ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಸಕ್ಸಸ್ ಬಳಿಕ ಚಿತ್ರಪ್ರೇಮಿಗಳು ಚಾಪ್ಟರ್ 2 ಗಾಗಿ ತುದಿಗಾಲಲ್ಲಿ ಕಾಯುತ್ತಿರುವಂತೆಯೇ ಇತ್ತ ಕೆಜಿಎಫ್ ತಂಡ ಸದ್ದಿಲ್ಲದೇ ಕೆಜಿಎಫ್ ಚಾಪ್ಟರ್-2 ಚಿತ್ರದ ಮುಹೂರ್ತ ಕಾರ್ಯ ನೆರವೇರಿದೆ.
‘ಕೆ.ಜಿ.ಎಫ್. ಚಾಪ್ಟರ್ 2’ ಸಿನಿಮಾದ ಮುಹೂರ್ತ ಸದ್ದಿಲ್ಲದೆ ಈಗಾಗಲೇ ಬೆಂಗಳೂರಿನಲ್ಲೇ ನೆರವೇರಿದೆ. ಸಿನಿಮಾ ಮುಹೂರ್ತ ಆಗಿರುವ ಬಗ್ಗೆ ನಟ ಯಶ್ ಖುದ್ದಾಗಿ ಟ್ವೀಟ್ ಮಾಡಿದ್ದಾರೆ. ಇಂದು ಬೆಳಿಗ್ಗೆ ಕಂಠೀವ ಸ್ಟುಡಿಯೋದಲ್ಲಿ ಸರಳವಾಗಿ ಪೂಜೆ ನೆರವೇರಿಸುವ ಮೂಲಕ ಸಿನಿಮಾಗೆ ಚಾಲನೆ ನೀಡಲಾಗಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಮಂಜಣ್ಣ ಕ್ಲಾಪ್ ಮಾಡಿದರೆ, ಪ್ರಶಾಂತ್ ನೀಲ್ ಅವರ ತಾಯಿ ಭಾರತಿ ಸುಭಾಷ್ ಅವರು ಕ್ಯಾಮೆರಾಗೆ ಚಾಲನೆ ನೀಡಿದ್ದಾರೆ. ಮುಹೂರ್ತದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್, ರಾಕಿಂಗ್ ಸ್ಟಾರ್ ಯಶ್, ನಟಿ ಶ್ರೀನಿಧಿ ಶೆಟ್ಟಿ, ಭುವನ್ ಗೌಡ ಹಾಗೂ ಚಿತ್ರತಂಡದವರು ಭಾಗವಹಿಸಿದ್ದರು.
ಈ ಸಿನಿಮಾ ಚಿತ್ರೀಕರಣಕ್ಕೂ ಮುನ್ನವೇ ಹೊಸ ತಾರೆಯರ ಎಂಟ್ರಿ ಕುರಿತಾಗಿ ಸಾಕಷ್ಟು ಸುದ್ದಿ ಮಾಡಿತ್ತು. ರಮಿಕಾ ಸೇನ್ ಪಾತ್ರಕ್ಕೆ ಬಾಲಿವುಡ್ ನಟಿ ರವೀನಾ ಟಂಡನ್ ಹಾಗೂ ಡಾನ್ ಪಾತ್ರವೊಂದಕ್ಕೆ ಸಂಜಯ್ ದತ್ ಅವರನ್ನು ಕರೆತರಲು ಈಗಾಗಲೇ ಮಾತುಕತೆ ನಡೆಸಲಾಗಿದೆ. ಇಷ್ಟೇ ಅಲ್ಲದೆ ಈ ಸಿನಿಮಾ ಕುರಿತಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕೂತಹಲಕಾರಿ ಮಾಹಿತಿಗಳು ಹೊರ ಬೀಳಲಿದೆ.
ಕಳೆದ ಡಿಸೆಂಬರ್ 21ರಂದು ಐದು ಭಾಷೆಗಳಲ್ಲಿ ತೆರೆಕಂಡಿದ್ದ ‘ಕೆ.ಜಿ.ಎಫ್ ಚಾಪ್ಟರ್ 1’ ಗಳಿಕೆಯಲ್ಲಿ ಕನ್ನಡದಲ್ಲೇ ನೂರು ಕೋಟಿಯ ಗಡಿ ದಾಟಿ ಹೊಸ ದಾಖಲೆ ಬರೆದಿತ್ತು. ಇನ್ನು ಉಳಿದ ಭಾಷೆಗಳಲ್ಲೂ ಈ ಸಿನಿಮಾ ಸಖತ್ ಸದ್ದು ಮಾಡಿತ್ತು.
Comments are closed.