ಬೆಂಗಳೂರು: ಕೆಜಿಎಫ್ ಬರಿಗಣ್ಣಿಗೆ ಮಾತ್ರ ಕಾಣುವ, ಕಿವಿಗಳಿಗೆ ಮಾತ್ರ ಕೇಳಿಸುವ ಸಿನಿಮಾ ಅಲ್ಲ. ಕೆಜಿಎಫ್ ಒಂದು ಅನುಭವ. ಅದು ಬೇರೆ ಬೇರೆ ರೂಪಗಳಲ್ಲಿ ನಿಮ್ಮನ್ನು ಮುಟ್ಟುತ್ತಿರುತ್ತದೆ, ಒಳಗೊಳಗೆ ಪ್ರವಹಿಸುತ್ತಿರುತ್ತದೆ. ನಿಸ್ಸಂಶಯವಾಗಿ ಕೆಜಿಎಫ್ ಒಂದು ಮಹಾಕಾವ್ಯ. ಪ್ರಶಾಂತ್ ನೀಲ್ ಹೊಸದೇನನ್ನೋ ಮಾಡಿದ್ದಾರೆ, ಅದನ್ನು ನೀವು ನಿಮಗೆ ಸಮಾಧಾನವಾಗುವಂತೆ ವಿವರಿಸಲಾರಿರಿ. ಮೊದಲೇ ಹೇಳಿದಂತೆ ಇದೊಂದು ಅನುಭವ, ಅನುಭವಿಸಿಯೇ ತೀರಬೇಕು.
ಯಶ್ ಈ ಇಡಿ ಸಿನಿಮಾವನ್ನು ತಮ್ಮ ಭುಜದ ಮೇಲೆ ಹೊತ್ತು ಸಾಗಿದ್ದಾರೆ. ಅವರು ಪ್ರತಿಫ್ರೇಮ್ ನಲ್ಲೂ ಕಣ್ಣಿಗೆ ಹಬ್ಬ. ಆಗಾಗ ನಿಮ್ಮ ಕೈಗಳ ಮೇಲಿನ ರೋಮಗಳು ಎದ್ದುನಿಂತರೆ ಅದಕ್ಕೆ ಯಶ್ ಕಾರಣ. ಈ ಸಿನಿಮಾದಲ್ಲಿ ಯಶ್ ಹೊರತಾಗಿ ಇನ್ನೊಬ್ಬರನ್ನು ಆ ಪಾತ್ರದಲ್ಲಿ ಕಲ್ಪಿಸಿಕೊಳ್ಳಲಾಗದು. ಯಶ್ ಈ ಸಿನಿಮಾಗಾಗಿಯೇ ಕಡೆದಿಟ್ಟ ವಿಗ್ರಹ. ಅವರು ಇಲ್ಲಿ ಬರಿಯ ಹೀರೋ ಮಾತ್ರವಲ್ಲ ಸೂಪರ್ ಹೀರೋ, ಥೇಟ್ ನಮ್ಮ ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್ ಗಳ ಹಾಗೆ. ಸೂಪರ್ ಹೀರೋಗಳಿಗಾದರೂ ನಾಲ್ಕು ಏಟು ಬೀಳಬಹುದು, ಕೆಳಗೆ ಬೀಳಬಹುದು. ರಾಕಿ ಭಾಯ್ ನಮ್ಮ ಫ್ಯಾಂಟಸಿ ಜಗತ್ತಿನ ದೊರೆ, ಅವನಿಂದ ಅಸಾಧ್ಯವಾದದ್ದು ಏನೂ ಇಲ್ಲ, ಅವನನ್ನು ಯಾರಿಂದಲೂ ಮಣಿಸಲಾಗದು.
