ಮನೋರಂಜನೆ

ಈ ಬಾರಿಯ ಚುನಾವಣೆಗೆ ಪ್ರಚಾರಕ್ಕಿಳಿಯಲಿರುವ ಸಿನೆಮಾ ಸ್ಟಾರ್’ಗಳು !

Pinterest LinkedIn Tumblr

ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಪರವಾಗಿ ಹಲವು ಸಿನಿಮಾ ನಟ ನಟಿಯರು ಭಾಗವಹಿಸಲಿದ್ದಾರೆ.

ನಟ ಕಿಚ್ಚ ಸುದೀಪ್ ಹಾಗೂ ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಜೆಡಿಎಸ್ ಪರವಾಗಿ ಜನರಲ್ಲಿ ಮತ ಕೇಳಲು ರೆಡಿಯಾಗಿದ್ದಾರೆ.ಇನ್ನೂ ತಾವೇನು ಕಡಿಮೆ ಇಲ್ಲ ಎಂಬಂತೆ ಬಿಜೆಪಿ ಬಾಲಿವುಡ್ ನಟಿ ಹೇಮಮಾಲಿನಿ ಹಾಗೂ ನವರಸ ನಾಯಕ ಜಗ್ಗೇಶ್ ಅವರನ್ನು ಪ್ರಚಾರಕ್ಕೆ ಕರೆ ತರಲು ಸಿದ್ದತೆ ನಡೆಸಿದೆ. ಕಾಂಗ್ರೆಸ್ ಕೂಡ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರನ್ನು ಬಳಸಿಕೊಳ್ಳಲಿದೆ.

ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ಪಾಲ್ಗೋಳ್ಳುವಂತೆ ನಟ ಸುದೀಪ್ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮನವಿ ಮಾಡಿದ್ದು, ಚೆಂಡು ಈಗ ಸುದೀಪ್ ಅಂಗಳದಲ್ಲಿದೆ. ಇತ್ತೀಚೆಗೆ ನಟ ಸುದೀಪ್ ಕುಮಾರ ಸ್ವಾಮಿ ಅವರ ಮನೆಗೆ ಭೇಟಿ ನೀಡಿದ್ದು ಹಲವು ಕುತೂಹಲಗಳಿಗೆ ಕಾರಣವಾಗಿತ್ತು.

ಕುಮಾರ ಸ್ವಾಮಿ ಅವರ ಮನವಿ ಮೇರೆಗೆ ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಜೆಡಿಎಸ್ ಪರ ಪ್ರಚಾರ ದಲ್ಲಿ ಭಾಗವಹಿಸಲು ಸಮ್ಮತಿಸಿದ್ದಾರೆ ಎಂದು ಜೆಡಿಎಸ್ ವಕ್ತಾರ ರಮೇಶ್ ಬಾಬು ಹೇಳಿದ್ದಾರೆ.. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಬಳ್ಳಾರಿ ಮತ್ತು ರಾಯಚೂರುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆಲುಗು ಮಾತನಾಡುವ ಜನರಿದ್ದ, ಅಲ್ಲೆಲ್ಲಾ ಪವನ್ ಕಲ್ಯಾಣ್ ಪ್ರಚಾರ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಪ್ರಚಾರದ ವೇಳೆ ಪಟ್ಟಿ ತಯಾರಿಸಲಾಗುವುದು ಎಂದು ಅವರು ಹೇಳಿದ್ದಾರೆ,

ಇನ್ನೂ ಕಾಂಗ್ರೆಸ್ ಕೂಡ ಸ್ಯಾಂಡಲ್ ವುಡ್ ನಟಿ ರಮ್ಯಾ ಅವರನ್ನು ಪ್ರಚಾರ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಿದೆ. ಸದ್ಯ ರಮ್ಯ ಎಐಸಿಸಿ ಸಾಮಾಜಿಕ ಮಾಧ್ಯಮ ಘಟಕದ ಮುಖ್ಯಸ್ಥೆಯಾಗಿದ್ದಾರೆ, ರಮ್ಯಾ ಜೊತೆಗೆ ಅಂಬರೀಶ್, ಮಾಲಾಶ್ರೀ, ಅಭಿನಯ, ಭಾವನಾ ಜಯಮಾಲಾ ಕೂಡ ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಕಾರ್ಯದರ್ಶಿ ಮಿಲಿಂದ್ ಧರ್ಮಸೇನಾ ತಿಳಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ನಟ ಪ್ರಕಾಶ್ ರಾಜ್ ಅವರನ್ನು ಪ್ರಚಾರಕ್ಕೆ ಕರೆ ತರಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ.

ಸ್ಟಾರ್ ಪ್ರಚಾರಕರನ್ನು ಬಳಸಿಕೊಳ್ಳುವಲ್ಲಿ ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ, ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ ಮೆಗಾ ಸ್ಟಾರ್ ಆಗಿರಲಿದ್ದಾರೆ, ಇವರ ಜೊತೆಗೆ ನಟ ಜಗ್ಗೇಶ್, ತಾರಾ ಅನುರಾಧ, ಶೃತಿ, ಮಾಳವಿಕಾ ಅವಿನಾಶ್ ಹಾಗೂ ಬಾಲಿವುಡ್ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಕೂಡ ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ಪಾಲ್ಗೋಳ್ಳಲಿದ್ದಾರೆ.

Comments are closed.