ಪುಣೆ: ಅದು ಪುಣೆಯಿಂದ 60 ಕಿ.ಮೀ. ದೂರದ ಮಾವಡಿ ಕಡೆಪತ್ತಾರ್ ಗ್ರಾಮದ ದೇವಸ್ಥಾನ. ಬೆಳಗ್ಗಿನ ಕೊರೆಯುವ ಚಳಿಯಲ್ಲೂ ಮಕ್ಕಳು, ವೃದ್ಧರೆಲ್ಲರೂ ಸೇರಿದ್ದರು. ಅಲ್ಲಿ ನಡೆಯುತ್ತಿದ್ದು ಶಿವಾಜಿ ರಾವ್ ಗಾಯಕ್ವಾಡ್ ಒಳಿತಿಗಾಗಿ ವಿಶೇಷ ಪೂಜೆ.
ಅವರು ಪೂಜೆ ಮಾಡುತ್ತಿದ್ದುದು ಶಿವಾಜಿ ಅಲಿಯಾಸ್ ರಜನಿಕಾಂತ್ ಪರವಾಗಿ.
ಮಾವಾಡಿ ಕಡೆಪತ್ತಾರ್ ಗ್ರಾಮ ರಜನಿಕಾಂತ್ ಗ್ರಾಮ ಎಂದೇ ಪ್ರಖ್ಯಾತ. ಯಾಕೆಂದರೆ, ರಜನಿಕಾಂತ್ ಅಜ್ಜ ಇದೇ ಊರಿನವರಂತೆ! ”ರಜನಿಕಾಂತ್‌ನ ಅಜ್ಜ ಇದ್ದದ್ದು ಇಲ್ಲೆ. ಅವರಿಗೆ ಇಲ್ಲಿ ಜಾಗವೂ ಇತ್ತು. ಶತಮಾನದ ಹಿಂದೆ ಉದ್ಯೋಗ ಹುಡುಕಿಕೊಂಡು ವಲಸೆ ಹೋಗುವುದು ಇಲ್ಲಿ ಸಾಮಾನ್ಯವಾಗಿತ್ತು. ಇವರು ಕರ್ನಾಟಕದ ಬಸವನಬಾಗೇವಾಡಿಗೆ ವಲಸೆ ಹೋದರು. ಅಲ್ಲಿಂದ ಬೆಂಗಳೂರಿಗೆ ತೆರಳಿದರು,” ಎಂದು ನೆನಪಿಸಿಕೊಂಡರು ಗ್ರಾಮದ ಹಿರಿಯ ಬಾಬನ್ ರಾವ್ ಗಾಯಕ್ವಾಡ್.
”ಕೆಲವು ವರ್ಷದ ಹಿಂದೆ ರಜನಿಕಾಂತ್ ಲೋನಾವಾಲಾದಲ್ಲಿ ಶೂಟಿಂಗ್‌ಗೆ ಬಂದಾಗ ನಾವು ಭೇಟಿ ಮಾಡಲು ಪ್ರಯತ್ನಿಸಿದೆವು. ಆದರೆ, ಭದ್ರತಾ ಸಿಬ್ಬಂದಿ ಬಿಡಲಿಲ್ಲ. ಬಳಿಕ ಹೋಟೆಲ್‌ಗೆ ಹೋಗಿ ಲಿಫ್ಟ್ ಬಳಿ ಕಾದು ಕುಳಿತೆವು. ಕೊನೆಗೆ ಎದುರಾದ ರಜನಿ ಬಳಿ ನಾವು ಹಿಂದಿಯಲ್ಲಿ ಮಾತನಾಡಿದೆವು. ಅವರು ಮರಾಠಿಯಲ್ಲಿ ಮಾತನಾಡೋಣ ಅಂದರು. ಅವರು ಅಷ್ಟು ನಿರರ್ಗಳವಾಗಿ ಮರಾಠಿ ಮಾತನಾಡುವುದು ನೋಡಿ ನಮಗೇ ಆಶ್ಚರ್ಯವಾಯಿತು,” ಎಂದು ಹೇಳುತ್ತಾರೆ ಪುರಂದರ್ ತಾಲೂಕಿನ ಮಾಜಿ ಸರಪಂಚ ಹನುಮಂತ ಚಾಚರ್.
