ಮನೋರಂಜನೆ

ದುನಿಯಾ ವಿಜಿ ಪತ್ನಿಗೆ ನಿರೀಕ್ಷಣಾ ಜಾಮೀನು

Pinterest LinkedIn Tumblr


ಬೆಂಗಳೂರು: ಕೀರ್ತಿಗೌಡ ಮೇಲೆ ಹಲ್ಲೆ ಎಸಗಿದ ಪ್ರಕರಣದ ಆರೋಪಿ ನಾಗರತ್ನ ಅವರು ಸದ್ಯಕ್ಕೆ ಬಂಧನದ ಭೀತಿಯಿಂದ ತಪ್ಪಿಸಿಕೊಂಡಿದ್ದಾರೆ. ದುನಿಯಾ ವಿಜಿ ಅವರ ಪತ್ನಿಯಾದ ನಾಗರತ್ನಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ನಗರ ಸಿವಿಲ್ ಕೋರ್ಟ್ ನ್ಯಾಯಾಧೀಶ ಜಕಾತಿ ಅವರು ನಾಗರತ್ನಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಕೊಟ್ಟಿದ್ದಾರೆ. 50 ಸಾವಿರ ಬಾಂಡ್ ಹಾಗೂ ಒಬ್ಬರ ಶೂರಿಟಿ ಪಡೆದು ಷರತ್ತಿನ ಮೇಲೆ ಜಾಮೀನು ಕೊಡಲಾಗಿದೆ. ಪೊಲೀಸರು ಕರೆದರೆ ವಿಚಾರಣೆಗೆ ಹಾಜರಾಗಬೇಕು ಎಂದು ಕೋರ್ಟ್ ಷರತ್ತು ವಿಧಿಸಿದ್ದು, ಮುಂದಿನ ವಿಚಾರಣೆಯನ್ನು ನ. 12ಕ್ಕೆ ಮುಂದೂಡಿದೆ. ಆದರೆ, ಇದು ಕೇವಲ ಮಧ್ಯಂತರ ಆದೇಶವಾಗಿದ್ದು, ನಿರೀಕ್ಷಣಾ ಜಾಮೀನು ಅರ್ಜಿಯ ಅಂತಿಮ ಆದೇಶ ಬರುವವರೆಗಷ್ಟೇ ಚಾಲ್ತಿಯಲ್ಲಿರುತ್ತದೆ.

ಸೆಪ್ಟೆಂಬರ್ 24ರಂದು ನಾಗರತ್ನ ಅವರು ತಮ್ಮ ಪತಿ ಹಾಗೂ ನಟ ದುನಿಯಾ ವಿಜಿ ಮನೆಗೆ ಹೋಗಿ ಎರಡನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ಎಸಗಿದ ವಿಷಯ ಕೆಲ ದಿನಗಳ ಹಿಂದೆ ಸಿಸಿಟಿವಿ ಮೂಲಕ ಬೆಳಕಿಗೆ ಬಂದಿದೆ. ಅಲ್ಲಿಯವರೆಗೂ ನಾಗರತ್ನ ಅವರು ತಮ್ಮ ಹಾಗೂ ತಮ್ಮ ಮಗಳ ಮೇಲೆ ಕೀರ್ತಿಗೌಡ ಮತ್ತವರ ಬೌನ್ಸರ್​ಗಳು ಹಲ್ಲೆ ನಡೆಸಿದ್ದರೆಂದು ದೂರು ಕೊಟ್ಟಿದ್ದರು. ಆದರೆ, ಸಿಸಿಟಿವಿಯ ದೃಶ್ಯಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸತ್ಯಾಂಶ ಬೆಳಕಿಗೆ ಬಂದಿದೆ. ಅಂದು, ಮಗಳ ನೆರವಿನಿಂದ ನಾಗರತ್ಯ ಅವರು ಕೀರ್ತಿಗೌಡ ಮನೆಗೆ ಹೋಗಿ ಹಲ್ಲೆ ಮಾಡಿರುವುದು ಈ ಸಿಸಿಟಿವಿಯಿಂದ ತಿಳಿದುಬಂದಿತ್ತು. ದುನಿಯಾ ವಿಜಿ ಅವರು ತಮ್ಮ ಮೊದಲ ಪತ್ನಿ ನಾಗರತ್ನ ಹಾಗೂ ಮಗಳು ಮೋನಿಕಾ ವಿರುದ್ಧ ದೂರು ದಾಖಲಿಸುತ್ತಾರೆ. ಮಾಧ್ಯಮಗಳಲ್ಲಿ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ನಾಗರತ್ನ ಅವರು ತಮ್ಮ ಕತ್ರಿಗುಪ್ತೆಯ ನಿವಾಸದಿಂದ ನಾಪತ್ತೆಯಾಗುತ್ತಾರೆ. ಆನೇಕಲ್ ಮೊದಲಾದ ಕಡೆ ಆಕೆಗಾಗಿ ಪೊಲೀಸರು ಹುಡುಕಾಡಿದರೂ ನಾಗರತ್ನ ಇದೂವರೆಗೂ ಪತ್ತೆಯಾಗಿಲ್ಲ. ಈ ಮಧ್ಯೆ ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ ಮಾಡುತ್ತಾರೆ. ಇದೀಗ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಸಿಕ್ಕಿದ್ದು, ಬೀಸೋ ದೊಣ್ಣೆಯಿಂದ ಸದ್ಯಕ್ಕೆ ಪಾರಾದಂತಾಗಿದೆ.

Comments are closed.