ಮನೋರಂಜನೆ

ಅರ್ಜುನ್​-ಶ್ರುತಿ ಹರಿಹರನ್ ಪ್ರಕರಣ ವಿಚಾರಣೆ ಅ. 29ಕ್ಕೆ ಮುಂದೂಡಿಕೆ

Pinterest LinkedIn Tumblr


ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ #MeToo ಅಭಿಯಾನದಡಿ ಆರೋಪ ಮಾಡಿದ್ದೇ ತಡ ಸ್ಯಾಂಡಲ್​ವುಡ್​ನಲ್ಲಿ​ ಬಿರುಗಾಳಿಯೇ ಎದ್ದಿದೆ. ಈ ವಿಚಾರ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿವೆ. ಪ್ರತಿದಿನ ಪರ – ವಿರೋಧ ಚರ್ಚೆಗಳಾಗುತ್ತಿವೆ. ಅದರಂತೆ ಇಂದು ಸಹ ಇದೇ ವಿಚಾರದಲ್ಲಿ ಸಾಕಷ್ಟು ಬೆಳವಣಿಗೆಯಾಗಿದೆ. ಆ ಕುರಿತ ಒಂದು ವರದಿ ಇಲ್ಲಿದೆ ಓದಿ.

ಚಂದನವನದಲ್ಲಿ #MeToo ಬಿಸಿ ಇನ್ನೂ ತಣ್ಣಗಾಗೇ ಇಲ್ಲ. ಪ್ರತಿದಿನ ಇದು ಮತ್ತಷ್ಟು ಬಿಸಿ ಸುದ್ದಿಯಾಗುತ್ತಿದೆ. ಇಂದು ಸಹ ಇದು ಬೇರೆ ಬೇರೆ ರೀತಿಯಲ್ಲೇ ಸುದ್ದಿಯಾಯಿತು. ಕರ್ನಾಟಕ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಂಧಾನ ವಿಫಲವಾದ ಕಾರಣ, ಅರ್ಜುನ್ ಸರ್ಜಾ ಮಧ್ಯರಾತ್ರಿಯೇ ಚೆನ್ನೈಗೆ ತೆರಳಿದ್ದಾರೆ. ಇಂದು ಶ್ರುತಿ ವಿರುದ್ದ ಚೆನ್ನೈನಲ್ಲಿ ದೂರು ದಾಖಲಿಸಿದ್ದಾರೆ.

ನಿನ್ನೆ (ಅ.25)ಯಷ್ಟೆ ಅರ್ಜುನ್​ ಸರ್ಜಾ ಮೇಯೋಹಾಲ್​ ಬಳಿ ಇರುವ 29ನೇ ಸೆಷನ್ಸ್​ ನ್ಯಾಯಾಲಯದಲ್ಲಿ ಶ್ರುತಿ ವಿರುದ್ಧ 5 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಶ್ರುತಿ ಅವರ ವಾದ ಅಲಿಸುವ ಸಲುವಾಗಿ ಅವರಿಗೆ ನೊಟೀಸ್​ ಜಾರಿ ಮಾಡುವಂತೆ ಆದೇಶ ನೀಡಿ, ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿದೆ.

ಇತ್ತ ಶ್ರುತಿ ಕೂಡ ಅರ್ಜುನ್ ಆಪ್ತ ಪ್ರಶಾಂತ್ ಸಂಬರ್ಗಿ ಅವರ ವಿರುದ್ಧ ನಿನ್ನೆ ರಾತ್ರಿಯೇ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಪ್ರಕರಣ ದೂರು ದಾಖಲಿಸಿದ್ದರು. ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯ ನೀಡದ ಕಾರಣ ಪೊಲೀಸರು ನ್ಯಾಯಾಲಯದ ಮೊರೆ ಹೋಗಿದ್ದರು. ನಂತರ ನ್ಯಾಯಾಲಯದ ಆದೇಶದಂತೆ ಪೊಲೀಸರು ಪ್ರಶಾಂತ್​ ಸಂಬರ್ಗಿ ವಿರುದ್ಧ ಜೀವ ಬೆದರಿಕೆ ಪ್ರಕರಣ ದಾಖಲಿಸಿಕೊಂಡು ಸೆಕ್ಷನ್ 506, 509ರ ಅಡಿಯಲ್ಲಿ ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

