ಮನೋರಂಜನೆ

ಕಲಾ ಕುಟುಂಬ ಸನಾದಿ ಅಪ್ಪಣ್ಣರ ಗಿರಿಮೊಮ್ಮಗಳು ಕೀರ್ತಿ ಕಲ್ಕೆರೆ ಚಿತ್ರರಂಗಕ್ಕೆ ಎಂಟ್ರಿ!

Pinterest LinkedIn Tumblr


ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿಯನ್ನಾಧರಿಸಿ ಡಾ. ರಾಜಕುಮಾರ್‌ ಅಭಿನಯದಲ್ಲಿ “ಸನಾದಿ ಅಪ್ಪಣ್ಣ’ ಎಂಬ ಚಿತ್ರವು ತೆರೆಗೆ ಬಂದಿದ್ದು ಗೊತ್ತೇ ಇದೆ. ಕೃಷ್ಣಮೂರ್ತಿ ಪುರಾಣಿಕರು ತಮ್ಮ ಮನೆಯ ಎದುರಿಗಿದ್ದ ಸನಾದಿ ಅಪ್ಪಣ್ಣರ ವ್ಯಕ್ತಿತ್ವ ಕುರಿತು ಕಾದಂಬರಿ ಬರೆದಿದ್ದರು. ಅದನ್ನಾಧರಿಸಿ ಮಾಡಿದ ಚಿತ್ರವೂ ಸಾಕಷ್ಟು ಜನಪ್ರಿಯವಾಗಿತ್ತು. ಹೊಸ ಸುದ್ದಿಯೇನೆಂದರೆ, ಈಗ ಚಿತ್ರರಂಗಕ್ಕೆ, ಸನಾದಿ ಅಪ್ಪಣ್ಣ
ಅವರ ಗಿರಿ ಮೊಮ್ಮಗಳ ಎಂಟ್ರಿಯಾಗಿದೆ.

ಅಂದಹಾಗೆ, ಆ ಹುಡುಗಿಯ ಹೆಸರು ಕೀರ್ತಿ ಕಲ್ಕೆರೆ. ಹುಬ್ಬಳ್ಳಿಯ ಕೀರ್ತಿ ಕಲ್ಕೆರೆ, ಸನಾದಿ ಅಪ್ಪಣ್ಣ ಅವರ ಗಿರಿ ಮೊಮ್ಮಗಳು ಎಂಬುದು ವಿಶೇಷ. ಈಕೆ ನಟಿಸುತ್ತಿರುವ ಚಿತ್ರದ ಹೆಸರು “ರತ್ನಮಹಲ್‌’. ಕೀರ್ತಿ ಕಲ್ಕೆರೆ ಈಗಷ್ಟೇ ಪದವಿ ಓದುತ್ತಿದ್ದಾಳೆ. ಇವರ ತಾಯಿ ಅಶ್ವಿ‌ನಿ ಅವರಿಗೆ ಸನಾದಿ ಅಪ್ಪಣ್ಣ ಮುತ್ತಾತ. ಅಶ್ವಿ‌ನಿ ಅವರ ತಂದೆಗೆ ತಾತ.

ಅಲ್ಲಿಗೆ ಸನಾದಿ ಅಪ್ಪಣ್ಣ ಅವರ ಕುಟುಂಬದ ಕುಡಿಯಾಗಿರುವ ಕೀರ್ತಿ ಇದೇ ಮೊದಲ ಬಾರಿಗೆ ಚಿತ್ರರಂಗಕ್ಕೆ ಎಂಟ್ರಿಯಾದಂತಾಗಿದೆ. ಸನಾದಿ ಅಪ್ಪಣ್ಣ ಅವರದು ಕಲಾ ಕುಟುಂಬ. ಆದರೆ, ಇದುವರೆಗೆ ಯಾರೊಬ್ಬರೂ ಚಿತ್ರರಂಗಕ್ಕೆ ಬಂದಿಲ್ಲ. ಈಗ ಸಿಕ್ಕ ಅವಕಾಶವನ್ನು ಬಳಸಿಕೊಂಡ ಖುಷಿ ಕೀರ್ತಿ ಕಲ್ಕೆರೆ ಅವರದು.

