ತುಳುವಿನಲ್ಲಿ ಮತ್ತೂಂದು ಹಾರರ್, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಸಿನೆಮಾ ತೆರೆಗೆ ಬರಲು ತಯಾರಾಗುತ್ತಿದೆ. ಮೇಘಾ ವಿಷನ್ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗುತ್ತಿರುವ ಈ ಸಿನೆಮಾದ ಹೆಸರು ‘ಆ್ಯಂಬುಲೆನ್ಸ್’..!ಒಂದು ದಿನದಲ್ಲಿ ನಡೆಯುವ ಘಟನೆ ಈ ಚಿತ್ರದಲ್ಲಿದೆ.
ಬೆಂಗಳೂರಿನಿಂದ ಆ್ಯಂಬುಲೆನ್ಸ್ ನಲ್ಲಿ ಮೃತದೇಹವನ್ನು ಚಾಲಕ ಹಾಗೂ ಯುವತಿಯೋರ್ವಳು ದ.ಕ ಜಿಲ್ಲೆಯ ಕಮರೊಟ್ಟು ಗ್ರಾಮಕ್ಕೆ ಕರೆತರುತ್ತಾರೆ. ದಾರಿ ಮಧ್ಯೆ ಈ ವಾಹನಕ್ಕೆ ಕೆಲವರು ಹತ್ತುತ್ತಾರೆ. ಆದರೆ ಅವರೆಲ್ಲರೂ ದಾರಿ ಮಧ್ಯೆ ಕೊಲೆಯಾಗುತ್ತಾರೆ. ಯಾಕೆ ಈ ವಾಹನ ಹತ್ತಿದ್ದಾರೆ? ಯಾರು ಕೊಲೆ ಮಾಡಿದ್ದಾರೆ? ಯಾಕೆ ಕೊಲೆಯಾಗುತ್ತಾರೆ? ಇವೆಲ್ಲವೂ ಸಸ್ಪೆನ್ಸ್!
ಹಾಡುಗಳಿಲ್ಲದ ಸಿನೆಮಾವಿದು. ಚಿಕ್ಕಮಗಳೂರು ಶಿರಾಡಿ ಘಾಟಿ, ಚಾರ್ಮಾಡಿ ಮೊದಲಾದ ಪ್ರದೇಶಗಳಲ್ಲಿ ಸಿನೆಮಾಕ್ಕೆ ಚಿತ್ರೀಕರಣ ನಡೆದಿದೆ. ಮುಖ್ಯವಾಗಿ ರಾತ್ರಿಯೆಲ್ಲ ಶೂಟಿಂಗ್ ನಡೆದಿದೆ. ಅರವಿಂದ ಬೋಳಾರ್ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನುಳಿದಂತೆ ಚಿತ್ರದ ನಿರ್ಮಾಪಕ ಶ್ರೀನಾಥ ಶೆಟ್ಟಿ ಅವರು ಆ್ಯಂಬುಲೆನ್ಸ್ ಡ್ರೈವರ್ ಪಾತ್ರದಲ್ಲಿದ್ದಾರೆ. ಸಿನೆಮಾದಲ್ಲಿ ಇವರದ್ದೊಂದು ಚಿಕ್ಕ ಲವ್ ಸ್ಟೋರಿಯೂ ಇದೆ. ಇವರಿಗೆ ಜತೆಯಾಗಿ ಶಿಲ್ಪಾ ಪೂಜಾರಿ ಇದ್ದಾರೆ. ಮೋನಿಕಾ ಅಂದ್ರಾದೆ ನಂದಳಿಕೆ ಅವರಿಗೂ ಇಲ್ಲಿ ಮುಖ್ಯ ಪಾತ್ರವಿದೆ.
ಒಂದು ರಾತ್ರಿಯಲ್ಲಿ ನಡೆಯುವ ಘಟನೆ ಇಲ್ಲಿ ಮಹತ್ವ ಮತ್ತು ತಿರುವು ಪಡೆದುಕೊಳ್ಳುತ್ತದೆ. ವಿಶಾಂತ್ ಶೆಟ್ಟಿ ಸಿನೆಮಾವನ್ನು ನಿರ್ದೇಶಿಸಿದ್ದಾರೆ. ‘ಕನಸು’ ಖ್ಯಾತಿಯ ಸಚಿನ್ ಮತ್ತು ಸುರೇಂದ್ರ ಪಣಿಯೂರು ಕೆಮ ರಾದಲ್ಲಿ ದುಡಿದಿದ್ದಾರೆ. ಹರೀಶ್ ಕೊಡ್ಪಾಡಿ ಸಂಕಲನಕಾರರಾಗಿದ್ದಾರೆ. ರವೀಂದ್ರ ಕರ್ಕೇರ, ಯೋಗೀಶ್ ಶೆಟ್ಟಿ, ಕಲ್ಮಾ, ಶೃತಿ ನೆಲ್ಲಿಗುಡ್ಡೆ ಮತ್ತು ಮುಂಬಯಿ ಕಲಾವಿದರ ಸಹಿತ ಅನೇಕ ಮಂದಿ ಕಲಾವಿದರಿದ್ದಾರೆ.
-ಉದಯವಾಣಿ
Comments are closed.