ಬೆಂಗಳೂರು: ನನಗೆ ಕೆಟ್ಟ ಹೆಸರು ತರಲು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ನಟ ಚೇತನ್ ಹೇಳಿದ್ದಾರೆ.
ಅರ್ಜುನ್ ಸರ್ಜಾ ವಿರುದ್ಧ ಸೇಡು ತೀರಿಸಿಕೊಳ್ಳಲು ಶೃತಿ ಹರಿಹರನ್ ಪರವಾಗಿ ಚೇತನ್ ಮತಾನಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ನ್ಯಾಯಕ್ಕಾಗಿ, ಸಮಾಜದ ಒಳಿತಿಗಾಗಿ ಮತ್ತು ಉತ್ತಮ ಚಿತ್ರರಂಗಕ್ಕಾಗಿ ಹೋರಾಡುವ ಚಳುವಳಿಯನ್ನು ನಿಲ್ಲಿಸುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ. 10 ಲಕ್ಷ ರೂ. ಹಣವನ್ನ ಮುಂಗಡವಾಗಿ ಪಡೆದಿರುವ ವಿಚಾರವನ್ನ ಕೆಲವರು ಟ್ವಿಸ್ಟ್ ಮಾಡಿ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಅರ್ಜುನ್ ಸರ್ಜಾ ಅವರು ನನಗೆ ಕೆಲ ವರ್ಷಗಳಿಂದ ಪರಿಚಯ. ಅವರ ಜೊತೆ ನಾನು ಪ್ರೇಮ ಬರಹ ಚಿತ್ರವನ್ನ ಮಾಡಲು ಒಪ್ಪಿಕೊಂಡಿದ್ದು ನಿಜ. ಈ ಚಿತ್ರದ ಸಂಬಂಧ ಫೋಟೋ ಸೆಶನ್, ಪ್ರೀ ಶೂಟ್ ಸಹ ನಡೆದಿತ್ತು. ಆದರೆ ಕಾರಣಾಂತರಗಳಿಂದ ಪ್ರೇಮ ಬರಹ ಸಿನಿಮಾವನ್ನ ನಾನು ಮಾಡಲಿಕ್ಕೆ ಆಗಲಿಲ್ಲ. ಅವತ್ತಿನಿಂದ ಇಲ್ಲಿಯವರೆಗೂ ಸರ್ಜಾ ಅವರ ಜೊತೆ ನಾನು ಸಂಪರ್ಕದಲ್ಲಿ ಇದ್ದೇನೆ. ಶೂಟಿಂಗ್ ಸಮಯದಲ್ಲಿ ಸರ್ಜಾ ಅವರು ಬಹಳ ಪ್ರೊಫೆಶನಲ್ ಆಗಿ ನಡೆದುಕೊಂಡಿದ್ದಾರೆ. ಅವರ ಕುಟುಂಬದವರು ಸಹ ನನ್ನ ಜೊತೆ ಒಳ್ಳೆಯ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಹೇಳಿದರು.
ಅರ್ಜುನ್ ಸರ್ಜಾ ಅವರು ನನಗೆ ಯಾವತ್ತೂ ಹಣವನ್ನು ಹಿಂದಿರುಗಿಸುವಂತೆ ಇಲ್ಲಿಯವರೆಗೆ ಕೇಳಲಿಲ್ಲ. ಆದರೆ ಮುಂಬರುವ ಸಿನಿಮಾದಲ್ಲಿ ನಾವಿಬ್ಬರು ಕೆಲಸ ಮಾಡಲು ನಿರ್ಧರಿಸಿದ್ದೇವೆ. ಮುಂಗಡ ಹಣವನ್ನು ತೆಗೆದುಕೊಂಡ ತಕ್ಷಣವೇ ಯಾರು ಸಿನಿಮಾ ಮಾಡಲು ರೆಡಿಯಾಗಿರಲ್ಲ. ಕೆಲವೊಮ್ಮೆ ಹಣ ಪಡೆದು 6 ತಿಂಗಳ ಬಳಿಕವೂ ಕೆಲಸ ಮಾಡುತ್ತಾರೆ ಎಂದರು.
ಮೋದಿ ವಿರೋಧಿಗಳು ಮತ್ತು ಎಡಪಂಥೀಯರು ಸೇರಿ ಶೃತಿ ಹರಿಹರನ್ ಪರವಾಗಿ ಮಾತನಾಡುತ್ತಿದ್ದಾರೆ ಎನ್ನುವ ಆರೋಪಕ್ಕೆ, ನಾನು ಈ ವಿಚಾರದಲ್ಲಿ ರಾಜಕೀಯವಾಗಿ ಯಾವುದೇ ಕೆಲಸ ಮಾಡುತ್ತಿಲ್ಲ. ನಮ್ಮ ಸಂಘಟನೆಯಲ್ಲಿರುವ ವ್ಯಕ್ತಿಗಳೆಲ್ಲರಿಗೂ ಅವರದ್ದೇ ಆದ ಆಲೋಚನೆಗಳು ಮತ್ತು ಅಭಿಪ್ರಾಯಗಳು ಇರುತ್ತದೆ. ಆದರೆ ಎಲ್ಲರ ಗುರಿ ಸಮಾಜದಲ್ಲಿ ಉತ್ತಮ ಚಿತ್ರರಂಗವನ್ನು ಕಟ್ಟುವುದು ಮತ್ತು ಎಲ್ಲರ ಸಮಾನತೆಗಾಗಿ ಹೋರಾಟ ನಡೆಸುವುದು. ನಾವು ಕೇವಲ ಪುರುಷ ಪ್ರಧಾನ ವ್ಯವಸ್ಥೆ ವಿರುದ್ಧ, ಶೋಷಣೆಯ ವಿರುದ್ಧ ಮತ್ತು ನೊಂದವರ ಪರವಾಗಿ ಹೋರಾಟ ನಡೆಸುತ್ತೇವೆ. ಇದರಲ್ಲಿ ಸಮಸ್ಯೆ ಇದ್ದರೆ ನಮ್ಮ ಜೊತೆ ಚರ್ಚೆ ನಡೆಸಲಿ ಎಂದು ಚೇತನ್ ಹೇಳಿದರು.
ನಟಿ ಶೃತಿ ವಿಚಾರಕ್ಕೆ ಬಂದರೆ, ನಮ್ಮ ಫೈರ್ ಸಂಸ್ಥೆಯಿಂದ ಅವರಿಗೆ ನಾವು ಕಾನೂನುಬದ್ಧ ಬೆಂಬಲವನ್ನ ಕೊಟ್ಟಿದ್ದೇವೆ. ಆದರೆ ಈ ಸಂಬಂಧ ನಾವು ಯಾವುದೇ ವಿಚಾರಣೆಯನ್ನ ನಡೆಸುತ್ತಿಲ್ಲ. ಕೇಸ್ ದಾಖಲಿಸುವುದು ಬಿಡುವುದು ಅವರ ತೀರ್ಮಾನ ಎಂದರು.
ನನ್ನ ವಿರುದ್ಧ ಫಿಲಂ ಚೇಂಬರ್ ನಲ್ಲಿ ದೂರು ದಾಖಲಾಗಿದೆ ಎನ್ನುವ ಸುದ್ದಿಯನ್ನು ನಾನು ಕೇಳಲ್ಪಟ್ಟೆ. ಆದರೆ ಇದೂವರೆಗೂ ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
Comments are closed.