ಬೆಂಗಳೂರು: ಜಿಮ್ ತರಬೇತುದಾದ ಮಾರುತಿಗೌಡ ಅಪಹರಣ ಹಾಗೂ ಹಲ್ಲೆ ಪ್ರಕರಣದಲ್ಲಿ ಆರೋಪಿಗಳಾದ ನಟ ದುನಿಯಾ ವಿಜಿ, ಪ್ರಸಾದ್, ಮಣಿ ಹಾಗೂ ಪ್ರಸಾದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 8ನೇ ಎಸಿಎಂಎಂ ನ್ಯಾಯಾಲಯ ಬುಧವಾರ ವಜಾಗೊಳಿಸಿದ್ದು, ಇದರಿಂದ ವಿಜಿ ಹಾಗೂ ಸ್ನೇಹಿತರಿಗೆ ಜೈಲೇ ಗತಿಯಾಗಿದೆ.
ಅಪಹರಣ ಹಾಗೂ ಹಲ್ಲೆ ಪ್ರಕರಣದ ಕುರಿತ ಜಾಮೀನು ಅರ್ಜಿಯ ವಾದ, ಪ್ರತಿವಾದ ಆಲಿಸಿದ್ದ ಕೋರ್ಟ್ ತೀರ್ಪನ್ನು ಸೆ.26ಕ್ಕೆ ಕಾಯ್ದಿರಿಸಿತ್ತು. ಇಂದು ಜಾಮೀನು ಅರ್ಜಿಯನ್ನು ನ್ಯಾ.ಮಹೇಶ್ ಬಾಬು ಅವರು ವಜಾಗೊಳಿಸಿ ತೀರ್ಪು ನೀಡಿದ್ದಾರೆ.
ಪರಪ್ಪನ ಅಗ್ರಹಾರ ಕೋರ್ಟ್ ನಲ್ಲಿ ಟಿವಿ ವೀಕ್ಷಣೆಗೆ ಅವಕಾಶ ಕೋರಿದ್ದ ದುನಿಯಾ ವಿಜಿಗೆ ಜೈಲು ಅಧಿಕಾರಿಗಳು ಅವಕಾಶ ಕಲ್ಪಿಸಿದ್ದರು. ತನ್ನ ಜಾಮೀನು ಅರ್ಜಿ ವಜಾಗೊಂಡ ಸುದ್ದಿ ಬಿತ್ತರಗೊಳ್ಳುತ್ತಿದ್ದಂತೆಯೇ ದುನಿಯಾ ವಿಜಿ ಕಣ್ಣೀರು ಹಾಕಿರುವುದಾಗಿ ವರದಿ ತಿಳಿಸಿದೆ.
ಜಾಮೀನಿಗಾಗಿ ಸೆಷನ್ಸ್ ಕೋರ್ಟ್ ಮೊರೆ?
ಅಪಹರಣ ಹಾಗೂ ಹಲ್ಲೆ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ನಿರಾಕರಿಸಿರುವ ಹಿನ್ನೆಲೆಯಲ್ಲಿ ನಾಳೆ ಜಾಮೀನಿಗಾಗಿ ಸೆಷೆನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸುವುದಾಗಿ ದುನಿಯಾ ವಿಜಿ ಪರ ವಕೀಲರಾದ ಶಿವಕುಮಾರ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಮ್ಯಾಜಿಸ್ಟ್ರೇಟ್ ಕೋರ್ಟ್ ನ ಆದೇಶದ ಪ್ರತಿ ದೊರೆತ ಕೂಡಲೇ ಸೆಷನ್ಸ್ ಕೋರ್ಟ್ ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
Comments are closed.