‘ರಾಕಿಂಗ್ ಸ್ಟಾರ್’ ಯಶ್ ನಟನೆಯ ‘ಕೆಜಿಎಫ್’ ಚಿತ್ರ ಮೂಡಿಸಿರುವ ನಿರೀಕ್ಷೆ ನೋಡಿದರೆ ಈ ಸಿನಿಮಾ ಬಾಕ್ಸ್ ಆಫೀಸ್ ಧೂಳೆಬ್ಬಿಸುವ ಎಲ್ಲ ಲಕ್ಷಣ ಗೋಚರವಾಗಿದೆ. ಈ ಸಿನಿಮಾದ ಪೋಸ್ಟರ್, ಟೀಸರ್, ಟ್ರೇಲರ್, ಹಾಡು ಹೀಗೆ ಎಲ್ಲವೂ ಸೂಪರ್ ಹಿಟ್ ಆಗುತ್ತಿವೆ. ಈಗ ಆನ್ಲೈನ್ ಬುಕಿಂಗ್ನಲ್ಲೂ ‘ಕೆಜಿಎಫ್’ನ ಅಬ್ಬರ ಮುಂದುವರಿದಿದೆ!
ಭಾನುವಾರದಿಂದ ‘ಕೆಜಿಎಫ್’ನ ಆನ್ಲೈನ್ ಟಿಕೆಟ್ ಬುಕಿಂಗ್ ಆರಂಭವಾಗಿದೆ. ಅಚ್ಚರಿ ಎಂದರೆ ಬುಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಡಿ.21ರ ಅನೇಕ ಶೋಗಳು ಸೋಲ್ಡ್ಔಟ್ ಆಗಿವೆ.! ಬಹುತೇಕ ಪ್ರದರ್ಶನಗಳು ಫಿಲ್ಲಿಂಗ್ ಫಾಸ್ಟ್ ಎನ್ನುವ ಸೂಚನೆ ತೋರಿಸುತ್ತಿದೆ. ಅಭಿಮಾನಿಗಳು ನಾ ಮುಂದು, ತಾ ಮುಂದು ಎಂದು ಟಿಕೆಟ್ ಕಾಯ್ದಿರಿಸುತ್ತಿದ್ದಾರೆ.
ಸದ್ಯ ಕೆಲವೇ ಕೆಲವು ಥಿಯೇಟರ್ಗಳಲ್ಲಿ ಮಾತ್ರ ಮುಂಗಡ ಟಿಕೆಟ್ ಕಾಯ್ದಿರಿಸಲು ಅನುವು ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಚಿತ್ರಮಂದಿರವನ್ನು ಇದಕ್ಕೆ ಸೇರ್ಪಡೆ ಮಾಡಲಾಗುತ್ತದೆಯಂತೆ. ಒಟ್ಟಿನಲ್ಲಿ ಕನ್ನಡ ಚಿತ್ರವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಕ್ರೇಜ್ ಹುಟ್ಟುಹಾಕಿರುವುದು ಖುಷಿಯ ವಿಚಾರವೇ ಸರಿ.
ಚಿತ್ರತಂಡ ಒಂದಾದರ ಮೇಲಂತೆ ಒಂದು ಹಾಡನ್ನು ಬಿಡುಗಡೆ ಮಾಡುತ್ತಿದೆ. ನಿನ್ನೆಯಷ್ಟೇ ರಿಲೀಸ್ ಆಗಿದ್ದ ‘ಜೋಕೆ ನಾನು ಬಳ್ಳಿಯ ಮಿಂಚು’ ಹಾಡು ಒಳ್ಳೆಯ ಪ್ರತಿಕ್ರಿಯೆ ಗಳಿಸಿಕೊಂಡಿತ್ತು. ‘ಕೆಜಿಎಫ್’ 5 ಭಾಷೆಗಳಲ್ಲಿ ತೆರೆಕಾಣುತ್ತಿದೆ. ವರ್ಷಾಂತ್ಯವಾದ್ದರಿಂದ ಸ್ಟಾರ್ ಚಿತ್ರಗಳ ಜೊತೆ ‘ಕೆಜಿಎಫ್’ ಪೈಪೋಟಿಗೆ ನಡೆಸಬೇಕಿದೆ. ಹಿಂದಿಯಲ್ಲಿ ಶಾರುಖ್ ಖಾನ್ ನಟನೆಯ ‘ಝೀರೋ’ ಚಿತ್ರ ಹಾಗೂ ತಮಿಳಿನಲ್ಲಿ ಧನುಶ್ ನಟನೆಯ ‘ಮಾರಿ 2’ ತೆರೆಕಾಣುತ್ತಿದೆ. ಹಾಗಾಗಿ ಬಾಕ್ಸ್ ಆಫೀಸ್ನಲ್ಲಿ ಈ ಬಾರಿ ದೊಡ್ಡ ಫೈಟ್ ನಡೆಯುವ ಎಲ್ಲ ಲಕ್ಷಣಗಳು ಗೋಚರವಾಗಿದೆ.
Comments are closed.