ನಮ್ಮ ರೇಟಿಂಗ್ 2.5 / 5
ಓದುಗರ ರೇಟಿಂಗ್3.5 / 5
ನಿಮ್ಮ ವಿಮರ್ಶೆ ಬರೆಯಿರಿ
ಕಲಾವಿದರುನಿರೂಪ್ ಭಂಡಾರಿ,ಅವಂತಿಕಾ ಶೆಟ್ಟಿ,ಪಿ ರವಿಶಂಕರ್,ಆರ್ಯ.
ನಿರ್ದೇಶಕಅನೂಪ್ ಭಂಡಾರಿ
ಚಿತ್ರದ ವಿಧComedy,Romance
ಅವಧಿ2 hrs. 23 Min.
ವಿಮರ್ಶಕರ ವಿಮರ್ಶೆ
*ಹರೀಶ್ ಬಸವರಾಜ್
ರಂಗಿತರಂಗ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಿದ ಭಂಡಾರಿ ಬ್ರದರ್ಸ್‌ನ ರಾಜರಥದ ಬಗ್ಗೆ ಜನರಿಗೆ ಸಾಕಷ್ಟು ನಿರೀಕ್ಷೆ ಇತ್ತು. ರಂಗಿತರಂಗದಲ್ಲಿ ಒಂದು ಸಂಕೀರ್ಣತೆಯ ಕಥೆ ಹೇಳಿ ಗೆದ್ದಿದ್ದ ಅನೂಪ್, ಈ ಬಾರಿ ಸೂಕ್ಷ್ಮ ಮತ್ತು ಲವ್‌ಸ್ಟೋರಿ ಎರಡನ್ನು ಸೇರಿಸಿ ಕಥೆ ಹೇಳಲು ಹೊರಟಿದ್ದಾರೆ.
ಎಂಜಿನಿಯರಿಂಗ್ ವಿದ್ಯಾರ್ಥಿ ನಾಯಕ ಅಭಿ (ನಿರೂಪ್ ಭಂಡಾರಿ) ಅದೇ ಕಾಲೇಜಿನಲ್ಲಿ ಓದುತ್ತಿರುವ ನಾಯಕಿ ಮೇಘ (ಅವಂತಿಕಾ ಶೆಟ್ಟಿ). ನಾಯಕಿಗೆ ಒಬ್ಬ ಬಾಯ್‌ಫ್ರೆಂಡ್ . ಬಾಯ್ ಫ್ರೆಂಡ್ ಇದ್ದರೂ ನಾಯಕಿಯನ್ನು ಲವ್ ಮಾಡಬೇಕು ಎಂದು ಹಾತೊರೆಯುವ ಅಭಿ ಮತ್ತು ನಾಯಕಿ ಇಬ್ಬರೂ ಒಂದೇ ಬಸ್‌ನಲ್ಲಿ ಅಕ್ಕ ಪಕ್ಕ ಕೂತು ಚೆನ್ನೈಗೆ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದು ಒಂದು ಕಥೆಯಾದರೆ, ಇದಕ್ಕೆ ಪರ್ಯಾಯವಾಗಿ ಯುವ ನಾಯಕ (ವಿಶ್ವ)ನನ್ನು ಒಂದು ಸುಳ್ಳು ಹೋರಾಟಕ್ಕೆ ಬಳಸಿಕೊಂಡು, ಅವನಿಂದ ಹಿಂಸಾಚಾರ ಮಾಡಿಸುವ ಕಥೆ ನಡೆಯುತ್ತಿರುತ್ತದೆ.
ರಾಜರಥದಲ್ಲಿ ಬಸ್ ಒಂದು ಪ್ರಮುಖ ಪಾತ್ರ. ಆದರೆ ಆ ಬಸ್‌ಗೆ ನಿರ್ದಿಷ್ಟ ಗುರಿಯ ಕೊರತೆ ಎದ್ದು ಕಾಣುತ್ತದೆ. ಒಂದಷ್ಟು ಪ್ರಯಾಣಿಕರು ಚೆನ್ನೈಗೆ ರಾಜರಥವೆಂಬ ಹೈಟೆಕ್ ಬಸ್‌ನಲ್ಲಿ ಪ್ರಯಾಣ ಮಾಡುವ ಮೂಲಕ ಕಥೆ ಆರಂಭವಾಗುತ್ತದೆ. ಈ ಬಸ್‌ನಲ್ಲಿರುವ ಎಲ್ಲ ಪಾತ್ರಗಳನ್ನು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಪರಿಚಯ ಮಾಡಿಕೊಡುತ್ತಾರೆ. ವಿಪರ್ಯಾಸ ಎಂದರೆ ಸಿನಿಮಾ ಮಧ್ಯಂತರಕ್ಕೆ ಬಂದರೂ ಈ ಪಾತ್ರಗಳ ಪರಿಚಯ ಮುಗಿದಿರುವುದಿಲ್ಲ. ರಾಜಕೀಯ, ನೈಜ ಹೋರಾಟದ ದಿಕ್ಕು ತಪ್ಪಿಸುವ ಪ್ರಯತ್ನ, ಹಗರಣಗಳು ಮೀಡಿಯಾ ಇವಿಷ್ಟೂ ‘ರಾಜರಥ’ದಲ್ಲಿ ಪ್ರಯಾಣಿಕರ ಜತೆ ತುಂಬಿರುವ ಲಗೇಜ್‌ಗಳಾಗಿರುತ್ತವೆ ಆದರೆ ಆ ಲಗೇಜ್‌ಗಳನ್ನು ಸರಿಯಾದ ರೀತಿಯಲ್ಲಿ ಜೋಡಿಸದೇ, ಪ್ರೇಕ್ಷಕರಿಗೆ ಕನ್‌ಫ್ಯೂಸ್ ಮಾಡುತ್ತಾರೆ ನಿರ್ದೇಶಕರು.