ಅಂದಹಾಗೆ, “ರತ್ನಮಹಲ್‌’ ಚಿತ್ರಕ್ಕೆ ರವಿ ಕಡೂರು ನಿರ್ದೇಶಕರು. ಚಿತ್ರದ ಕಥೆ ಮತ್ತು ಪಾತ್ರಕ್ಕೆ ಉತ್ತರ ಕರ್ನಾಟಕದ ಹುಡುಗಿ ಬೇಕಾಗಿದ್ದರಿಂದ ನಿರ್ದೇಶಕ ರವಿ ಕಡೂರು, ಫೇಸ್‌ಬುಕ್‌, ಇನ್‌ಸ್ಟಗ್ರಾಮ್‌ನಲ್ಲಿ ಒಂದು ಸ್ಟೇಟಸ್‌ ಹಾಕಿದಾಗ, ಅಲ್ಲಿ ಸಿಕ್ಕವರೇ ಈ ಕೀರ್ತಿ ಕಲ್ಕೆರೆ. ಕೊನೆಗೆ ಹುಬ್ಬಳ್ಳಿಗೆ ಹೋದಾಗಲಷ್ಟೇ ಕೀರ್ತಿ, ಅಪ್ಪಣ್ಣ ಅವರ ಕುಟುಂಬದ ಕುಡಿ ಅನ್ನೋದು ಗೊತ್ತಾಗಿದೆ. ಕೊನೆಗೆ ನಿರ್ದೇಶಕ ರವಿ ಕಡೂರು, ಕಥೆ, ಪಾತ್ರದ ವಿವರಣೆ ಕೊಟ್ಟಾಗ, ಕೀರ್ತಿ ಮನೆಯವರು ಒಪ್ಪಿಕೊಂಡಿದ್ದಾರೆ. ನಟನೆಗೆ ವರ್ಕ್‌ಶಾಪ್‌ ಮಾಡಿಸಿದ ನಿರ್ದೇಶಕರು ಕ್ಯಾಮೆರಾ
ಮುಂದೆ ನಿಲ್ಲಿಸಿದ್ದಾರೆ. ಈಗಾಗಲೇ ಶೇ. 25 ರಷ್ಟು ಚಿತ್ರೀಕರಣ ನಡೆದಿದೆ.

ಚಿತ್ರದಲ್ಲಿ ಮುಂದಿನ ಜನರೇಷನ್‌ ಕಥೆ ಇದೆ. ಈಗಿನ ಟ್ರೆಂಡ್‌ಗಿಂತಲೂ ಮುಂದುವರೆದ ಜಗತ್ತು ಹೇಗೆಲ್ಲಾ ಇರುತ್ತೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳುವ ನಿರ್ದೇಶಕರು, ಸುಮಾರು 40 ದಿನಗಳ ಕಾಲ ಬೆಂಗಳೂರು, ಭದ್ರಾವತಿ, ಶಿವಮೊಗ್ಗ, ಚಿಕ್ಕಮಗಳೂರು, ಕಳಸ, ಕುದುರೆಮುಖ ಇತರೆಡೆ ಚಿತ್ರೀಕರಿಸುವುದಾಗಿ ಹೇಳುತ್ತಾರೆ. ಚಿತ್ರಕ್ಕೆ ಮಿಥುನ್‌ ವಿಜಯ್‌ ಭಾಸ್ಕರ್‌ ನಾಯಕ. ಧರ್ಮತೇಜ ನಿರ್ಮಾಪಕರು. ಇನ್ನು, ಚಿತ್ರಕ್ಕೆ ವಿ.ಮನೋಹರ್‌ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದರೆ, ಸತೀಶ್‌ ರಾಜೇಂದ್ರನ್‌ ಛಾಯಾಗ್ರಹಣವಿದೆ. ಈಗಾಗಲೇ ಯೂಟ್ಯೂಬ್‌ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಆಗಿದೆ.

Comments are closed.