‘ಹೀಗೊಂದು ದಿನ’ ಹೆಸರಿಗೆ ತಕ್ಕಂತೆ ಒಂದು ದಿನ ಬೆಳ್ಳಗೆ 6 ಗಂಟೆಯಿಂದ 8 ಗಂಟೆಯವರೆಗೆ ನಡೆಯುವ ಕಥೆ. ಉತ್ತಮ ನಟಿ ಆಗಬೇಕು ಎಂಬ ಕನಸಿಟ್ಟುಕೊಂಡ ನಾಯಕಿ ಜಾನವಿ (ಸಿಂಧು ಲೋಕನಾಥ್) ತನ್ನ ಕನಸನ್ನು ತಾಯಿಗೆ ಹೇಳಲಾಗದೆ ಯಾವುದೇ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಒಂದು ದಿನ ಆಕೆಯನ್ನು ನೋಡಲು ಅವರ ಮನೆಗೆ ಮದುವೆಯ ಗಂಡು ಬರಬೇಕಾಗಿರುತ್ತದೆ. ಆದರೆ ಅದೇ ದಿನ ಆಕೆಗೆ ಸಿನಿಮಾ ಆಡಿಷನ್ ಕೂಡ ಇರುತ್ತದೆ.
ಒಂದು ಮೀಟಿಂಗ್ ಇದೆ, ಹುಡುಗರ ಮನೆಯವರು ಬರುವುದರ ಒಳಗೆ ಮರಳುತ್ತೇನೆ ಎಂದು ಹೇಳಿ ಹೋಗುವ ಆ ಹುಡುಗಿಯ ಇಡೀ ಜರ್ನಿ ಚಿತ್ರದ ಕಥೆಯಾಗಿದೆ. ಆ ಹುಡುಗಿಯ ಜರ್ನಿಯಲ್ಲಿ ಏನೇಲ್ಲ ಘಟನೆಗಳು ನಡೆಯುತ್ತದೆ, ಆಕೆ ತನಗೆ ಬರುವ ಎಲ್ಲ ಅಡೆತಡೆಗಳನ್ನು ಎದುರಿಸಿ ಗುರಿ ಮುಟ್ಟುತ್ತಾಳಾ ?, ಆಡಿಷನ್ ನಲ್ಲಿ ಭಾಗವಹಿಸಿ ತನ್ನ ಕನಸು ನನಸು ಮಾಡಿಕೊಳ್ಳುತ್ತಾಳಾ ಎನ್ನುವುದು ಚಿತ್ರದ ಕುತೂಹಲಕಾರಿ ಅಂಶ. ಹೀಗೆ ಮನೆಯಿಂದ ಹೊರಟ ಹುಡುಗಿ ತಾನು ತಲುಪುವ ಜಾಗದ ನಡುವಿನ ಜರ್ನಿಯ ಕಥೆಯೇ ‘ಹೀಗೊಂದು ದಿನ’ ಸಿನಿಮಾ.
‘ಹೀಗೊಂದು ದಿನ’ ಸಿನಿಮಾಲ್ಲಿ ದೊಡ್ಡ ಲವ್ ಸ್ಟೋರಿ ಇಲ್ಲ, ಆಕ್ಷನ್ ಇಲ್ಲ, ಥ್ರಿಲ್ಲಿಂಗ್ ಅಂಶಗಳು ಇಲ್ಲ, ಎಲ್ಲದಕ್ಕಿಂತ ಹೆಚ್ಚಾಗಿ ಕಥೆಗೆ ಬೇಡದ ಯಾವುದು ವಿಷಯವನ್ನು ಇಲ್ಲಿ ಹೇಳಿಲ್ಲ. ಇದೊಂದು ಸಿಂಪಲ್ ಕಥೆಯ ಸಿಂಪಲ್ ಸಿನಿಮಾ. ಸರಳ ಕಥೆ ಹೊಂದಿರುವ ಈ ಚಿತ್ರದ ಒಳಗೆ ಒಂದು ಒಳ್ಳೆಯ ವಿಷಯ ಇದೆ. ಜರ್ನಿಯಲ್ಲಿ ನಡೆಯುವ ಸಣ್ಣ ಪುಟ್ಟ ಘಟನೆಗಳು ನೋಡುಗರನ್ನು ತಟ್ಟುತ್ತದೆ. ಎಲ್ಲಿಯೂ ಇದ್ದಕ್ಕಿದ್ದ ಹಾಗೆ ಕಾಮಿಡಿ ದೃಶ್ಯಗಳು, ಹಾಡುಗಳು ಬರುವುದಿಲ್ಲ. ಎಲ್ಲ ಅಂಶಗಳು ಸಿನಿಮಾದ ಕಥೆಯ ಜೊತೆಗೆ ಪ್ರಯಾಣ ಮಾಡಿದೆ. ಸಹಜ ನಟನೆಯ ಸಿಂಧು ಸಿಂಧು ಲೋಕನಾಥ್ ಮತ್ತೊಮ್ಮೆ ತಮ್ಮ ಸಹಜ ನಟನೆ ಮೂಲಕ ಇಷ್ಟ ಆಗುತ್ತಾರೆ. ಇಡೀ ಸಿನಿಮಾದಲ್ಲಿ ಅವರೇ ತುಂಬಿಕೊಂಡಿದ್ದಾರೆ.
