ಮನೋರಂಜನೆ

ಅರ್ಜುನ್‌ ಗೌಡ ಚಿತ್ರದಲ್ಲಿ ಪ್ರಿಯಾಂಕಾ

Pinterest LinkedIn Tumblr


ನಿರ್ಮಾಪಕ ರಾಮು ಈಗ “ಅರ್ಜುನ್‌ ಗೌಡ’ ಎಂಬ ಸಿನಿಮಾ ಮಾಡುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈ ಚಿತ್ರವನ್ನು ಶಂಕರ್‌ ನಿರ್ದೇಶಿಸುತ್ತಿದ್ದಾರೆ. ರಾಮು ಬ್ಯಾನರ್‌ನಲ್ಲಿ ಇದು 38ನೇ ಚಿತ್ರ. ಈಗ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ.

ಅದು ಪ್ರಿಯಾಂಕಾ. ಕನ್ನಡ ಚಿತ್ರರಂಗದಲ್ಲಿ ಪ್ರಿಯಾಂಕಾ ಹೆಸರಿನ ಎರಡ್ಮೂರು ನಾಯಕಿಯರು ಇರುವುದರಿಂದ ಯಾವ ಪ್ರಿಯಾಂಕಾ ಎಂಬ ಸಂದೇಹ ಕಾಡುವುದು ಸಹಜ. ನಿಮಗೆ “ಗಣಪ’ ಸಿನಿಮಾ ನೆನಪಿದ್ದರೆ ಪ್ರಿಯಾಂಕಾ ಮುಖ ಕಣ್ಣ ಮುಂದೆ ಬರಬಹುದು.

ಆ ನಂತರ ಪ್ರಿಯಾಂಕಾ ಗಣೇಶ್‌ ನಾಯಕರಾಗಿದ್ದ “ಪಟಾಕಿ’ ಸಿನಿಮಾದಲ್ಲಿ ತಂಗಿಯಾಗಿ ನಟಿಸಿದ್ದರು. ಈಗ ಪ್ರಿಯಾಂಕಾಗೆ “ಅರ್ಜುನ್‌ ಗೌಡ’ ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿದೆ. ಪ್ರಿಯಾಂಕಾಗೆ ಇಲ್ಲಿ ವಿಭಿನ್ನ ಪಾತ್ರವಿದೆಯಂತೆ.

ಇನ್ನು, “ಅರ್ಜುನ್‌ ಗೌಡ’ ಚಿತ್ರ ಪಕ್ಕಾ ಆ್ಯಕ್ಷನ್‌, ಲವ್‌ಸ್ಟೋರಿ ಇರುವ ಚಿತ್ರವಂತೆ. ರಾಮು ಬ್ಯಾನರ್‌ನಲ್ಲಿ ಬಂದ ಬಹುತೇಕ ಚಿತ್ರಗಳಲ್ಲಿ ಆ್ಯಕ್ಷನ್‌ಗೆ ಹೆಚ್ಚು ಮಹತ್ವ ಇದ್ದೇ ಇರುತ್ತೆ. ಹಾಗಾಗಿ “ಅರ್ಜುನ್‌ ಗೌಡ’ ಚಿತ್ರದಲ್ಲೂ ಅದು ಹೆಚ್ಚಾಗಿಯೇ ಇರಲಿದೆಯಂತೆ.

ಭರ್ಜರಿ ವೆಚ್ಚದಲ್ಲಿ ತಯಾರಾಗುತ್ತಿರುವ “ಅರ್ಜುನ್‌ ಗೌಡ’ ಚಿತ್ರದಲ್ಲಿ ಪ್ರಜ್ವಲ್‌ ಮೂರು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ, ಪ್ರಜ್ವಲ್‌ ದೇವರಾಜ್‌ ಹೀರೋ ಆಗಿ ಪಕ್ಕಾ ಆಗಿದ್ದಾರೆ. ಬೆಂಗಳೂರು ಸೇರಿದಂತೆ ವಿದೇಶದಲ್ಲೂ “ಅರ್ಜುನ್‌ ಗೌಡ’ ಚಿತ್ರದ ಚಿತ್ರೀಕರಣ ನಡೆಯಲಿದೆ.

ಚಿತ್ರಕ್ಕೆ ಜೈ ಆನಂದ್‌ ಛಾಯಾಗ್ರಹಣ ಮಾಡಿದರೆ, ಧರ್ಮ ಮಿಲಿಂದ್‌ ಅವರ ಸಂಗೀತವಿದೆ. ಚಿತ್ರದಲ್ಲಿ “ಸ್ಪರ್ಶ’ ರೇಖಾ, ದೀಪಕ್‌ ಶೆಟ್ಟಿ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಮುಂದಿನ ವಾರ ಚಿತ್ರೀಕರಣ ಆರಂಭವಾಗಲಿದೆ.

Comments are closed.