆಗಿನ ಭೇಟಿ ಕಾರ್ಯಕ್ರಮದ ಕೊನೆಯ ದಿನವಾದ ಡಿಸೆಂಬರ್ 31 ರಂದು ಈ ಕುರಿತು ತಮ್ಮ ನಿರ್ಣಯವನ್ನು ಘೋಷಣೆ ಮಾಡುವ ಸಾಧ್ಯತೆಗಳಿವೆ.
2014ರ ನವೆಂಬರ್ 29 ರಂದು ಬೆಂಗಳೂರಿನ ಕಂಠಿರವ ಸ್ಟುಡಿಯೋದಲ್ಲಿ ರಾಜ್ ಸ್ಮಾರಕ ಲೋಕರ್ಪಣೆಯಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಜನಿಕಾಂತ್ ಕನ್ನಡದಲ್ಲೇ ಮಾತನಾಡಿ ರಾಜ್ ಅವರ ನೆನಪು ಮಾಡಿ ಹಾಡಿ ಹೊಗಳಿದ್ದರು.
Comments are closed.