ಮನೋರಂಜನೆ

ಕೆಜಿಎಫ್​ ವಿಮರ್ಶೆ: ಯಶ್ ಒಬ್ಬರೇ ಹೀರೋ ಅಲ್ಲ!

Pinterest LinkedIn Tumblr


‘ಕೆಜಿಎಫ್ ಚಿತ್ರದಲ್ಲಿ ನಾನೊಬ್ಬನೇ ಹೀರೋ ಅಲ್ಲ. ಈ ಸಿನಿಮಾದಲ್ಲಿ ಪ್ರತಿಯೊಬ್ಬರೂ ಮುಖ್ಯ ಪಾತ್ರ ವಹಿಸುತ್ತಾರೆ’ ಎಂದು ಯಶ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ‘ಕೆಜಿಎಫ್’ ನೋಡಿದ ಪ್ರತಿಯೊಬ್ಬನಿಗೂ ಇದು ಅಕ್ಷರಶಃ ಸತ್ಯ ಎನಿಸುತ್ತದೆ. ಹಾಗೆ ಈ ಚಿತ್ರ ಮೂಡಿ ಬಂದಿದೆ.

ರಾಕಿ (ಯಶ್​) ಬಡ ಕುಟುಂಬದಲ್ಲಿ ಹುಟ್ಟಿಬಂದವನು. ಆತನಿಗೆ ತಂದೆ ಇರುವುದಿಲ್ಲ. ತಾಯಿಯೇ ಆತನಿಗೆ ಸರ್ವಸ್ವ. ಆತ ಹೆಜ್ಜೆ ಹೆಜ್ಜೆಗೂ ಬಡತನದ ಕ್ರೂರತೆಯನ್ನು ಅನುಭವಿಸುತ್ತಿರುತ್ತಾನೆ. ಆತನ ಅಮ್ಮ ಸಾಯುವಾಗ ಆತನಿಗೆ ಹೇಳುವುದು ಒಂದೇ ಮಾತು. “ನೀನು ಹೇಗೆ ಬಾಳುತ್ತೀಯೋ ನನಗೆ ಗೊತ್ತಿಲ್ಲ. ಆದರೆ ಸಾಯುವಾಗ ದೊಡ್ಡ ಮನುಷ್ಯನಾಗಿ, ಶ್ರೀಮಂತನಾಗಿ ಸಾಯಬೇಕು.” ಅಮ್ಮನ ಮಾತನ್ನು ತುಂಬ ಗಂಭೀರವಾಗಿ ಪರಿಗಣಿಸುತ್ತಾನೆ ರಾಕಿ. “ಚಿಲ್ಲರೆ ಕಾಸಿಗೆ ಕೈಚಾಚಬೇಕು. ನೋಟು ಬೇಕೆಂದರೆ ಕೈ ಮಾಡಬೇಕು” ಎನ್ನುವ ಮಾತು ಆತನ ಜೀವನವನ್ನೇ ಬದಲಾಯಿಸಿಬಿಡುತ್ತದೆ.

ರಾಕಿ ಕರ್ನಾಟಕದಿಂದ ಸೀದಾ ಮುಂಬೈಗೆ ಹೊರಡುತ್ತಾನೆ. ಅಲ್ಲಿ ಶೆಟ್ಟಿ ಹೆಸರಿನ ದೊಡ್ಡ ಡಾನ್ ಜತೆ ಸೇರಿಕೊಳ್ಳುತ್ತಾನೆ. ನಂತರ ಎಲ್ಲವೂ ಬದಲಾಗಿ ಬಿಡುತ್ತದೆ. ಮುಂಬೈನಿಂದ ಆತ ಕೋಲಾರದ ಚಿನ್ನದ ಗಣಿಗೆ ಏಕೆ ಬರುತ್ತಾನೆ. ಅಲ್ಲಿ ಏನೆಲ್ಲ ಆಗುತ್ತದೆ ಎಂಬುದನ್ನು ಚಿತ್ರದಲ್ಲಿಯೇ ಕಣ್ತುಂಬಿಕೊಳ್ಳಬೇಕು.