ಪ್ರಶಾಂತ್ ನೀಲ್ ಗೆ ಆಕ್ಷನ್ ಇಷ್ಟವಿರಬಹುದು. ಆದರೆ ತೆಲುಗು ಸಿನಿಮಾಗಳ ಹಾಗೆ ಭೀಬತ್ಸ ದೃಶ್ಯಗಳು ಇಲ್ಲಿಲ್ಲ. ಕ್ರೌರ್ಯ ಕಣ್ಣಿಗೆ ರಾಚಿಸಿದರೂ ಅದು ನಮ್ಮ ಎದೆಗೆ ಇಳಿಯುವುದನ್ನು ತಡೆದುಬಿಡುತ್ತಾರೆ ಪ್ರಶಾಂತ್. ಒಬ್ಬ ಸಣ್ಣ ಹುಡುಗನ ದಾರುಣ ಕೊಲೆಯೊಂದನ್ನು ಯಶ್ ಅವರ ಅದ್ಭುತ ರಿಯಾಕ್ಷನ್ ಮತ್ತು ಒಂದಿಡೀ ಸಮೂಹದ ದೊಡ್ಡ ನಿಟ್ಟುಸಿರಿನೊಂದಿಗೆಯೇ ತೋರಿಸಿಬಿಡುತ್ತಾರೆ ಅವರು. ನೋಡಿ ನಿಟ್ಟುಸಿರಾಗೋ ಸರದಿ ನಮ್ಮದಷ್ಟೆ. ನಿರ್ದೇಶಕರ ತಂಡ ಅಸಾಧ್ಯ ಕೆಲಸಗಳನ್ನು ಮಾಡಿದೆ. ಕಥೆಗೆ ಸಂಬಂಧಿಸಿದ ರಿಸರ್ಚ್ ಗಳಿಂದ ಹಿಡಿದು ಒಂದೇ ಒಂದು ದೃಶ್ಯವೂ ತರ್ಕಹೀನವಾಗದಂತೆ, ಬಾಲಿಷ ಎನಿಸದಂತೆ, ಕ್ಲೀಷೆಯಾಗದಂತೆ ಈ ತಂಡ ಪರಿಶ್ರಮ ವಹಿಸಿದೆ.
ಸಿನಿಮಾದ ಸ್ಕ್ರೀನ್ ಪ್ಲೇ ಈ ಹೊತ್ತಿನವರೆಗಿನ ಅದ್ಭುತ ಪ್ರಯೋಗಗಳಲ್ಲಿ ಒಂದು. ಪ್ರಶಾಂತ್ ನೀಲ್ ಕಸುಬುದಾರಿಕೆಗೆ ಜವಾಬೇ ಇಲ್ಲ. ಈ ಸ್ಕ್ರೀನ್ ಪ್ಲೇಗೆ ನಿಜವಾದ ಆತ್ಮವನ್ನು ತುಂಬಿರುವ ಸಂಕಲನಕಾರ ತನ್ನ ಕತ್ತರಿಯನ್ನೂ ಒಂದು ಪಾತ್ರವಾಗಿಸಿದ್ದಾನೆ. ಎರಡನೇ ಚಾಪ್ಟರಿನ ಒಂದೆರಡು ಸೀನ್ ಗಳನ್ನು ಕ್ಲೈಮಾಕ್ಸ್ ಗೂ ಮುನ್ನ ಕಾಣಿಸುವ ಎದೆಗಾರಿಕೆ ಇಲ್ಲಿ ಪ್ರದರ್ಶನಗೊಂಡಿದೆ. ಒಂದೇ ಒಂದು ಕ್ಷಣ ನೀವು ಅತ್ತಿತ್ತ ತಿರುಗದಂತೆ ಮಾಡುವ ಕಲೆಗಾರಿಕೆ ಇಲ್ಲಿ ಸಿದ್ಧಿಸಿದೆ.
ಸಿನಿಮಾದ ಛಾಯಾಗ್ರಹಣ ಈ ದೇಶಕ್ಕೇ ಅಪರೂಪದ್ದು. ದೃಶ್ಯಗಳನ್ನು ನ ಭೂತೋ ಎನ್ನುವಂತೆ ಕಟ್ಟಿಕೊಡುವಲ್ಲಿ ಭುವನ್ ಗೌಡ ಅವರಿಗಿರುವ ರಾಕ್ಷಸ ಹಸಿವು ಎದ್ದುಕಾಣುತ್ತದೆ. ಪ್ರತಿಯೊಂದು ಫ್ರೇಮನ್ನೂ ಅವರು ತಾವೇ ಬರೆದ ಚಿತ್ರದಂತೆ ಸೆರೆಹಿಡಿದಿದ್ದಾರೆ. ಸೆಕೆಂಡ್ ಹಾಫ್ ನ ಪ್ರತಿಯೊಂದು ದೃಶ್ಯವೂ ದೃಶ್ಯಕಾವ್ಯಗಳೇ. ಪ್ರತಿ ಫ್ರೇಮ್ ನಿಮ್ಮ ಜತೆ ಮಾತಿಗೆ ಇಳಿಯುತ್ತದೆ.
