ನವದೆಹಲಿ: ಕನ್ನಡತಿ, ಬಾಲಿವುಡ್ ತಾರೆ ದೀಪಿಕಾ ಪಡುಕೋಣೆಯ ಮೇಣದ ಪ್ರತಿಮೆ ಲಂಡನ್ ಮತ್ತು ದೆಹಲಿಯ ಮೇಡಮ್ ಟುಸಾಡ್ಸ್ನ ಮ್ಯೂಸಿಯಂನಲ್ಲಿ ಅತಿ ಶೀಘ್ರದಲ್ಲೇ ಕಂಗೊಳಿಸಲಿದೆ.
ಈ ಕುರಿತು ಸೋಮವಾರ ಫೇಸ್ಬುಕ್ ಲೈವ್ ಮಾಡಿರುವ ದೀಪಿಕಾ ಪಡುಕೋಣೆ, ಪ್ರತಿಮೆ ಅನಾವರಣವಾಗುತ್ತಿರುವ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಮೊದಲ ಪ್ರತಿಮೆ ಮುಂದಿನ ವರ್ಷಾರಂಭದಲ್ಲಿ ಲಂಡನ್ನಲ್ಲಿಯೂ, ನಂತರ ದೆಹಲಿಯ ಮ್ಯೂಸಿಯಂನಲ್ಲಿಯೂ ಸ್ಥಾಪನೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
“ನನ್ನ ಪ್ರತಿಮೆಯನ್ನು ಮೇಡಮ್ ಟುಸಾಡ್ಸ್ನಲ್ಲಿ ಸ್ಥಾಪಿಸುತ್ತಿರುವುದಕ್ಕೆ ನನಗೆ ಆತೀವ ಸಂತೋಷವಾಗಿದೆ. ಮ್ಯೂಸಿಯಮ್ನ ಮೇಣದ ಪ್ರತಿಮೆ ರಚನಾಕಾರ ಕಲಾವಿದರೊಂದಿಗೆ ನಡೆದ ಮಾತುಕತೆ ನನ್ನನ್ನು ಉಲ್ಲಸಿತಳನ್ನಾಗಿಸಿದೆ,” ಎಂದು ಅವರು ಹೇಳಿಕೊಂಡಿದ್ದಾರೆ.
ಲಂಡನ್ನ ಮೇಡಮ್ ಟುಸಾಡ್ಸ್ ಮ್ಯೂಸಿಯಮ್ನ ಕಲಾವಿದರು ಮತ್ತು ಪರಿಣತರು ಲಂಡನ್ನಲ್ಲಿ ದೀಪಿಕಾ ಪಡುಕೋಣೆ ಅವರನ್ನು ಭೇಟಿಯಾಗಿದ್ದು, ಪ್ರತಿಮೆ ರಚಿಸಲು ದೀಪಿಕಾ ಅವರ 200 ಸೂಕ್ಷ್ಮ ಅಳತೆಗಳನ್ನು ಮತ್ತು ಫೋಟೋಗಳನ್ನು ಸಂಗ್ರಹಿಸಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಅವರು ತಾವು ಚಿಕ್ಕವರಿದ್ದಾಗ ತಮ್ಮ ತಂದೆ ತಾಯಿಯೊಂದಿಗೆ ಒಂದೇ ಒಂದು ಬಾರಿ ಮಾತ್ರ ಭೇಟಿ ನೀಡಿದ್ದರಂತೆ. ಆ ನೆನಪು ತಮಗೆ ಇನ್ನೂ ಹಸಿರಾಗಿದೆ ಎಂದಿರುವ ಅವರು, ಈಗ ತಮ್ಮ ಮೇಣದ ಪ್ರತಿಮೆ ರಚನೆಗೆ ಲಂಡನ್ನ ಮ್ಯೂಸಿಯಂನಿಂದ ಪತ್ರ ಪಡೆದಿರುವ ಬಗ್ಗೆ ದೀಪಿಕಾ ಹೇಳಿಕೊಂಡಿದ್ದಾರೆ.
ಲಂಡನ್ ಮೇಡಮ್ ಟುಸಾಡ್ಸ್ ಮ್ಯೂಸಿಯಂನಲ್ಲಿ ಕೆಲವೇ ಬಾಲಿವುಡ್ ತಾರೆಯರ ಪ್ರತಿಮೆಗಳನ್ನು ಮಾತ್ರ ಸ್ಥಾಪಿಸಲಾಗಿದೆ. ಸದ್ಯ ದೀಪಿಕಾ ಅವರು ಆ ಸಾಲಿಗೆ ಸೇರಲಿದ್ದಾರೆ.
Comments are closed.