ಆದರೆ ಒಂದು ಕಡೆ ಶ್ರುತಿ ಇಲ್ಲಿಯವರೆಗೆ ಅರ್ಜುನ್​ ಸರ್ಜಾ ಅವರ ಆಪ್ತ ಸಂಬರ್ಗಿ ವಿರುದ್ಧ ಮಾತ್ರ ಕಾನೂನು ಕ್ರಮಕ್ಕೆ ಮುಂದಾಗಿದ್ದು, ಅರ್ಜುನ್ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ. ಇದು ಎಲ್ಲೋ ಒಂದು ಕಡೆ ಕೋರ್ಟ್-ಕಚೇರಿ ಅಂತ ಅಲೆಯೋ ಬದಲು, ಈ ವಿವಾದವನ್ನು ಹಾಗೆ ಬಗೆಹರಿಸಿಕೊಳ್ಳುವ ಉದ್ದೇಶದಲ್ಲಿ ಶ್ರುತಿ ಇದ್ದಾರಾ ಅನ್ನೋ ಅನುಮಾನಕ್ಕೆ ಕಾರಣವಾಗಿದೆ.

ಶ್ರುತಿ ಆರೋಪಕ್ಕೆ ಪರ – ವಿರೋಧ ವ್ಯಕ್ತವಾಗುತ್ತಿದ್ದು, ಪ್ರೆಸ್​​​ಕ್ಲಬ್​ನಲ್ಲಿ ಶ್ರುತಿ ಪರ ವಕೀಲ ಅನಂತ್​ ನಾಯಕ್​ ಸುದ್ದಿಗೋಷ್ಠಿ ನಡೆಸಿದರು. ವಾಣಿಜ್ಯ ಮಂಡಳಿ ಅರ್ಜುನ್ ಸರ್ಜಾ ಹಾಗೂ ಶ್ರುತಿ ನಡುವೆ ಸಂಧಾನ ಯತ್ನವನ್ನು ಕೈಚೆಲ್ಲಿದೆ. ಇದರ ನೇತೃತ್ವ ವಹಿಸಿದ್ದ ಅಂಬರೀಷ್ ಸಹ ಸಂಧಾನದಿಂದ ದೂರ ಉಳಿದಿದ್ದಾರೆ. ಇಬ್ಬರೂ ಕಾನೂನು ಮೊರೆ ಹೋಗುತ್ತಿರುವುದರಿಂದ ನ್ಯಾಯಾಲಯದಲ್ಲಿಯೇ ಬಗೆಹರಿಸಿಕೊಳ್ಳಲಿ ಅಂತ ಸುಮ್ಮನಾಗಿದ್ದಾರೆ.

#MeToo ಆರೋಪ ಮಾಡಿರುವವರ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ್ದ ಹರ್ಷಿಕಾ ಮಾಧ್ಯಮಗಳೆದುರು ಮತ್ತೆ ಬಾಂಬ್​ ಸಿಡಿಸಿದ್ದಾರೆ. ಈ ಅಭಿಯಾನದ ಬಗ್ಗೆ ಮಾತನಾಡಿದ್ದಕ್ಕೆ ತನಗೂ ಬೆದರಿಕೆ ಕರೆಗಳು ಬರುತ್ತಿವೆ. ಅಲ್ಲದೆ ಕೆಲ ನಟಿಯರು ವಿದೇಶಗಳಿಗೆ ಹೋಗಿ ಗಣ್ಯವ್ಯಕ್ತಿಗಳಿಂದ ಅನುಕೂಲಗಳನ್ನು ಪಡೆಯುತ್ತಾರೆ ಎಂದು ಆರೋಪಿಸುವ ಮೂಲಕ ಈ #MeToo ಆರೋಪಗಳಿಗೆ ಮತ್ತೊಂದು ತಿರುವು ನೀಡಿದ್ದಾರೆ.

Comments are closed.