ಬೆಂಗಳೂರು: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ‘ಯಜಮಾನ’ ಚಿತ್ರದ ನಂತರ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಜೊತೆ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಜಯನಗರದ ಮಾಲ್ ಉದ್ಘಾಟನೆಗೆ ಬಂದಿದ್ದರು. ಈ ವೇಳೆ ಮಾಧ್ಯಮದವರು ನಿಮ್ಮ ಮುಂದಿನ ಕನ್ನಡ ಸಿನಿಮಾ ಯಾವುದು ಎಂದು ಪ್ರಶ್ನಿಸಿದ್ದರು. ಆಗ ರಶ್ಮಿಕಾ ಒಂದು ಸೂಪರ್ ಸಿನಿಮಾ ಬರುತ್ತಿದೆ. ಅದನ್ನ ನಾನು ಹೇಳಲ್ಲ. ಪ್ರೊಡಕ್ಷನ್ ಹೌಸ್‍ನವರೇ ಹೇಳಲಿ ಎಂದು ಉತ್ತರಿಸಿದ್ದರು.
ಸದ್ಯ ರಶ್ಮಿಕಾ ಅವರ ಮುಂದಿನ ಕನ್ನಡ ಚಿತ್ರ ಯಾವುದೆಂದು ಬಹಿರಂಗವಾಗಿದೆ. ರಶ್ಮಿಕಾ ನಟ ಧ್ರುವ ಸರ್ಜಾ ಅವರ ಬಹುನಿರೀಕ್ಷಿತ ‘ಪೊಗರು’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಈ ವಿಷಯದ ಬಗ್ಗೆ ಚಿತ್ರತಂಡ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ.
ಈ ಚಿತ್ರವನ್ನು ನಂದಕಿಶೋರ್ ನಿರ್ದೇಶನ ಮಾಡುತ್ತಿದ್ದಾರೆ. ಆದರೆ ರಶ್ಮಿಕಾ ಹೇಳಿದ್ದ ಸೂಪರ್ ಚಿತ್ರ ಇದೆನಾ ಅಥವಾ ಬೇರೆ ಚಿತ್ರದ ಬಗ್ಗೆ ಮಾತನಾಡಿದ್ದಾರಾ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಈ ಚಿತ್ರದ ಕತೆಯನ್ನು ಧ್ರುವ ಸರ್ಜಾ ಅವರ ಮಾವ ಅರ್ಜುನ್ ಸರ್ಜಾ ಬರೆದಿದ್ದಾರೆ. ಈವರೆಗೂ ಚಿತ್ರದ ನಾಯಕಿ ಯಾರು ಎನ್ನುವುದನ್ನು ನಿರ್ಧರಿಸಿರಲಿಲ್ಲ. ಸದ್ಯ ಈಗ ರಶ್ಮಿಕಾ ಚಿತ್ರದ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ.
ಸದ್ಯ ಪೊಗರು ಚಿತ್ರದ ಮೊದಲ ಶೂಟ್ ಮುಗಿದಿದೆ. ಈ ಚಿತ್ರದಲ್ಲಿ ಧ್ರುವ ಶಾಲೆ ಹುಡುಗನ ಲುಕ್‍ನಲ್ಲಿ ಶೂಟಿಂಗ್ ಮಾಡಿ ಮುಗಿಸಿದ್ದಾರೆ. ನವೆಂಬರ್ 20ರಂದು ಎರಡನೇ ಶೆಡ್ಯೂಲ್ ಆರಂಭವಾಗಲಿದೆ. ಎರಡನೇ ಶೆಡ್ಯೂಲ್‍ನಲ್ಲಿ ರಶ್ಮಿಕಾ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Comments are closed.