ಬೆಂಗಳೂರು: ಸ್ಯಾಂಡಲ್‍ವುಡ್ ನ ಬಹುನಿರೀಕ್ಷಿತ ‘ಕುರುಕ್ಷೇತ್ರ’ ಸಿನಿಮಾ ಬಿಡುಗಡೆಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಸಿನಿಮಾ ಬಿಡುಗಡೆಯಾಗುವುದಕ್ಕೆ ತಡವಾಗುತ್ತಿದೆ. ಇದಕ್ಕೆ ಸ್ವತಃ ನಿರ್ಮಾಪಕ ಮುನಿರತ್ನ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
‘ಕುರುಕ್ಷೇತ್ರ’ ಒಂದು ಪೌರಾಣಿಕ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ಸಿಜೆ (computer graphics) ಕೆಲಸ ತುಂಬ ಇದೆ. ಆದರೆ ನಾವು ಅಂದುಕೊಂಡ ಹಾಗೆ ಬರುತ್ತಿಲ್ಲ. ಅದಕ್ಕೆ ಪದೇ ಪದೇ ರೀ ವರ್ಕ್ ಮಾಡುತ್ತಿದ್ದೇವೆ. ಆದ್ದರಿಂದ ಈ ಸಿನಿಮಾ ಬಿಡುಗಡೆಗೆ ತಡವಾಗುತ್ತಿದೆ ಎಂದು ಮುನಿರತ್ನ ಅವರು ಹೇಳಿದ್ದಾರೆ.
ಕುರುಕ್ಷೇತ್ರಕ್ಕೆ ಕೋಟಿ ಕೋಟಿ ಹಾಕಿ ಸಿನಿಮಾ ಮಾಡಿದ್ದೇವೆ. ನಾನು ಜನರಿಗೆ ಉತ್ತಮ ಕ್ವಾಲಿಟಿಯಲ್ಲಿ ಸಿನಿಮಾ ತೋರಿಸಬೇಕು ಎನ್ನುವ ಕನಸು ನನಗಿದೆ. ಆದ್ದರಿಂದ ಸಿನಿಮಾದ ಕೆಲಸಗಳು ನಡೆಯುತ್ತಿದೆ. ನನ್ನ ಕನಸು ಈಡೇರುವ ತನಕ `ಕುರುಕ್ಷೇತ್ರ’ ತೆರೆ ಮೇಲೆ ಬರಲ್ಲ ಎಂದು ಮುನಿರತ್ನ ತಿಳಿಸಿದ್ದಾರೆ.
ಕುರುಕ್ಷೇತ್ರ ಸಿನಿಮಾದಿಂದ ನಟ ದರ್ಶನ್ ಮತ್ತು ನಿಖಿಲ್ ಕುಮಾರ್ ಮಧ್ಯೆ ಮನಸ್ತಾಪ ಬಂದಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಮುನಿರತ್ನ ಅವರು ಪ್ರತಿಕ್ರಿಯಿಸಿದ್ದು, ಈ ಸಿನಿಮಾದ ಬಗ್ಗೆ ಯಾರಿಗೂ ಮನಸ್ತಾಪವಿಲ್ಲ. ಎಲ್ಲರೂ ಸಂತೋಷದಿಂದ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಹಿಂದೆ ಕುರುಕ್ಷೇತ್ರದ ಬಗ್ಗೆ ಊಹಾಪೋಹ ಸುದ್ದಿಗಳು ಹರಿದಾಡಿದ್ದಾಗ ನಟ ನಿಖಿಲ್ ಕುಮಾರ್, ಚಿತ್ರ ನನ್ನಿಂದಾಗಿ ನಿಂತಿಲ್ಲ. ಸಿನಿಮಾದ ಸಿಜೆ ಕೆಲಸ ತಡವಾಗಿದ್ದರಿಂದ ಲೇಟ್ ಆಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದರು.
ಈ ಸಿನಿಮಾದಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ದರ್ಶನ್, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಡೈಲಾಗ್ ಕಿಂಗ್ ಸಾಯಿಕುಮಾರ್, ಶಶಿಕುಮಾರ್, ಆರ್ಮುಗಂ ಖ್ಯಾತಿಯ ರವಿಶಂಕರ್, ಶ್ರೀನಿವಾಸ್ ಮೂರ್ತಿ, ಸೋನು ಸೂದ್ ಹಾಗೂ ಪ್ರಣಯ ರಾಜ ಶ್ರೀನಾಥ್ ಕಾಣಿಸಿಕೊಳ್ಳಲಿದ್ದಾರೆ. ನೀರ್ ದೋಸೆ ಬೆಡಗಿ ಹರಿಪ್ರಿಯಾ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಪವಿತ್ರಾ ಲೋಕೇಶ್ ಕೂಡ ಈ ಕುರುಕ್ಷೇತ್ರ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
Comments are closed.