”ಆವತ್ತು ನಾವು ಮಾವತಿ ಕಡೆಪತ್ತಾರ್‌ಗೆ ಬರುವಂತೆ ಮನವಿ ಮಾಡಿದ್ದೆವು. ಒಪ್ಪಿದ್ದರು ಕೂಡಾ. ಆದರೆ, ಇನ್ನೂ ಬಂದಿಲ್ಲ. ನಮಗೆ ಅವರಿಂದ ಏನೂ ಬೇಕಾಗಿಲ್ಲ. ಅಜ್ಜನೂರಿಗೆ ಒಂದು ಭೇಟಿ ಕೊಟ್ಟರೆ ಸಾಕು,” ಎನ್ನುತ್ತಾರೆ ಗ್ರಾಮಸ್ಥ ಪ್ರಕಾಶ್ ಭಾಮೆ.
ಹಿಂದೊಮ್ಮೆ ಗ್ರಾಮಸ್ಥರ ತಂಡ ಚೆನ್ನೈನ ಪೊಯೆಸ್ ಗಾರ್ಡನ್‌ಗೆ ಹೋಗಿ ರಜನಿ ಭೇಟಿ ಮಾಡಲು ವಿಫಲ ಯತ್ನ ನಡೆಸಿತ್ತು. ಕೆಲವರು ಫೋನ್ ಕೂಡಾ ಮಾಡಿದ್ದರು. ಈಗಲೂ ಈ ಭಾಗದ ಜನ ಚೆನ್ನೈಗೆ ಹೋದರೆ ಪೊಯೆಸ್ ಗಾರ್ಡನ್‌ನ ಮನೆ ನೋಡಿಕೊಂಡು ಬರುವ ರೂಢಿ ಎನ್ನುತ್ತಾರೆ ಭಾಮೆ.
2013ರಲ್ಲಿ ಸಸ್ವಾಡ್‌ನಲ್ಲಿ ನಡೆದ ಮರಾಠಿ ಸಾಹಿತ್ಯೋತ್ಸವ ಉದ್ಘಾಟನೆಗೆ ಆಹ್ವಾನ ನೀಡಲಾಗಿತ್ತಾದರೂ ರಜನಿ ಪ್ರತಿಕ್ರಿಯಿಸಿರಲಿಲ್ಲ. ಒಂದಲ್ಲ ಒಂದು ದಿನ ಶಿವಾಜಿ ತಮ್ಮೂರಿಗೆ ಬಂದೇ ಬರ್ತಾರೆ ಅಂತ ಜನ ಕಾಯುತ್ತಲೇ ಇದ್ದಾರೆ.
ಪುರಂದರ ತಾಲೂಕಿನ ಇತರ ಗ್ರಾಮಗಳು ಮತ್ತು ಮಹಾರಾಷ್ಟ್ರದ ಇತರ ಕೆಲವು ಪ್ರದೇಶಗಳು ಕೂಡಾ ರಜನಿಕಾಂತ್ ‘ನಮ್ಮವ’ ಎಂದು ಹೇಳಿಕೊಳ್ಳುತ್ತಿವೆ. 20016ರಲ್ಲಿ ಬಿಜೆಪಿ ಶಾಸಕ ಅನಿಲ್ ಗೋಟೆ ಅವರು ರಜನಿಗೆ ಮಹಾರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯಾಗಿರುವ ಮಹಾರಾಷ್ಟ್ರ ಭೂಷಣ್ ನೀಡಬೇಕು ಎಂದು ಒತ್ತಾಯಿಸಿದ್ದರು.
Comments are closed.