ರವಿ ಬಸ್ರೂರು ಕೆಜಿಎಫ್ ನ ಮತ್ತೊಬ್ಬ ಹೀರೋ. ಅವರ ಹಿನ್ನೆಲೆ ಸಂಗೀತ ಸಿನಿಮಾದಿಂದ ಒಂದು ಮಿಲಿಮೀಟರ್ ಕೂಡ ಆಚೆ ಹೋಗಿ ನಿಲ್ಲುವುದಿಲ್ಲ. ಪ್ರತಿ ದೃಶ್ಯಗಳ ಜತೆ ಬ್ಲೆಂಡ್ ಆಗಿ ವಿಶೇಷ ಅನುಭೂತಿ ಉಕ್ಕಿಸುತ್ತದೆ. ಹಾಡುಗಳಿಗೂ ಇದೇ ಮಾತು ಹೇಳಬೇಕು.
ಶಿವು ಕುಮಾರ್ ಎಂಬ ಆರ್ಟ್ ಡೈರೆಕ್ಟರ್ ಬಗ್ಗೆ ಏನು ಹೇಳಿದರೂ ಕಡಿಮೆಯೇ. ಸೆಕೆಂಡ್ ಹಾಫ್ ನಲ್ಲಿ ಅವರು ಹಾಕಿರುವ ಸೆಟ್ ಗಳನ್ನು ನೋಡಿ ಬೇರೆ ಸಿನಿಮಾ ನಿರ್ಮಾಪಕದ ಎದೆ ನಡುಗಿ ಹೋಗಿರಬಹುದು. ಮಾರಿ ಪೂಜೆಯ ಸೆಟ್ ಅಂತೂ ಅಸಾಧಾರಣ. ಒಮ್ಮೆ ಎದ್ದು ನಿಂತು ಕ್ಲಾಪ್ ಮಾಡಬೇಕೆನಿಸುತ್ತದೆ. ಶಿವು ಮತ್ತು ಅವರ ಹುಡುಗರ ತಂಡ ಕೆಜಿಎಫ್ ಕನಸಿನ ಬಹುಮಖ್ಯ ಪಾತ್ರಧಾರಿಗಳು.
ಯಶ್ ಹೊರತಾಗಿ ಈ ಸಿನಿಮಾದಲ್ಲಿ ಸಾಕಷ್ಟು ಪಾತ್ರಗಳು ತೆರೆಯ ಮೇಲೆ ಅಪ್ಪಳಿಸುತ್ತವೆ. ಅವುಗಳಲ್ಲಿ ಕೆಲವು ಮುಂದಿನ ಚಾಪ್ಟರ್ ಗೆಂದೇ ಮೀಸಲಾಗಿಟ್ಟ ಟ್ರೇಲರ್ ಗಳು! ಎಲ್ಲರೂ ನಿರ್ದೇಶಕರ ನಟರುಗಳೇ! ನಿಮ್ಮ ಕಣ್ಣುಗಳಿಂದಲೇ ಹೆಚ್ಚು ಮಾತಾಡಿ ಎಂದು ಪ್ರಶಾಂತ್ ನೀಲ್ ಈ ಪಾತ್ರಗಳಿಗೆ ಹೇಳಿದಂತಿದೆ. ಆ ಪಾತ್ರಗಳು ಚಾಚೂ ತಪ್ಪದೆ ಹಾಗೇ ಮಾಡಿವೆ. ಹಿರಿಯ ನಟ ಅನಂತ್ ನಾಗ್ ಸಿನಿಮಾದ ಘನತೆಯನ್ನು ಹೆಚ್ಚಿಸಿದ್ದಾರೆ. ಪ್ರಶಾಂತ್ ಹೆಚ್ಚುಗಾರಿಕೆ ಏನೆಂದರೆ ಸಾವಿರಾರು ಜೂನಿಯರ್ ಆಕ್ಟರ್ ಗಳಿಂದಲೂ ಅವರು ಆಕ್ಟಿಂಗ್ ಮಾಡಿಸಿದ್ದಾರೆ. ಜೂನಿಯರ್ ಗಳೂ ಪಳಗಿದ ನಟರಂತೆಯೇ ನಟಿಸಿದ್ದಾರೆ.