ನಿರ್ದೇಶಕ ಪ್ರಶಾಂತ್ ನೀಲ್ ‘ಉಗ್ರಂ’ ಚಿತ್ರವನ್ನು ತುಂಬ ಭಿನ್ನವಾಗಿ ಕಟ್ಟಿಕೊಟ್ಟಿದ್ದರು. ಅಲ್ಲಿ ಅವರ ನಿರೂಪಣೆ ತುಂಬ ಭಿನ್ನವಾಗಿತ್ತು. ಅದನ್ನು ಅವರು ‘ಕೆಜಿಎಫ್​​​’ನಲ್ಲೂ ಮುಂದುವರಿಸಿಕೊಂಡು ಹೋಗಿದ್ದಾರೆ. ಇಲ್ಲಿ ಪ್ರತಿ ದೃಶ್ಯಗಳನ್ನೂ ನೋಡಿದಾಗಲೂ ಏನೋ ಹೊಸತು ಕಾಣಿಸುತ್ತದೆ. ಈ ದೃಶ್ಯವನ್ನು ಬೇರೆ ಯಾವುದಾದರೂ ಸಿನಿಮಾಕ್ಕೆ ಹೋಲಿಕೆ ಮಾಡಬೇಕು ಎಂದು ಹೋದರೆ ಮನಸ್ಸಿನಲ್ಲಿ ಯಾವ ಸಿನಿಮಾ ಹೆಸರೂ ಮೂಡುವುದಿಲ್ಲ.

‘ಕೆಜಿಎಫ್​’ನಲ್ಲಿ ಮುಖ್ಯವಾಗಿ ಹೈಲೈಟ್ ಆಗುವುದು ಭುವನ್ ಗೌಡ ಛಾಯಾಗ್ರಹಣ! ಇಡೀ ಚಿತ್ರದಲ್ಲಿ ಅವರ ಕ್ಯಾಮರಾ ಕುಸುರಿ ಗಮನ ಸೆಳೆಯುತ್ತದೆ. ಪ್ರತಿ ದೃಶ್ಯಗಳನ್ನು ಹೆಚ್ಚು ಜಾಗ್ರತೆಯಿಂದ ಪೊಣಿಸಿದ್ದಾರೆ. ಕೆಲವು ದೃಶ್ಯಗಳು ಮೈ ನವಿರೇಳಿಸುತ್ತದೆ. ಛಾಯಾಗ್ರಹಣದ ಮೋಡಿಯನ್ನು ಸಿನಿಮಾ ಕಣ್ತುಂಬಿಕೊಂಡೇ ಆನಂದಿಸಬೇಕಷ್ಟೆ. ಚಿತ್ರದ ಸಂಭಾಷಣೆ, ಕಲಾ ವಿನ್ಯಾಸ ಮತ್ತು ಸಂಕಲನ ಚಿತ್ರಕ್ಕೆ ಮೈಲೇಜ್​ ನೀಡಿದೆ.

ಭುವನ್ ಗೌಡ ಛಾಯಾಗ್ರಹಣದ ಕಮಾಲ್​ ಹೆಚ್ಚುವಲ್ಲಿ ರವಿ ಬಸ್ರೂರ್ ಅವರ ಹಿನ್ನಲೆ ಸಂಗೀತದ ಪಾತ್ರ ಹೆಚ್ಚಿದೆ. ಕೆಜಿಎಫ್​​ ನೋಡಿದಾಗ ಪ್ರಶಾಂತ್ ನೀಲ್ ಅವರ ಶ್ರಮ ಕಾಣುತ್ತದೆ. ಅವರು ಪ್ರತಿ ದೃಶ್ಯವನ್ನು ಹೆಚ್ಚು ಶ್ರಮ ವಹಿಸಿ ಕೆತ್ತಿದಂತೆ ಕಾಣುತ್ತದೆ. ಅವರ ನಿರೂಪಣೆ ಶೈಲಿಯೇ ಬೇರೆ ಇದೆ. ಹಾಗಾಗಿ ಕನ್ನಡದ ಪಾಲಿಗೆ ಈ ಚಿತ್ರ ಭಿನ್ನ ಎಂದೇ ಹೇಳಬಹುದು. ಆದರೆ, ಅವರ ನಿರೂಪಣೆ ಕೆಲ ಕಡೆಗಳಲ್ಲಿ ಗೊಂದಲ ಸೃಷ್ಟಿಸುತ್ತದೆ. ಇನ್ನು ಯಶ್ ನಟನೆಯ ಬಗ್ಗೆ ಯಾವುದೇ ಮಾತಿಲ್ಲ. ಅವರ ಮ್ಯಾನರಿಸಂ ಚೆನ್ನಾಗಿ ಒಪ್ಪುತ್ತದೆ. ಅವರು ತಮ್ಮ ಪಾತ್ರಕ್ಕೆ ತಕ್ಕನಾದ ನ್ಯಾಯ ಒದಗಿಸಿದ್ದಾರೆ. ಚಿತ್ರದಲ್ಲಿರುವ ಸಾಹಸಗಳು ಮೈ ನವಿರೇಳಿಸುತ್ತದೆ.

