ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಟರಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ನವರಸ ನಾಯಕ ಜಗ್ಗೇಶ್ ಇಂದು (ಮಾ.17) ತಮ್ಮ ಜನ್ಮ ದಿನ ಆಚರಿಸಿಕೊಂಡರು. ಪುನೀತ್ ರಾಜ್‍ಕುಮಾರ್ ಗೆ 43ನೇ ವರ್ಷದ ಹುಟ್ಟುಹಬ್ಬವಾದರೆ ಜಗ್ಗೇಶ್ ಗೆ ಇದು 55ನೇ ವರ್ಷದ ಜನ್ಮ ದಿನ.
ನಿನ್ನೆ ರಾತ್ರಿಯಿಂದಲೇ ಪುನೀತ್ ಅಭಿಮಾನಿಗಳು ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದ ಮುಂದೆ ನೆರೆದಿದ್ದರು. ತಾಯಿ ಪಾರ್ವತಮ್ಮ ಸಾವಿನ ಕಾರಣ ಹುಟ್ಟು ಹಬ್ಬ ಆಚರಣೆ ಮಾಡದಿರಲು ನಿರ್ಧರಿಸಿದ್ದ ಅಪ್ಪು ಅಭಿಮಾನಿಗಳ ಒತ್ತಾಯದ ಮೇರೆಗೆ ಅವರು ತಂದಿದ್ದ ಕೇಕ್ ಕತ್ತರಿಸಿ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
ನಟಸಾರ್ವಭೌಮ ಟೀಸರ್ ಬಿಡುಗಡೆ
ಇನ್ನು ಅಪ್ಪು ಅಭಿಮಾನಿಗಳುಗೆ ತಮ್ಮ ಮೆಚ್ಚಿನ ನಾಯಕನ ಜನ್ಮ ದಿನಕ್ಕೆ ಸಂಭ್ರಮಿಸಲು ಇನ್ನೊಂದು ಕಾರಣ ಸಿಕ್ಕಿದೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ `ನಟಸಾರ್ವಭೌಮ’ ಚಿತ್ರದಲ್ಲಿ ಪುನೀತ್ ಅಭಿನಯಿಸುತ್ತಿದ್ದು ಅವರ ಜನ್ಮ ದಿನದಂದು ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗಿದೆ. 1968 ವರನಟ ರಾಜ್‍ಕುಮಾರ್ ನಟಸಾರ್ವಭೌಮ ಎಂಬ ಶೀರ್ಷಿಕೆಯ ಚಿತ್ರದಲ್ಲಿ ನಟಿಸಿದ್ದರು. ಇದೀಗ ಅವರ ಪುತ್ರ ಪುನೀತ್ ತಾವೂ ಸಹ ಅದೇ ಹೆಸರಿನ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಈ ಹಿಂದೆ ’ರಾಜಕುಮಾರ’ ದಂತೆಯೇ ಈ ಚಿತ್ರ ಸಹ ಯಶಸ್ವಿಯಾಗುವುದೆ ಕಾದು ನೋಡಬೇಕು.
ಕೊಲ್ಲೂರಿನಲ್ಲಿ ಜಗ್ಗೇಶ್
ನವರಸ ನಾಯಕ ಜಗ್ಗೇಶ್ ತಾವು ಹುಟ್ಟುಹಬ್ಬದ ಪ್ರಯುಕ್ತ ದೇವಾಲಯಕ್ಕೆ ತೆರಳಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ತೆರಳಿರುವ ಜಗ್ಗೇಶ್ ನವಚಂಡಿಕಾ ಯಾಗವನ್ನು ಕೈಗೊಂಡಿದ್ದಾರೆ.
ಹುಟ್ಟು ಹಬ್ಬದ ಪ್ರಯುಕ್ತ ಟ್ವೀಟ್ ಮಾಡಿದ ನಾಯಕ ನಟ ನನಗೆ ಜನ್ಮ ಕೊಟ್ಟ ನನ್ನ ದೇವರಿಗೆ ಶರಣು ಶರಣಾರ್ಥಿ.. ತಿಳಿದೋ ತಿಳಿಯದೆಯೋ ನಾನು ಮಾಡಿದ ಸರ್ವ ಅಪರಾಧ ಕ್ಷಮಿಸಿ ಹರಸಿ. ಸಾಧ್ಯವಾದಷ್ಟು ನಿಮ್ಮ ಗೌರವ ಉಳಿಸಿದ ಮಗನಾಗಿ ಗಂಡನಾಗಿ, ತಂದೆಯಾಗಿ, ತಾತನಾಗಿ ಸಮಾಜಕ್ಕೆ ತಲೆಬಾಗಿ ಗೌರವದಿಂದ ಬಾಳಿ ಬದುಕಿ ಅಸ್ತಮದ ಕಡೆಗೆ ನಡೆದಿದೆ ನಿಮ್ಮ ಮಗನ ಬದುಕು. ಇಂದಿಗೆ ನಾನು ಮಾಗುತ್ತಿರುವ 55ರ ಮನುಜ. ಈ ಸಮಯದಲ್ಲಿ ಹರಸಿದ ಆತ್ಮಗಳಿಗೆ ಶರಣು ಎಂದು ಹೇಳಿಕೊಂಡಿದ್ದಾರೆ.
Comments are closed.