ಅತ್ಯುತ್ತಮ ಸಿನಿಮಾ, ನಿರ್ದೇಶನ, ಹೀರೋ, ಸಂಗೀತ, ಕಲಾ ನಿರ್ದೇಶನ, ಸಂಕಲನ ಹೀಗೆ ಕನಿಷ್ಠ 6 ವಿಭಾಗಗಳಲ್ಲಾದರೂ ಕೆಜಿಎಫ್ ಗೆ ಆಸ್ಕರ್ ಪ್ರಶಸ್ತಿ ಬರಲೇಬೇಕು. ಯಾಕೆಂದರೆ ಈ ಸಿನಿಮಾ ಸ್ಪರ್ಧೆ ನೀಡುತ್ತಿರುವುದು ಭಾರತೀಯ ಸಿನಿಮಾಗಳ ಜತೆಯಲ್ಲ, ಹಾಲಿವುಡ್ ಸಿನಿಮಾಗಳ ಜತೆ. ಸಿನಿಮಾದ ಕ್ರಾಫ್ಟ್ ಹಾಗಿದೆ. ಇದು ಬಾಹುಬಲಿಯನ್ನು ಮೀರಿಸುವ ಸಿನಿಮಾವೇ ಎಂದು ಯಾರಾದರೂ ಕೇಳಿದರೆ ನನ್ನ ಉತ್ತರ ಹೌದು ಎಂಬುದೇ ಆಗಿರುತ್ತದೆ.
ಕೆಜಿಎಫ್ ಗಿಂತ ಅದ್ಭುತವಾದ ಕನ್ನಡ ಅಥವಾ ಭಾರತೀಯ ಸಿನಿಮಾ ಬಂದಿಲ್ಲವೆಂದಲ್ಲ, ಬಂದಿವೆ. ಆದರೆ ಕೆಜಿಎಫ್ ಸಿನಿಮಾದ ಕ್ರಾಫ್ಟ್ ಹಿಂದೆಂದೂ ಬಂದಿರಲು ಸಾಧ್ಯವಿಲ್ಲ. ಇಷ್ಟೊಂದು ಪರಿಶ್ರಮ ಮತ್ತು ಕನಸುಗಳನ್ನು ತೊಡಗಿಸಿ ಮಾಡಿದ ಸಿನಿಮಾ ಇನ್ನೊಂದಿರಲು ಸಾಧ್ಯವಿಲ್ಲ. ಇಡೀ ತಂಡ ಸಿನಿಮಾವನ್ನು ಜೀವಿಸಿಬಿಟ್ಟಿದೆ ಎಂದರೆ ಅದು ಅತಿಶಯೋಕ್ತಿ ಅಲ್ಲ. ಕನ್ನಡ ಚಿತ್ರರಂಗವನ್ನು ಹೊಸ ದಾರಿಗೆ ಎಳೆದೊಯ್ದಿದ್ದಾರೆ ಪ್ರಶಾಂತ್ ಮತ್ತು ಯಶ್ ಜೋಡಿ. ಅವರೇ ಹೇಳಿದಂತೆ ಇದು ಅವರ ಕನಸು ಮಾತ್ರವಲ್ಲ, ನಮ್ಮೆಲ್ಲರ ಕನಸು. ನಮ್ಮ ಕನಸನ್ನು ಅವರು ನಿಜವಾಗಿಸಿದ್ದಾರೆ.
ಚಿತ್ರನಿರ್ಮಾಪಕ ವಿಜಯ್ ಕಿರಗಂದೂರು ಎಂಬ ಮಹಾಸಾಹಸಿಗೆ ಕೋಟಿಗಳಂತೂ ಹರಿದುಬರಲಿವೆ. ಆದರೆ ನಮ್ಮ ಕೋಟಿ ಕೋಟಿ ಚಪ್ಪಾಳೆಗಳು ಸಲ್ಲಲೇಬೇಕು.
ಸಿನಿಮಾ ಕಥೆ, ಸಂಭಾಷಣೆ, ಹೂರಣದ ಬಗ್ಗೆ ಏನನ್ನೂ ಹೇಳಿಲ್ಲ. ಹೇಳಬಾರದು ಕೂಡ. ಯಾಕೆಂದರೆ ಇಂಥ ಸಿನಿಮಾಗಳನ್ನು ಯಾವ ರಿವ್ಯೂ ಕೂಡ ಕೇಳದೇ ಹೋಗಿನೋಡಬೇಕು.
Comments are closed.