ಓಂ ಪ್ರಕಾಶ್‌ರಾವ್ ನಿರ್ದೇಶನದ ಹೊಸ ಚಿತ್ರದಲ್ಲಿ ರವಿಚಂದ್ರನ್ ಹಾಗೂ ಉಪೇಂದ್ರ ನಟಿಸುತ್ತಿರುವ ಸುದ್ದಿ ಎಲ್ಲರಿಗೂ ಗೊತ್ತು. ಈ ಚಿತ್ರದಲ್ಲಿ ನಿಮಿಕಾ ನಾಯಕಿಯಾಗಿ ನಟಿಸುತ್ತಾರೆ ಎಂಬ ಸುದ್ದಿಯೂ ಹೊರಬಿದ್ದಿತ್ತು. ಈಗ ಹೊಸ ಸುದ್ದಿಯೆಂದರೆ, ಚಿತ್ರಕ್ಕೆ ಮತ್ತೂಬ್ಬ ನಾಯಕಿಯಾಗಿ ಸಾನ್ವಿ ಆಯ್ಕೆಯಾಗಿದ್ದಾರೆ.
ಹೌದು, ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಈ ಹಿಂದೆ “ಚಂದ್ರಲೇಖ’ ಚಿತ್ರದ ಮೂಲಕ ಸಾನ್ವಿ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಆ ಸಿನಿಮಾ ಬಳಿಕ ಸಾನ್ವಿ, ಕನ್ನಡದಲ್ಲೇ ಗಟ್ಟಿ ನೆಲೆಯೂರಿದರು. ಅಲ್ಲದೆ, ಸ್ಟಾರ್ ಚಿತ್ರಗಳಲ್ಲೇ ಕಾಣಿಸಿಕೊಳ್ಳುತ್ತಾ ಹೋದರು.
“ತಾರಕ್’,”ಮಾಸ್ಟರ್ ಪೀಸ್’,”ಮಫ್ತಿ’, “ಭಲೇಜೋಡಿ’, “ಸುಂದರಾಂಗ ಜಾಣ’ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಸಾನ್ವಿ, ಈಗ “ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಪುನಃ ಓಂ ಪ್ರಕಾಶ್‌ರಾವ್ ಅವರ ಕಾಂಬಿನೇಷನ್‌ನ ಎರಡನೇ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಈ ಕುರಿತು ಸ್ವತಃ ಟ್ವೀಟ್ ಮಾಡಿರುವ ಸಾನ್ವಿ, “ಚಂದ್ರಲೇಖ’ ಸಿನಿಮಾ ನಂತರ ಓಂ ಪ್ರಕಾಶ್‌ರಾವ್ ಅವರ ಜೊತೆ ಕೆಲಸ ಮಾಡುತ್ತಿರುವುದು ಖುಷಿಕೊಟ್ಟಿದೆ. ಉಪೇಂದ್ರ ಮತ್ತು ರವಿಚಂದ್ರನ್ ಅವರು ನಟಿಸುತ್ತಿರುವ ಚಿತ್ರದಲ್ಲಿ ನಾನು ತೆರೆ ಹಂಚಿಕೊಳ್ಳುತ್ತಿರುವುದು ಇನ್ನಷ್ಟು ಸಂತಸಗೊಂಡಿದೆ.
ಚಿತ್ರದಲ್ಲಿ ನನಗೊಂದು ಒಳ್ಳೆಯ ಪಾತ್ರವಿದೆ’ ಎಂದು ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕಿನ್ನೂ ಶೀರ್ಷಿಕೆ ಇಟ್ಟಿಲ್ಲ ಆಗಸ್ಟ್ 11 ರಂದು ಭರ್ಜರಿ ಫೋಟೋಶೂಟ್ ನಡೆಸಲು ನಿರ್ಧರಿಸಿರುವ ನಿರ್ದೇಶಕರು, ಆ.20 ರಂದು ಚಿತ್ರಕ್ಕೆ ಚಾಲನೆ ಕೊಡಲಿದ್ದಾರೆ. ಅಂದಹಾಗೆ, ಚಿತ್ರದ ಕಥೆ ವಿಭಿನ್ನವಾಗಿದ್ದು, ರವಿಚಂದ್ರನ್ ಮತ್ತು ಉಪೇಂದ್ರ ಅವರ ಪಾತ್ರಗಳು ತುಂಬಾ ಫ್ರೆಶ್ ಆಗಿವೆ ಎಂಬುದು ನಿರ್ದೇಶಕರ ಮಾತು.
ಇನ್ನು, ಅವರಿಗೆ ಇಬ್ಬರು ನಾಯಕಿರಿದ್ದು, ಈ ಹಿಂದೆಯೇ ನಿಮಿಕಾ ರತ್ನಾಕರ್ ಆಯ್ಕೆಯಾಗಿದ್ದರು. ಈಗ ಸಾನ್ವಿ ಆಯ್ಕೆಯಾಗಿದ್ದಾರೆ. ಈ ಚಿತ್ರವನ್ನು ಆರ್.ಎಸ್.ಪ್ರೊಡಕ್ಷನ್ಸ್‌ನಡಿ ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿದ್ದಾರೆ. ಅರ್ಜುನ್ ಜನ್ಯಾ ಸಂಗೀತವಿದೆ. ರವಿಕುಮಾರ್ ಛಾಯಾಗ್ರಹಣವಿದೆ. ಶ್ರೀಕಾಂತ್ ಸಂಕಲನ ಮಾಡುತ್ತಿದ್ದಾರೆ. ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ.
Comments are closed.