ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ನಟ ಜಗ್ಗೇಶ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸುವ ಮೂಲಕ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅಭಿಮಾನಿಗಳು ಇಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಈ ಪ್ರತಿಭಟನೆ ನಡೆದಿದ್ದು, ನಿನ್ನೆಯಿಂದ ರಮ್ಯಾ ಪರ ಮತ್ತು ವಿರೋಧವಾಗಿ ಮಂಡ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ನಿನ್ನೆ ಇದೇ ಜಾಗದಲ್ಲಿ ರಮ್ಯಾ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ತಂಪು ಪಾನೀಯವನ್ನು ರಮ್ ರೀತಿ ಕುಡಿದು ಪ್ರತಿಭಟಿಸಿದ್ರು.
ಇಂದು ಮತ್ತೆ ಅದೇ ಜಾಗದಲ್ಲಿ ಅಭಿಮಾನಿಗಳಿಂದ ರಮ್ಯಾ ಪರವಾಗಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಾಡುಪಾಪ ಜಗ್ಗೇಶ್, ನರಸತ್ತ ಜಗ್ಗೇಶ್ ಎಂದು ನಟ ಜಗ್ಗೆಶ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾಕೆ ಈ ಪ್ರತಿಭಟನೆ?: ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡಿದ ಬಳಿಕ ಟಿಟ್ವರ್‍ನಲ್ಲಿ ಕಾಂಗ್ರೆಸ್-ಬಿಜೆಪಿ ನಡುವಿನ ವಾರ್ ತೀವ್ರಗೊಂಡಿತ್ತು. ಭಾಷಣದಲ್ಲಿ ರೈತರು ತಮ್ಮ ಟಾಪ್ ಆದ್ಯತೆ ಎಂದು ಮೋದಿ ಹೇಳಿದ್ದರು. ಟಾಪ್ ಎಂದರೆ ಟೊಮೆಟೋ, ಈರುಳ್ಳಿ, ಪೊಟಾಟೋ ಎಂದು ವಾಖ್ಯಾನಿಸಿದ್ದರು. ಇದನ್ನೇ ಉಲ್ಲೇಖಿಸಿದ ರಮ್ಯಾ ಟಾಪ್ ನನ್ನು ಉಲ್ಟಾ ಬರೆದು ಪಾಟ್ ಮಾಡಿದ್ದರು. ಪಾಟ್ ಎಂದರೆ ಮಾದಕ ದ್ರವ್ಯ. ಮರಿಜುನಾ ಮಾದಕ ದ್ರವ್ಯ ಗಿಡಕ್ಕೆ ಪಾಟ್ ಎನ್ನುವ ಹೆಸರೂ ಇದೆ.
ಪದಪುಂಜ ಬಿಡಿಸೋದು ಬಿಟ್ಟರೆ ಪ್ರಧಾನಿ ರೈತರ ಬಗ್ಗೆ ಏನೂ ಮಾಡಿಲ್ಲ. ಕರ್ನಾಟಕದಲ್ಲಿ 3,500 ರೈತರು ಸಾವನ್ನಪ್ಪಿದ್ದರೂ ಗುಜರಾತ್, ಆಂಧ್ರ, ರಾಜಸ್ಥಾನ, ತಮಿಳುನಾಡಿಗೆ ಹೆಚ್ಚು ಪರಿಹಾರ ಕೊಟ್ಟಿರೋ ಮೋದಿ ಸರ್ಕಾರ ಕರ್ನಾಟಕಕ್ಕೆ ಅತ್ಯಂತ ಕಡಿಮೆ ಬರ ಪರಿಹಾರ ಕೊಟ್ಟಿದೆ. ಸಿದ್ದರಾಮಯ್ಯ 1,165 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದರೆ, ಮೋದಿ ಸರ್ಕಾರ ಮಾಡಿರೋ ಸಾಲ ಮನ್ನಾ ಸೊನ್ನೆ ಎಂದು ರಮ್ಯಾ ತಿರುಗೇಟು ನೀಡಿದ್ದರು.
ರಮ್ಯಾ ಟ್ವೀಟ್‍ಗೆ ನವರಸನಾಯಕ ಜಗ್ಗೇಶ್ ಪ್ರತಿಕ್ರಿಯಿಸಿ, ದೊಡ್ಡವರ ಬಗ್ಗೆ ಮಾತನಾಡಬೇಕಾದರೆ ಮಾತಾಡುವ ಮಂದಿಗೆ ವಯಸ್ಸು, ಅನುಭವ, ಸಾಧನೆ ಮಾಡಿ ಪಕ್ವವಾದಾಗ ಅಪಭ್ರಂಷ ಇಲ್ಲದೆ ಚರ್ಚೆ ಮಾಡಿದರೆ ಅದನ್ನ ತರ್ಕ ಎಂದು ಒಪ್ಪಿ ವಿಮರ್ಷೆ ನಿರ್ಣಯಸುತ್ತಾರೆ ಜನ. ವಿಶ್ವದ ಬಲಿಷ್ಟ ರಾಷ್ಟ್ರದ ನಾಯಕರೇ ಮೋದಿ ಅವರನ್ನ ಒಪ್ಪಿ ಮೆಚ್ಚದ್ದಾರೆ. ಈಕೆ ಯಾರು? ಸಾಧನೆ ಏನು? ನೆಟ್ಟಗೆ ಕನ್ನಡ ಮಾತಾಡಲು ಬರದ ಕಾಡುಪಾಪದಂತೆ ಈಕೆ ಎಂದು ಜಗ್ಗೇಶ್ ಟ್ವೀಟ್ ಮಾಡಿ ರಮ್ಯಾ ಹೇಳಿಕೆಗೆ ಕಿಡಿಕಾರಿದ್ದರು. ಈ ಹಿನ್ನೆಲೆಯಲ್ಲಿ ಇಂದು ರಮ್ಯಾ ಅಭಿಮಾನಿಗಳು ಜಗ್ಗೇಶ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
Comments are closed.