ಮನೋರಂಜನೆ

ಕಾಮಿಡಿ ಆಕ್ಟರ್ ಆಗಿ ‘ಬಿಗ್ ಬಾಸ್’ ದಿವಾಕರ್ ಎಂಟ್ರಿ

Pinterest LinkedIn Tumblr


ಬಿಗ್ ಬಾಸ್ ಕನ್ನಡ ಸೀಸನ್ 5ರ ರನ್ನರ್ ಅಪ್ ಆಗಿದ್ದ ದಿವಾಕರ್‌ಗೆ ಸಾಕಷ್ಟು ಸಿನಿಮಾ ಆಫರ್‌ಗಳು ಬರುತ್ತಿವೆ. ಆದರೆ ಇದುವರೆಗೆ ಅವರು ಯಾವುದೆ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅವರ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ.

ಮನೋರಂಜನ್ ಅಭಿನಯದ ‘ಚಿಲಂ’ ಚಿತ್ರ ಇದೇ ತಿಂಗಳಾಂತ್ಯಕ್ಕೆ ಸೆಟ್ಟೇರಲಿದ್ದು ಚಿತ್ರದಲ್ಲಿ ಅವರ ಗೆಳೆಯನಾಗಿ ದಿವಾಕರ್ ಕಾಣಿಸಲಿದ್ದಾರೆ. ಈ ವಿಷಯವನ್ನು ಸ್ವತಃ ಚಿತ್ರದ ನಿರ್ದೇಶಕಿ ಚಂದ್ರಕಲಾ ಸ್ಪಷ್ಟಪಡಿಸಿದ್ದು, ಚಿತ್ರದಲ್ಲಿ ಅವರದು ಕಾಮಿಡಿ ಪಾತ್ರ ಎಂದಿದ್ದಾರೆ.

ಈ ಚಿತ್ರದಲ್ಲಿ ಮನೋರಂಜನ್ ಗಾಂಜಾ ಮಾರುವವನಾಗಿ ಕಾಣಿಸಲಿದ್ದಾರೆ. ರಾಘವೇಂದ್ರ ರಾಜ್ ಕುಮಾರ್, ನಾನಾ ಪಾಟೇಕರ್ ಅಭಿನಯಿಸಲಿರುವುದು ಒಂದೆಡೆಯಾದರೆ, ಈ ಚಿತ್ರದ ಮೂಲಕ ಹಿರಿಯ ತಾರೆ ಸರಿತಾ ಪುನಃ ಸ್ಯಾಂಡಲ್‍ವುಡ್‌ಗೆ ಅಡಿಯಿಡುತ್ತಿದ್ದು ಸಿನಿಮಾ ಹಲವಾರು ವಿಶೇಷತೆಗಳಿಂದ ಕೂಡಿದೆ.

ಇನ್ನು ದಿವಾಕರ್ ಬಗ್ಗೆ ಹೇಳಬೇಕೆಂದರೆ ವೃತ್ತಿಯಲ್ಲಿ ಸೇಲ್ಸ್‌ಮ್ಯಾನ್ ಆಗಿರುವ ಅವರು ಜನಸಾಮಾನ್ಯ ವಿಭಾಗದಲ್ಲಿ ಬಿಗ್ ಬಾಸ್ ಮನೆಗೆ ಅಡಿಯಿಟ್ಟಿದ್ದರು. ಅಲ್ಲಿನ ಮತ್ತೊಬ್ಬ ಸ್ಪರ್ಧಿ ಚಂದನ್‌ಗೆ ಆತ್ಮೀಯ ಗೆಳೆಯರಾದರು. ದಿವಾಕರ್ ಜತೆಗೆ ಸಿನಿಮಾ ಮಾಡುವುದಾಗಿಯೂ ಹೇಳಿಕೊಂಡಿದ್ದರು ಚಂದನ್.

ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ದಿವಾಕರ್ ಹೊಸ ಕಾರು ಖರೀದಿಸಿ ಕಿಚ್ಚ ಸುದೀಪ್‌ ಜತೆಗೆ ಒಂದೆರಡಿ ರೌಂಡ್ ಹಾಕಿ ಖುಷಿಪಟ್ಟಿದ್ದರು. ಬಿಗ್ ಬಾಸ್ ಸೀಸನ್ 4ನ್ನು ಗೆದ್ದಿದ್ದ ಪ್ರಥಮ್‌ರನ್ನೂ ಭೇಟಿಯಾಗಿದ್ದರು ದಿವಾಕರ್. ಇದೀಗ ಸ್ಯಾಂಡಲ್‌ವುಡ್‌ಗೆ ಅಡಿಯಿಡುವ ಮೂಲಕ ಅವರ ಹೊಸ ಇನ್ನಿಂಗ್ಸ್ ಶುರುವಾಗಿದೆ.

Comments are closed.