ಮನೋರಂಜನೆ

ಲಂಚ ನೀಡುವುದಕ್ಕೆ  ಭಿಕ್ಷಾಟನೆ ಮಾಡುತ್ತಿರುವ ರೈತ ಕುಟುಂಬ….!

Pinterest LinkedIn Tumblr


ಹೈದರಾಬಾದ್​: ಇಲ್ಲೊಂದು ರೈತ ಕುಟುಂಬ ಹಣಕ್ಕಾಗಿ ಭಿಕ್ಷಾ ಪಾತ್ರೆ ಹಿಡಿದು ಒಂದು ವಾರದಿಂದ ಊರೂರು ಅಲೆಯುತ್ತಿದೆ. ಅವರಿಗೆ ಹಣ ಬೇಕು. ಆದರೆ, ಅದು ಹೊಟ್ಟೆ ತುಂಬಿಸಿಕೊಳ್ಳಲು ಅಲ್ಲ, ಬಟ್ಟೆಗಾಗಿಯೂ ಅಲ್ಲ. ಕೈತಪ್ಪಿ ಹೋದ ತಮ್ಮದೇ ಭೂಮಿಯನ್ನು ವಾಪಸ್​ ಪಡೆಯಲು ಅಧಿಕಾರಿಯೊಬ್ಬರಿಗೆ ಲಂಚ ನೀಡುವುದಕ್ಕೋಸ್ಕರ ಈ ಭಿಕ್ಷಾಟನೆ.

ಕರ್ನೂಲ್​ ಜಿಲ್ಲೆಯ ಮತ್ಕೂರ್​ ಹಳ್ಳಿಯ ರಾಯಲಾಸೀಮಾ ಪ್ರದೇಶದ ಸಣ್ಣ ರೈತ ಮಾನ್ಯಂ ವೆಂಕಟೇಶ್ವರುಲು ಅಲಿಯಾಸ್​ ರಾಜು, ಆತನ ಪತ್ನಿ ಹಾಗೂ ಇಬ್ಬರು ಸಣ್ಣ ಮಕ್ಕಳು ಹೀಗೆ ಭೂಮಿಗಾಗಿ ಭಿಕ್ಷಾಟನೆ ಮಾಡುತ್ತಿದ್ದಾರೆ.

ದಯವಿಟ್ಟು ಕೈಲಾದಷ್ಟು ಹಣ ನೀಡಿ. ಕಾರಣ ನಾನು ಕಂದಾಯ ಅಧಿಕಾರಿಗೆ ಲಂಚ ನೀಡಬೇಕು. ನೀವು ಹಣ ನೀಡಿದರೆ, ನಿಮ್ಮ ಯಾವ ಕೆಲಸವನ್ನಾದರೂ ನಾನು ಮಾಡಿಕೊಡುತ್ತೇನೆ. ಎರಡು ವರ್ಷಗಳ ಹಿಂದೆ ನನ್ನ ಭೂಮಿಯನ್ನು ಕಳೆದುಕೊಂಡು ಅದನ್ನು ಪಡೆಯಲು ಹೋರಾಡುತ್ತಿದ್ದೇನೆ. ನನ್ನ ಇಡೀ ಕುಟುಂಬ ಈಗ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿಕೊಂಡಿದೆ ಎಂದು ಮನೆಮನೆಗೆ ಹೋಗಿ ಅಂಗಲಾಚುತ್ತಿದ್ದಾರೆ.

ಹೀಗೆ ಭಿಕ್ಷಾಟನೆಗೆ ಹೊರಟ ಕುಟುಂಬ ಕೈಯಲ್ಲಿ ಬ್ಯಾನರ್​ಗಳನ್ನು ಹಿಡಿದು, ಅದರ ಮೇಲೆ ಭೂಮಿ ಪಡೆಯಲು ಲಂಚ ಕೊಡಬೇಕಾಗಿದೆ. ಅದಕ್ಕಾಗಿ ಹಣ ನೀಡಿ ಎಂದು ತೆಲುಗಿನಲ್ಲಿ ಬರೆಯಲಾಗಿದೆ. ಅದರ ಮೇಲೆ ರೈತನ ಮಕ್ಕಳ ಹೆಸರನ್ನೂ ನಮೂದಿಸಲಾಗಿದೆ.

ಭೂಮಿ ರೈತ ರಾಜು ಅವರ ಕೈತಪ್ಪಿದ್ದು ಹೇಗೆ: ಎರಡು ವರ್ಷಗಳ ಹಿಂದೆ ರಾಜು ಅವರ 22 ಎಕರೆ ಜಮೀನನ್ನು ಅವರ ಸಂಬಂಧಿಕರು ಮೋಸದಿಂದ ತಮ್ಮದಾಗಿಸಿಕೊಂಡಿದ್ದಾರೆ. ಕಂದಾಯ ಅಧಿಕಾರಿಗೆ ಹಣ ನೀಡಿ ದಾಖಲೆಗಳನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಅದನ್ನು ಅರಿತ ರಾಜು ಕಚೇರಿಗೆ ಹೋಗಿ ಅಧಿಕಾರಿಗಳಲ್ಲಿ ವಿಚಾರಿಸಿದ್ದಾರೆ. ಆದರೆ, ಅಲ್ಲಿನ ಅಧಿಕಾರಿಗಳು, ಜಮೀನು ದಾಖಲೆಗಳನ್ನು ಜಿಲ್ಲಾಧಿಕಾರಿಗೆ ಒಪ್ಪಿಸಲಾಗಿದೆ. ನಿಮಗೆ ಬೇಕೆಂದರೆ ಹಣ ನೀಡಬೇಕು ಎಂದು ಹೇಳಿದ್ದಾರೆ.

ಅದನ್ನು ಕೇಳಿದ ರಾಜು ಜಮೀನು ಪಡೆಯಲು ಹಲವು ಪ್ರಯತ್ನ ನಡೆಸಿದ್ದಾರೆ. ಆದರೆ, ಸಾಧ್ಯವಾಗದಾಗ ಹತಾಶಗೊಂಡು ಹೀಗೆ ಭಿಕ್ಷಾಟನೆ ಆರಂಭಿಸಿದ್ದಾರೆ.

Comments are closed.