ಬೆಂಗಳೂರು: ಚಿತ್ರನಟ ದುನಿಯಾ ವಿಜಿ ಕುಟುಂಬ ಕಲಹ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಈಗ ದುನಿಯಾ ವಿಜಿ ಮೊದಲ ಪತ್ನಿ ನಾಗರತ್ನ ಎರಡನೇ ಪತ್ನಿ ಕೀರ್ತಿಗೌಡ ಮನೆಗೆ ಏಕಾಏಕಿ ನುಗ್ಗಿ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಸಿಸಿಟಿವಿ ದೃಶ್ಯಗಳು ಬಹಿರಂಗವಾಗಿವೆ.
ಈ ಸಂಬಂಧ ಕೀರ್ತಿಗೌಡ ಅವರು ನಾಗರತ್ನ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಚಾರಣೆಗಾಗಿ ಪೊಲೀಸರು ಗಿರಿನಗರದಲ್ಲಿರುವ ನಾಗರತ್ನ ಮನೆಗೆ ತೆರಳಿದ್ದರು. ಈ ವೇಳೆ ನಾಗರತ್ನ ಆಗಲಿ, ಅವರ ಮಗಳಾಗಲಿ ಬಾಗಿಲು ತೆಗೆಯದೆ ಕಿಟಕಿ ಮೂಲಕವೇ ಮಾತನಾಡಿ ಪೊಲೀಸರನ್ನು ವಾಪಸ್ ಕಳುಹಿಸಿದ್ದಾರೆ.
ತಾವು ವಿಚಾರಣೆಗಾಗಿ ಆಗಮಿಸಿದ್ದು, ಯಾವುದೇ ಶೋಧ ಕಾರ್ಯಕ್ಕಲ್ಲ ಎಂದು ಪೊಲೀಸರು ಸಮಜಾಯಿಸಿ ನೀಡಿದರೂ, ಬಾಗಿಲು ತೆಗೆಯಲು ವಿಜಿ ಪತ್ನಿ ಹಾಗೂ ಪುತ್ರಿ ನಿಕಾಕರಿಸಿದ್ದಾರೆ. ಇಂದು ಬೆಳಿಗ್ಗೆಯಿಂದಲೇ ಮಹಿಳಾ ಪೊಲೀಸ್ ಸಿಬ್ಬಂದಿ ನಾಗರತ್ನ ಮನೆ ಬಾಗಿಲು ಕಾಯುವಂತಾಗಿದೆ.
ಕೀರ್ತಿಗೌಡ ದಾಖಲಿಸಿರುವ ದೂರಿನನ್ವಯ ತನ್ನನ್ನು ಬಂಧಿಸಲೆಂದೇ ಪೊಲೀಸರು ಬಂದಿರಬಹುದು ಎಂಬ ಭೀತಿಯಲ್ಲಿ ನಾಗರತ್ನ ಬಾಗಿಲು ತೆಗೆಯಲು ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ನಟ ವಿಜಯ್ ಜೈಲಿನಲ್ಲಿದ್ದ ಸಂದರ್ಭದಲ್ಲಿ ನಾಗರತ್ನ ಅವರು ಕೀರ್ತಿಗೌಡ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
Comments are closed.