ಮನೋರಂಜನೆ

ಫೈರ್ ಸಂಸ್ಥೆಯನ್ನು ಮುನ್ನಡೆಸುವ ಸಾಮರ್ಥ್ಯ ಪ್ರಿಯಾಂಕಾಗೆ ಇಲ್ಲ: ನಟ ಚೇತನ್

Pinterest LinkedIn Tumblr


ಬೆಂಗಳೂರು: ತಾವು ಹುಟ್ಟುಹಾಕಿರುವ ಫೈರ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ನಟಿ ಪ್ರಿಯಾಂಕಾ ಉಪೇಂದ್ರ ರಾಜೀನಾಮೆ ನೀಡಿರುವ ಮತ್ತು ತಮ್ಮ ವೃತ್ತಿ ಬಗ್ಗೆ ನಟ ಚೇತನ್ ಸ್ಪಷ್ಟೀಕರಣ ನೀಡಿದ್ದಾರೆ.
ಫೈರ್ ಸಂಸ್ಥೆ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಲು ತಾತ್ವಿಕ ಭಿನ್ನಾಭಿಪ್ರಾಯ ಕಾರಣ ಎಂದು ಪ್ರಿಯಾಂಕಾ ಉಪೇಂದ್ರ ಹೇಳಿದ್ದರು. ಆದರೆ ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ನಟ ಚೇತನ್ ”ಹಿಂದಿನ ಅಧ್ಯಕ್ಷರಿಗೆ (ಪ್ರಿಯಾಂಕಾ ಉಪೇಂದ್ರ) ಕಾರ್ಯದಕ್ಷತೆ, ಸಾಮರ್ಥ್ಯ, ಒಳಗೊಳ್ಳುವಿಕೆ, ಜವಾಬ್ದಾರಿಯುತವಾಗಿ ‘ಫೈರ್’ ಅನ್ನು ಮುನ್ನಡೆಸುವ ಧೈರ್ಯ ಇರಲಿಲ್ಲ ಎಂದು ಹೇಳಿದ್ದಾರೆ.
ಶ್ರುತಿ ಹರಿಹರನ್ ಫೈರ್ ಸಂಸ್ಥೆಗೆ ಏಕೆ ದೂರು ನೀಡಲಿಲ್ಲ ಎಂಬ ಬಗ್ಗೆ ಸ್ಪಷ್ಟೀಕರಣ ಕೊಟ್ಟಿರುವ ಅವರು, ‘ಶ್ರುತಿ ಹರಿಹರನ್ ಲೈಂಗಿಕ ಕಿರುಕುಳ ಪ್ರಕರಣದ ವಿಷಯದಲ್ಲಿ ಶ್ರುತಿರವರು ಫೈರ್ ನ ಆಂತರಿಕ ದೂರು ಸಮಿತಿಯಲ್ಲಿ ದೂರು ದಾಖಲಿಸಿಲ್ಲ. ಮೂರು ತಿಂಗಳ ಒಳಗೆ ನಡೆದ ಲೈಂಗಿಕ ಕಿರುಕುಳದ ಪ್ರಕರಣಗಳನ್ನಷ್ಟೆ ಕಾನೂನಿನ ಪ್ರಕಾರ ಆಂತರಿಕ ದೂರು ಸಮಿತಿಯು ತನಿಖೆ ನಡೆಸಲು ಸಾಧ್ಯ. ಇದು ನಮ್ಮ ಆಂತರಿಕ ದೂರು ಸಮಿತಿಯ ಮಿತಿ. ಎರಡು ವರ್ಷಗಳ ಹಿಂದೆ ಈ ಘಟನೆ ನಡೆದಿರುವುದರಿಂದಾಗಿ ಇದು ನಮ್ಮ ಮಿತಿಯೊಳಗೆ ಬರುವುದಿಲ್ಲ”
”ಆದ್ದರಿಂದ, ಫೈರ್ ಮಿ ಟೂ ಚಳವಳಿಗೆ ಬೆಂಬಲವನ್ನು ಒದಗಿಸಿದೆ, ಶ್ರುತಿಯವರ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತೇವೆ ಎಂದಿಲ್ಲ. ಶ್ರುತಿ ಫೈರ್ ಮತ್ತು ಆಂತರಿಕ ದೂರು ಸಮಿತಿಯ ಸದಸ್ಯರಾಗಿದ್ದಾರೆ. ಫೈರ್ ನ ಪ್ರಮುಖ ಸ್ಥಾನಗಳಲ್ಲಿದ್ದ ಕೆಲವು ಸದಸ್ಯರು ಸಂಸ್ಥೆಯನ್ನು ತೊರೆದಿದ್ದಾರೆ. ಅವರಿಗೆ ಸರಿಯಾಗಿ ಕಾಣುವ ಯಾವುದೇ ಕಾರಣಕ್ಕಾದರೂ ಅವರು ಸಂಸ್ಥೆಯನ್ನು ತೊರೆಯಲು ಮುಕ್ತರಾಗಿದ್ದಾರೆ. ಫೈರ್ ಸಂಸ್ಥಾಪಕನಾಗಿ ಮಹಿಳೆಯರು ಯಾವಾಗಲೂ ಶಕ್ತಿಯುತ ಸ್ಥಾನದಲ್ಲಿರಬೇಕು ಎಂದು ನಾನು ನಂಬಿದ್ದೇನೆ. ಹಾಗಾಗಿ ನಮ್ಮ ಸಂಸ್ಥೆಗೆ ಮಹಿಳೆಯೆ ಅಧ್ಯಕ್ಷರಾಗಬೇಕೆಂಬ ನಿರ್ಧಾರದೊಂದಿಗೆ ನಾನೆ ಅಧ್ಯಕ್ಷನಾಗಿರಲು ನಿರಾಕರಿಸಿದ್ದೇನೆ’ ಎಂದಿದ್ದಾರೆ.
ಇನ್ನು ತಾವು ಕನ್ನಡ ಚಿತ್ರರಂಗ ತೊರೆದು ಅಮೆರಿಕಾಕ್ಕೆ ವಾಪಸ್ಸು ಹೋಗುತ್ತೇನೆ ಎಂಬ ಕೆಲ ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ತಳ್ಳಿ ಹಾಕಿರುವ ಚೇತನ್, ಕರ್ನಾಟಕ ನನ್ನ ಮನೆ, ನಾನು ಬದುಕಲು, ಸೇವೆ ಮಾಡಲು ಆಯ್ಕೆ ಮಾಡಿಕೊಂಡಿರುವ ಈ ಬೀಡು ನನ್ನ ಪ್ರೀತಿಯ ನೆಲ. ಕೆಲವು ಮಾಧ್ಯಮಗಳು ನಾನು ಶೀಘ್ರದಲ್ಲೇ ಯು.ಎಸ್ ಗೆ ಹೋಗುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಇದು ಅತಿರೇಕದ ವಿಷಯ. ನಾನು ಯು.ಎಸ್ ಗೆ ಹೋಗುತ್ತಿಲ್ಲ ಮತ್ತು ನಾನು ನಾಲ್ಕು ವರ್ಷಗಳಿಂದ ಅಲ್ಲಿಗೆ ಹೋಗಿಲ್ಲ ಎಂದಿದ್ದಾರೆ.

Comments are closed.