ಜೋಧ್‌ಪುರ: ಇಲ್ಲಿನ ಸೆಂಟ್ರಲ್ ಜೈಲಿನಲ್ಲಿ ಎರಡು ರಾತ್ರಿಗಳನ್ನು ಕಳೆದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಇಪ್ಪತ್ತು ವರ್ಷಗಳ ಹಿಂದಿನ ಕೃಷ್ಣ ಮಗಬೇಟೆ ಪ್ರಕರಣದಲ್ಲಿ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿಯೂ ಇಂದು ಶನಿವಾರ ಜಾಮೀನು ಪಡೆಯುವಲ್ಲಿ ಸಫಲರಾಗಿ ಸಂಜೆಯ ವೇಳೆ ಜೈಲಿನಿಂದ ಹೊರ ಬಿದ್ದರು.
ಬ್ಲ್ಯಾಕ್ ಟೀ, ಡೆನಿಮ್, ಡಾರ್ಕ್ ಶೇಡ್‌ನ ಉಡುಗೆ ಧರಿಸಿ ಕ್ಯಾಪ್ ತೊಟ್ಟಿದ್ದ ಸಲ್ಮಾನ್ ಖಾನ್ ಅವರು ಸುಮಾರು 13 ಮಂದಿ ಬಾಡಿ ಗಾರ್ಡ್‌ಗಳೊಂದಿಗೆ ಕಾರಿನಲ್ಲಿ ಜೋಧ್‌ಪುರ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬಾಡಿಗೆ ವಿಮಾನದಲ್ಲಿ ಮುಂಬಯಿಗೆ ಪ್ರಯಾಣಿಸಿದರು.
ಕಳೆದ ಗುರುವಾರದಿಂದಲೂ ಜೋಧ್‌ಪುರದಲ್ಲೇ ಬೀಡು ಬಿಟ್ಟಿರುವ ಸಹೋದರಿಯರಾದ ಅಲ್ವಿರಾ ಮತ್ತು ಅರ್ಪಿತಾ ಅವರು ಕೂಡ ಸಲ್ಮಾನ್ ರನ್ನು ಸೇರಿಕೊಂಡರು ಎಂದು ವರದಿಗಳು ತಿಳಿಸಿವೆ.
“ಬಂಧೀಖಾನೆ ಆವರಣದ ಪ್ರಕ್ರಿಯೆಗಳು ಮುಗಿದಿವೆ. ನಾವು ವಿಮಾನ ನಿಲ್ದಾಣದಲ್ಲಿ ಮತ್ತು ಪ್ರಯಾಣದ ಸಂದರ್ಭದಲ್ಲಿ ಅಗತ್ಯವಿರುವ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸಿದ್ದೇವೆ’ ಎಂದು ಜೋಧ್‌ಪುರ ಡಿಸಿಪಿ (ಪೂರ್ವ) ಅಮನ್‌ದೀಪ್ ಸಿಂಗ್ ಕಪೂರ್ ಮಾಧ್ಯಮಕ್ಕೆ ತಿಳಿಸಿದರು.
ವಿಮಾನ ನಿಲ್ದಾಣದ ವರೆಗಿನ ಸಲ್ಮಾನ್ ಖಾನ್ ಪ್ರಯಾಣದ ಸುರಕ್ಷೆ ಮತ್ತು ಭದ್ರತೆಗಾಗಿ ನಿಯೋಜಿಸಲಾಗಿದ್ದ ಅನೇಕ ಪೊಲೀಸ್ ಸಿಬಂದಿಗಳು ಮತ್ತು ಭದ್ರತಾ ವಾಹನಗಳು ಸಲ್ಮಾನ್ ಅವರ ಕಾರನ್ನು ಹಿಂಬಾಲಿಸಿ ಸಾಗಿದವು.
ಜಾಮೀನಿನಲ್ಲಿರುವಾಗ ವಿದೇಶಕ್ಕೆ ಹೋಗಲು ಬಯಸಿದಲ್ಲಿ ತನ್ನ ಪೂರ್ವಾನುಮತಿಯನ್ನು ಸಲ್ಮಾನ್ ಪಡೆಯಬೇಕಾಗುವುದು ಕೋರ್ಟ್ ಶರತ್ತು ವಿಧಿಸಿದೆ.
-ಉದಯವಾಣಿ
Comments are closed.