ಸಾಮಾನ್ಯವಾಗಿ ಐಟಂ ಸಾಂಗ್‌ಗಳನ್ನು ಸುಖಾಸುಮ್ಮನೆ ತುರುಕಲಾಗುತ್ತದೆ. ‘ಕೆಜಿಎಫ್’​ನಲ್ಲೂ ಒಂದು ವಿಶೇಷ ಹಾಡನ್ನು ಇಡಲಾಗಿದೆ. ಆದರೆ, ಇಲ್ಲಿ ಈ ಐಟಂ ಸಾಂಗ್‌ಗೂ ಪ್ರಾಮುಖ್ಯತೆ ಇದೆ. ಈ ಹಾಡಿಗೆ ಮಿಲ್ಕಿ ಬ್ಯೂಟಿ ತಮನ್ನಾ ಹೆಜ್ಜೆ ಹಾಕಿ ಹೋಗಿದ್ದಾರೆ. ‘ಜೋಕೆ..’ ಹಾಡನ್ನು ರಿ ಕ್ರಿಯೇಟ್ ಮಾಡಿರುವುದು ನೋಡುಗರಿಗೆ ಹಬ್ಬ ಎನಿಸುತ್ತದೆ.

ಚಿತ್ರದಲ್ಲಿ ನಾಲ್ಕೈದು ವಿಲನ್‌ಗಳು ಕಾಣಿಸಿಕೊಳ್ಳುತ್ತಾರೆ. ಅವರೆಲ್ಲರಿಗೂ ಭಿನ್ನ ಭಿನ್ನ ಹೆಸರಿಟ್ಟಿದ್ದಾರೆ ಪ್ರಶಾಂತ್ ನೀಲ್. ಈ ಹೆಸರುಗಳು ಆಕರ್ಷಿತವಾಗಿ ಕಂಡರೂ ಪ್ರೇಕ್ಷಕರನ್ನು ಗೊಂದಲಕ್ಕೆ ಈಡು ಮಾಡುತ್ತವೆ. ಆ ಬಗ್ಗೆ ನಿರ್ದೇಶಕರು ಕೊಂಚ ಎಚ್ಚರವಹಿಸಬೇಕಿತ್ತು. ಇನ್ನು, ಆರಂಭದಲ್ಲಿ ಎಲ್ಲರ ಪರಿಚಯವನ್ನು ನಿರ್ದೇಶಕ ಒಂದು ನಿರೂಪಣೆಯಲ್ಲಿ ಮುಗಿಸಿಬಿಡುತ್ತಾರೆ. ಪ್ರೇಕ್ಷಕ ಅಂದಾಜಿಸುವ ಮೊದಲೇ ನಿರೂಪಣೆ ಮುಗಿದುಬಿಡುತ್ತದೆ.

ರಾಕಿ ಹಿನ್ನೆಲೆ, ಆತ ಕೆಜಿಎಫ್ ಏಕೆ ಬಂದ ಎಂಬುದನ್ನು ಮೊದಲಾರ್ಧದಲ್ಲಿ ಹೇಳಲಾಗಿದೆ. ಹಾಗಾಗಿ ಮೊದಲಾರ್ಧ ಸ್ವಲ್ಪ ನಿಧಾನ ಸಾಗಿದಂತೆ ಅನಿಸಬಹುದು. ಚಿತ್ರದ ಕಥೆ ಗಟ್ಟಿ ಇಲ್ಲ ಎನ್ನುವ ಫೀಲ್ ಬರುತ್ತದೆಯಾದರೂ ಛಾಯಾಗ್ರಹಣ ಹಾಗೂ ಹಿನ್ನೆಲೆ ಸಂಗೀತ ಅದನ್ನು ಮರೆ ಮಾಚುತ್ತದೆ.

