ಹೊಸದಿಲ್ಲಿ : ‘ದೇಶದಲ್ಲಿ ಕೆಲವರಿಗೆ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವಿದೆ’ ಎಂದು ಹೆಸರಾಂತ ಹಿಂದಿ ಚಿತ್ರ ನಟ, ರಂಗಭೂಮಿ ಕಲಾವಿದ ನಸೀರುದ್ದೀನ್ ಶಾ ಹೇಳಿದ್ದಾರೆ.
‘ದೇಶದ ಕೆಲವು ಭಾಗಗಳಲ್ಲಿ ಪೊಲೀಸ್ ಅಧಿಕಾರಿಯ ಸಾವಿಗಿಂತ ದನದ ಸಾವಿಗೆ ಹೆಚ್ಚಿನ ಪ್ರಾಧಾನ್ಯವಿದೆ’ ಎಂದು ನಸೀರುದ್ದೀನ್ ಶಾ ಯೂಟ್ಯೂಬ್ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
‘ದೇಶದಲ್ಲಿ ಈಗಿರುವ ಪರಿಸ್ಥಿತಿಯನ್ನು ಗಮನಿಸುವಾಗ ನನಗೆ ನನ್ನ ಮಕ್ಕಳ ಬಗ್ಗೆ ಚಿಂತೆಯಾಗುತ್ತಿದೆ; ಏಕೆಂದರೆ ಅವರು ಯಾವುದೇ ಧಾರ್ಮಿಕ ಶಿಕ್ಷಣ ಪಡೆದವರಲ್ಲ; ನಾವು ನಮ್ಮ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಕೊಡದಿರಲು ಏಕೆ ನಿರ್ಧರಿಸಿದೆವೆಂದರೆ ಒಳ್ಳೆಯದು ಮತ್ತು ಕೆಟ್ಟದ್ದಕ್ಕೆ ಧರ್ಮದ ಜತೆಗೇನೂ ಸಂಬಂಧ ಇರುವುದಿಲ್ಲ ಎಂದು ನಾವು ನಂಬಿಕೊಂಡ ಕಾರಣಕ್ಕೆ’ ಎಂದು ಶಾ ಹೇಳಿದರು.
‘ನಾವು ನಮ್ಮ ಮಕ್ಕಳಿಗೆ ಒಳ್ಳೆಯದೆಂದರೇನು, ಕೆಟ್ಟದ್ದೆಂದರೇನು ಎಂಬುದನ್ನು ಕಲಿಸಿದೆವು; ನಮ್ಮ ನಂಬಿಕೆಗಳೇನು ಎಂಬುದನ್ನು ಅವರಿಗೆ ತಿಳಿಸಿದೆವು. ನಾಳೆ ನಮ್ಮ ಮಕ್ಕಳನ್ನು ಉದ್ರಿಕ್ತರ ಗುಂಪು ಸುತ್ತುವರಿದು ನೀನು ಹಿಂದುವೋ ಮುಸ್ಲಿಮನೋ ಎಂದು ಕೇಳಿದರೆ ಅವರ ಬಳಿ ಯಾವುದೇ ಉತ್ತರ ಇರಲಾರದು’ ಎಂದು ಶಾ ಹೇಳಿದರು.
‘ಈ ದೃಷ್ಟಿಯಿಂದ ನೋಡಿದಾಗ ದೇಶದಲ್ಲಿನ ಪರಿಸ್ಥಿತಿ ಸದ್ಯೋಭವಿಷ್ಯದಲ್ಲಿ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ ಎನ್ನುವುದೇ ನನ್ನ ಭಯಕ್ಕೆ ಕಾರಣವಾಗಿದೆ. ವೈಯಕ್ತಿಕವಾಗಿ ನಾನು ಇದಕ್ಕೆಲ್ಲ ಹೆದರುವುದಿಲ್ಲ; ಆದರೆ ನನಗೆ ಆ ಬಗ್ಗೆ ಸಿಟ್ಟು ಬರುತ್ತದೆ. ನನ್ನ ಪ್ರಕಾರ ಎಲ್ಲ ಸಮರ್ಪಕ ಚಿಂತನೆಯ ವ್ಯಕ್ತಿಗಳು ಸಿಟ್ಟಿಗೇಳಬೇಕು; ಇದು ನಮ್ಮ ಮನೆ, ನಮ್ಮ ದೇಶ; ಯಾರೂ ನಮ್ಮನ್ನು ಇಲ್ಲಿಂದ ಎತ್ತಂಗಡಿ ಮಾಡುವಂತಿಲ್ಲ’ ಎಂದು ಶಾ ಹೇಳಿದರು.
Comments are closed.