ನವದೆಹಲಿ: ಸ್ಯಾಂಡಲ್ವುಡ್ನ ಇಡೀ ಚಿತ್ರರಂಗ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರೆ, ಅತ್ತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದೂ ಇಲ್ಲ. ಯಾವುದೇ ರಾಜಕೀಯ ಪಕ್ಷದ ಪರ ಪ್ರಚಾರ ನಡೆಸುವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಾವು ಚುನಾವಣೆಗೆ ಸ್ಪರ್ಧಿಸುವುದಾಗಿ ಊಹಾಪೋಹಗಳು ಹಬ್ಬಿವೆ. ಆದರೆ, ತಾವು ಚುನಾವಣೆಯಿಂದ ದೂರ ಇರುವುದಷ್ಟೇ ಅಲ್ಲ. ಯಾವುದೇ ಪಕ್ಷದ ಪರವಾಗಿ ಪ್ರಚಾರ ನಡೆಸುವುದೂ ಇಲ್ಲ ಎಂದು ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದಾರೆ.
ಇಂಧೋರ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲು ಮಧ್ಯಪ್ರದೇಶ ಕಾಂಗ್ರೆಸ್ ಮುಖಂಡರು ಸಲ್ಮಾನ್ ಖಾನ್ಗೆ ಗಾಳ ಹಾಕಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಈ ಟ್ವೀಟ್ ಮಾಡಿದ್ದಾರೆ.
ಲೋಕಸಭಾ ಚುನಾವಣೆಗೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕೆಂದು ಗುರುವಾರ ಪ್ರಧಾನಿ ನರೇಂದ್ರಮೋದಿ ಬಾಲಿವುಡ್ ತಾರೆಯರಿಗೆ ಮನವಿ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಸಲ್ಮಾನ್ ಖಾನ್, ‘ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯನ ಹಕ್ಕಾಗಿದೆ. ಅರ್ಹ ಭಾರತೀಯರೆಲ್ಲರೂ ತಮ್ಮ ಹಕ್ಕು ಚಲಾಯಿಸಿ, ಸರ್ಕಾರ ಸ್ಥಾಪಿಸುವಲ್ಲಿ ಭಾಗಿಯಾಗುವಂತೆ ಮನವಿ ಮಾಡುತ್ತಿದ್ದೇನೆ.’ ಎಂದು ಹೇಳಿದ್ದಾರೆ.
ಮೋದಿಯವರು ತಮ್ಮ ಟ್ವೀಟ್ನಲ್ಲಿ, ಮತದಾನ ನಮ್ಮ ಹಕ್ಕು ಮಾತ್ರವಲ್ಲದೆ ಕರ್ತವ್ಯವೂ ಆಗಿದೆ. ಯುವ ಜನತೆಯಲ್ಲಿ ಸಿನಿಮಾ ನಟ-ನಟಿಯರು ಮತದಾನದ ಬಗ್ಗೆ ಸ್ಫೂರ್ತಿ ತುಂಬಬೇಕು. ಇದರಿಂದ ನಮ್ಮ ಪ್ರಜಾಪ್ರಭುತ್ವ ಮತ್ತು ದೇಶ ಸದೃಢವಾಗುತ್ತದೆ ಎಂದು ಮನವಿ ಮಾಡಿದ್ದರು.
Comments are closed.