ತಂಗಂನ ಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಆದರೆ ಸಿನಿಮಾದಲ್ಲಿ ಅದನ್ನು ಸಾಬೀತಪಡಿಸಲು ಯಾವುದೇ ಆಧಾರ ಸಿಗುವುದಿಲ್ಲ. ಸಿನಿಮಾ ನೋಡಿದವರಿಗೆ ಕೋಲಾರ ಚಿನ್ನದ ಗಣಿಯಲ್ಲಿ ಈ ರೀತಿ ಆಗಿತ್ತ ಎನ್ನುವ ಪ್ರಶ್ನೆ ಮೂಡಬಹುದು. ಕಾಲ್ಪನಿಕ ಕಥೆಯನ್ನು ಅಷ್ಟು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ಪ್ರಶಾಂತ್ ನೀಲ್.

‘ಜನರು ಮೃಗಗಳನ್ನು ಬೋನ್​​ನಲ್ಲಿ ಇಡುತ್ತಾರೆ. ಇಲ್ಲಿ ಮೃಗಗಳೇ ಜನರನ್ನು ಪಂಜರಕ್ಕೆ ಹಾಕಿದ್ದಾರೆ’ ಎನ್ನುವ ಡೈಲಾಗ್ ಕೋಲಾರ ಚಿನ್ನದ ಗಣಿಯಲ್ಲಿ ಕ್ರೂರತೆಯನ್ನು ವರ್ಣಿಸುತ್ತದೆ. ಇವೆಲ್ಲ ಅಬ್ಬರಗಳ ನಡುವೆ ತಾಯಿ ಸಂಬಂಧ ನೋಡುಗನ ಕರುಳು ಹಿಂಡುತ್ತದೆ. ಅನಂತ್ ನಾಗ್ ಕಡಿಮೆ ಸಮಯ ಬಂದರೂ, ಇಡೀ ಚಿತ್ರದ ಸೂತ್ರಧಾರ ಅವರೇ. ವಸಿಷ್ಠ ಸಿಂಹ ನಟನೆ ಎಂದಿನಂತೆ ಮೆಚ್ಚಿಕೊಳ್ಳುವಂತದ್ದು. ಸಿನಿಮಾದಲ್ಲಿ ನಾಯಕಿ ಶ್ರೀನಿಧಿ ಶೆಟ್ಟಿ ತೆರೆಮೇಲೆ ಕಾಣಿಸಿಕೊಳ್ಳುವುದು ಕಡಿಮೆಯೇ. ಬಿ. ಸುರೇಶ್, ಮಾಳವಿಕಾ​ ಕೂಡ ಗಮನ ಸೆಳೆಯುತ್ತಾರೆ.

‘ಕೆಜಿಎಫ್​’ ಕ್ಲೈಮ್ಯಾಕ್ಸ್​​ ಎಲ್ಲರನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ. ಈ ಚಿತ್ರದ ಕ್ಲೈಮ್ಯಾಕ್ಸ್​ ಮೊತ್ತೊಂದರ ಆರಂಭಕ್ಕೆ ನಾಂದಿ ಹಾಡಿದಂತಿದೆ. ಈ ಚಿತ್ರದಲ್ಲಿ ಅಚ್ಯುತ್​ ಕುಮಾರ್​ ಅವರು ಕಡಿಮೆ ಸಮಯ ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ. ಆದರೆ, ಚಾಪ್ಟರ್​ 2ನಲ್ಲಿ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರಲಿದೆ ಎಂಬುದನ್ನು ಪ್ರೇಕ್ಷಕ ಊಹಿಸಬಹುದು. ಕೆಲ ಪಾತ್ರಗಳ ಬಗ್ಗೆ ನಿರ್ದೇಶಕರು ಗುಟ್ಟು ಕಾಯ್ದುಕೊಂಡಿದ್ದಾರೆ. ‘ಕೆಜಿಎಫ್​ 2’ನಲ್ಲಿ ಈ ಪಾತ್ರಗಳ ಗುಟ್ಟು ರಟ್ಟಾಗಲಿದೆ.

ಕೆಲವೊಂದು ಮೈನಸ್ ಪಾಯಿಂಟ್ಗಳನ್ನು ಮರೆತು ಇಡೀ ಸಿನಿಮಾ ನೋಡಿದಾಗ ಪ್ರೇಕ್ಷಕನಿಗೆ ಇಲ್ಲಿ ಯಶ್ ಅಲ್ಲ ಇಡೀ ಚಿತ್ರವೇ ಹೀರೋ ಎನ್ನುವ ಭಾವನೆ ಬರುತ್ತದೆ.

Comments are closed.