ಅವರೇ ಹೆಚ್ಚು ನಗಿಸುತ್ತಾರೆ. ಸಿನಿಮಾದ ಆ ಪಾತ್ರ ಏನು ಡಿಮ್ಯಾಂಡ್ ಮಾಡುತ್ತದೆ ಅದೆಲ್ಲವನ್ನು ಸಿಂಧು ನೀಡಿದ್ದಾರೆ. ಮೊದಲ ದೃಶ್ಯದಿಂದ ಕೊನೆಯ ದೃಶ್ಯದವರೆಗೆ ಸಿಂಧು ಪಾತ್ರ ಎಲ್ಲೋ ನಮ್ಮ ನಡುವೆ ಇರುವ ಒಬ್ಬ ಹುಡುಗಿ ರೀತಿ ಹತ್ತಿರ ಆಗುತ್ತದೆ. ಅನ್ ಕಟ್ ಫಿಲ್ಮ್ಸ್ ಆಗಿದ್ದರೂ, ಎಷ್ಟೇ ಉದ್ದವಾದ ದೃಶ್ಯವಿದ್ದರೂ, ಅದನ್ನು ನೀರು ಕುಡಿದಂತೆ ಮಾಡಿ ಮುಗಿಸಿದ್ದಾರೆ ಸಿಂಧು. ಸಿನಿಮಾದಲ್ಲಿ ಇರುವ ಎಲ್ಲ ಪಾತ್ರಗಳು ಮುಖ್ಯ ಪಾತ್ರವಾದ ಸಿಂಧು ಲೋಕನಾಥ್ ಗೆ ಸಾಥ್ ನೀಡಿವ ರೀತಿಯಲ್ಲಿದೆ.
ಪ್ರವೀಣ್, ಶೋಭ್ ರಾಜ್, ಪದ್ಮಜಾ ರಾವ್, ಮಿತ್ರ, ಗುರುಪ್ರಸಾದ್, ಮತ್ತು ಗಿರಿಜಾ ಲೋಕೇಶ್ ಅವರ ನಟನೆ ಸಿನಿಮಾಗೆ ಪ್ಲಸ್ ಪಾಯಿಂಟ್. ಶೋಭ್ ರಾಜ್ ಇರುವ ಸನ್ನಿವೇಶಗಳು ಜನರನ್ನು ನಗಿಸುತ್ತದೆ. ನಿರ್ದೇಶಕ ವಿಕ್ರಂ ಯೋಗಾನಂದ್ ತಾವೇ ಕ್ಯಾಮರಾ, ಸಂಕಲನ ಮತ್ತು ನಿರ್ದೇಶನ ಮೂರು ವಿಭಾಗವನ್ನು ನಿರ್ವಹಿಸಿ ಒಂದು ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದಾರೆ. ಜರ್ನಿಯ ಕಥೆ ಆಗಿರುವುದರಿಂದ ಇನ್ನಷ್ಟು ಪರಿಣಾಮಕಾರಿಯಾಗಿರುವ ಸನ್ನಿವೇಶಗಳನ್ನು ನಿರ್ದೇಶಕರು ಜೋಡಿಸಿದ್ದರೆ ಸಿನಿಮಾ ಇನ್ನಷ್ಟು ಮೆರಗು ಪಡೆಯುತ್ತಿತ್ತು. ಮುಖ್ಯವಾಗಿ ಕ್ಯಾಮರಾವನ್ನು ಚೆನ್ನಾಗಿ ನಿಭಾಹಿಸಿದ್ದಾರೆ. ಇಡೀ ಸಿನಿಮಾ ಒಂದು ಒಳ್ಳೆಯ ಪ್ರಯತ್ನ ಎನ್ನುವ ಕಾರಣಕ್ಕೆ ‘ಹೀಗೊಂದು ದಿನ’ ಇಷ್ಟ ಆಗುವುದು.
ಚಿತ್ರ: ಹೀಗೊಂದು ದಿನ,
ನಿರ್ಮಾಣ: ದಿವ್ಯದೃಷ್ಟಿ ಚಂದ್ರಶೇಖರ್
ಸಂಕಲನ, ಛಾಯಾಗ್ರಹಣ, ನಿರ್ದೇಶನ: ವಿಕ್ರಂ ಯೋಗಾನಂದ್,
ಕಥೆ : ವಿಕಾಸ್.ವಿ,
ಸಂಗೀತ ನಿರ್ದೇಶನ: ಅಭಿಲಾಷ್ ಗುಪ್ತ
ತಾರಾಗಣ: ಸಿಂಧು ಲೋಕನಾಥ್, ಪ್ರವೀಣ್, ಮಿತ್ರ, ಗುರುಪ್ರಸಾದ್, ಶೋಭ್ ರಾಜ್ ಮಿತ್ರ, ಪದ್ಮಜಾ ರಾವ್ ,ಗಿರಿಜಾ ಲೋಕೇಶ್ ಮತ್ತು ಇತರರು
ಬಿಡುಗಡೆ: ಮಾರ್ಚ್ 30, 2018
ಮನೋರಂಜನೆ
Comments are closed.