ನವದೆಹಲಿ: ನಟಿ ಶ್ರೀದೇವಿ ಸಾವಿನ ಬಳಿಕ ಪತಿ ಬೋನಿ ಕಪೂರ್ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಶ್ರೀದೇವಿ ಅವರನ್ನು ನೆನೆದು ಭಾವುಕರಾಗಿ ಪತ್ರವೊಂದನ್ನು ಬರೆದಿದ್ದಾರೆ.
ಶ್ರೀದೇವಿ ಬೋನಿ ಕಪೂರ್ ಎಂಬ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬೋನಿ ಕಪೂರ್ ಈ ಪತ್ರವನ್ನು ಬರೆದಿದ್ದು, ಪತ್ರದ ಮೂಲಕ ಪತ್ನಿ ಶ್ರೀದೇವಿ ಸಾವಿನ ನೋವನ್ನು ಹೊರಹಾಕಿದ್ದಾರೆ. ಈ ವೇಳೆ ಶ್ರೀದೇವಿ ಸಾವಿನ ಸಮಯದಲ್ಲಿ ಸಹಕಾರ ನೀಡಿದ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಹೇಳಿದ್ದಾರೆ.
ಬೋನಿ ಪತ್ರದ ಸಾರಾಂಶ ಹೀಗಿದೆ….
‘ನಾನು ನನ್ನ ಗೆಳತಿಯನ್ನು ಕಳೆದುಕೊಂಡಿದ್ದೇನೆ. ಅದಕ್ಕಿಂತಲೂ ಹೆಚ್ಚಾಗಿ ಎರಡು ಹೆಣ್ಣು ಮಕ್ಕಳ ತಾಯಿಯನ್ನು ಕಳೆದುಕೊಂಡಿದ್ದೇನೆ. ಅವಳಿಲ್ಲ ಎಂಬ ನೋವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ.
ಶ್ರೀದೇವಿ ಸಾವಿನ ಸಮಯದಲ್ಲಿ ಮಾನಸಿಕ ಬೆಂಬಲ, ಸಹಕಾರ ನೀಡಿದ ಸ್ನೇಹಿತರು, ಕುಟುಂಬಸ್ಥರು, ಅಭಿಮಾನಿಗಳಿಗೆ ಸದಾ ಕೃತಜ್ಞನಾಗಿರುತ್ತೇನೆ. ಅರ್ಜುನ್ ಮತ್ತು ಅಂಶುಲಾ ನನ್ನ ಹಾಗೂ ಜಾಹ್ನವಿ, ಖುಷಿಗೆ ಬೆನ್ನೆಲುಬಾಗಿ ನಿಂತರು. ಒಂದು ಕುಟುಂಬವಾಗಿ ನಾವು ಈ ಅನಿರೀಕ್ಷಿತ ಮತ್ತು ಅಸಹನೀಯ ನಷ್ಟವನ್ನು ಸಹಿಸಲೇಬೇಕಿದೆ. ಎಲ್ಲರೂ ಒಟ್ಟಾಗಿ ದುಃಖದ ಸಂದರ್ಭವನ್ನು ಎದುರಿಸಲೇ ಬೇಕಾಗಿದೆ.
ಹೊರಜಗತ್ತಿಗೆ ಶ್ರೀದೇವಿಯೆಂದರೆ ಚಾಂದನಿ, ಅದ್ಭುತ ನಟಿ. ಆದರೆ ನನಗೆ ನನ್ನ ಪ್ರೀತಿ, ಸ್ನೇಹಿತೆ, ನನ್ನ ಮಕ್ಕಳ ಶ್ರೇಷ್ಠ ತಾಯಿ, ಅಷ್ಟೇ ಅಲ್ಲ ನಮ್ಮ ಕುಟುಂಬದ ಆಧಾರ ಸ್ತಂಭವಾಗಿದ್ದಳು. ಪತ್ನಿಯಾಗಿ ನನ್ನನ್ನು, ತಾಯಿಯಾಗಿ ಜಾಹ್ನವಿ ಹಾಗೂ ಖುಷಿಯನ್ನು ಶ್ರೀದೇವಿ ಬಿಟ್ಟು ಹೋಗಿದ್ದಾಳೆ. ಈ ಸಮಯದಲ್ಲಿ ನನ್ನ ಮನವಿ ಒಂದೇ. ನಮ್ಮ ವೈಯಕ್ತಿಕ ಬದುಕನ್ನು ಗೌರವಿಸಿ. ಶ್ರೀದೇವಿ ಬಗ್ಗೆ ಮಾತನಾಡಬೇಕು ಎಂದೆನೆಸಿದರೆ ಆಕೆ ಎಲ್ಲರ ಮನಗೆದ್ದ ವಿಚಾರದ ಬಗ್ಗೆ ಮಾತನಾಡಿ. ಆಕೆಗೆ ಆಕೆ ಮಾತ್ರ ಸರಿಸಾಟಿ. ಅವಳನ್ನು ಪ್ರೀತಿಸಿ, ಗೌರವಿಸಿ. ಯಾವ ವಿಚಾರದಲ್ಲೂ ಆಕೆಯನ್ನು ತೆರೆಮರೆಗೆ ಸರಿಸಲು ಆಗುವುದಿಲ್ಲ. ಬೆಳ್ಳಿ ಪರದೆ ಮೇಲೆ ಶ್ರೀದೇವಿ ಚಿರಸ್ಥಾಯಿ.
ಸದ್ಯ ಬದುಕಿನಲ್ಲಿ ನನ್ನ ಕಾಳಜಿ ಒಂದೇ.. ಶ್ರೀದೇವಿ ಇಲ್ಲದೆ ನನ್ನ ಮಕ್ಕಳು ಹಾಗೂ ಕುಟುಂಬವನ್ನ ಮುನ್ನಡೆಸುವುದು. ಆಕೆ ನನ್ನ ಉಸಿರು.. ಬದುಕಿನ ಶಕ್ತಿ.. ನನ್ನ ಪ್ರತಿಕ್ಷಣದ ನಗುವಿನ ಕಾರಣ.
ನನ್ನ ಪ್ರೀತಿಯೇ.. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ.. ನಮ್ಮ ಜೀವನ ಈ ಹಿಂದಿನಂತೆ ಇರಲ್ಲ..’ ಎಂದು ಬೋನಿ ಕಪೂರ್ ಭಾವುಕರಾಗಿ ಪತ್ರ ಬರೆದು ಟ್ವೀಟಿಸಿದ್ದಾರೆ.
Comments are closed.