ರಾಜಕೀಯ ಪ್ರೇರಿತ ಹೋರಾಟ, ನಾಯಕ ನಾಯಕಿಯ ಲವ್‌ಸ್ಟೋರಿ, ಜತೆಗೆ ಇದ್ದಕ್ಕಿದ್ದಂತೆ ಧುತ್ತನೆ ಎದುರಾಗುವ ಪಾತ್ರಗಳು ಇಷ್ಟೆಲ್ಲದರ ನಡುವೆ ಪ್ರೇಕ್ಷಕ ಕಥೇ ಹುಡುಕುವ ಹೊತ್ತಿಗೆ ಸಿನಿಮಾ ಕ್ಲೈಮ್ಯಾಕ್ಸ್ ಹಂತಕ್ಕೆ ಬರುತ್ತದೆ.
ಸಿನಿಮಾ ಕಥೆ ಮತ್ತು ಚಿತ್ರಕಥೆ ವಿಚಾರದಲ್ಲಿ ಬೇಸರ ಮೂಡಿಸಿದರೂ, ಮೇಕಿಂಗ್‌ನಲ್ಲಿ ಹಬ್ಬದಂತೆ ಕಾಣುತ್ತದೆ. ವಿಲಿಯಂ ಡೇವಿಡ್ ಪ್ರತಿ ಫ್ರೇಮ್‌ನ್ನು ಪೇಯಿಂಟಿಂಗ್‌ನಂತೆ ತೆಗೆದಿದ್ದಾರೆ. ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಲೊಕೇಶನ್‌ಗಳು ಸಹ ಅದ್ಭುತವಾಗಿದೆ. ಸಿನಿಮಾದ ಸಂಗೀತ ಇಂಪಾಗಿದ್ದರೆ. ಬ್ಯಾಗ್ರೌಂಡ್ ಸ್ಕೋರ್ ಎಲ್ಲೋ ಕೇಳಿದಂತೆ ಭಾಸವಾಗುತ್ತದೆ. ಕೆಲವು ಕಡೆಯಲ್ಲಂತೂ ಸೂಪರ್ ಹಿಟ್ ಸಿನಿಮಾದ ಆರ್‌ಆರ್‌ನ್ನು ಯಥಾವತ್ತ ಇಳಿಸಿದ್ದಾರೆ ಅನ್ನಿಸುತ್ತದೆ. ರಂಗಿತರಂಗಕ್ಕೆ ಹೋಲಿಸಿಕೊಂಡರೆ ನಾಯಕ ನಿರೂಪ್ ಭಂಡಾರಿ ನಟನೆಯಲ್ಲಿ ಸುಧಾರಿಸಿದ್ದಾರೆ. ಅವಂತಿಕಾ ತೀರಾ ಸಪ್ಪೆಯಾಗಿದ್ದಾರೆ.
ತಮಿಳು ನಟ ಆರ್ಯ ಸಿನಿಮಾಗೆ ಆಗಾಗ ಆಶಾದಾಯಕವಾಗಿ ಕಾಣುತ್ತಾರೆ. ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪಾತ್ರಗಳು ಹೆಚ್ಚಾಗಿರುವ ಕಾರಣ ಎಲ್ಲ ಪಾತ್ರಗಳು ನೆನಪಿನಲ್ಲಿ ಉಳಿಯುವುದು ಕಷ್ಟ. ನಾಯಕನ ಸ್ನೇಹಿತ ಮತ್ತು ರಂಗಿತರಂಗದ ರಫೀಕ್ ಪಾತ್ರಧಾರಿ ಇಲ್ಲಿಯೂ ತಮ್ಮ ನಟನೆಯಿಂದ ಗಮನ ಸೆಳೆಯುತ್ತಾರೆ. ಆರಾಮಾಗಿ, ಸುಖಕರವಾಗಿ ಪ್ರಯಾಣಿಸಬೇಕಾದ ಜರ್ನಿಯಲ್ಲಿ ಚುರುಕಾದ ಸಂಕಲನವಿಲ್ಲದೇ, ಗಟ್ಟಿಯಾದ ಕಥೆಯಿಲ್ಲದೇ ರಾಜರಥ ಸಾಕಷ್ಟು ಹಳ್ಳಕೊಳ್ಳಗಳೊಂದಿಗೆ ಸಾಗುತ್ತ ಕಡೆಗೆ ಕಷ್ಟಪಟ್ಟುಕೊಂಡು ದಡ ಮುಟ್ಟುತ್ತದೆ.
Comments are closed.