ಬೆಂಗಳೂರು: ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಖ್ಯಾತ ನಟ ಅನಿಲ್ ಕುಮಾರ್ (48) ವಿಧಿವಶರಾಗಿದ್ದಾರೆ.
ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಅವರು ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.
ಹೆಗ್ಗೋಡಿನ ನೀನಾಸಂನಲ್ಲಿ ಅನಿಲ್‍ಕುಮಾರ್ ತರಬೇತಿ ಪಡೆದಿದ್ದರು. ಆಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನಿಲ್ ಅವರ ಸಹಪಾಠಿಯಾಗಿದ್ದರು. ಮೂಡಲ ಮನೆ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಅನಿಲ್ ಅವರು, ಅನೇಕ ಸೀರಿಯಲ್, ರಂಗಭೂಮಿ ಹಾಗೂ ಸಿನಿಮಾದಲ್ಲಿ ನಟಿಸಿದ್ದಾರೆ.
ಅನಿಲ್ ಕುಮಾರ್ ಅವರು ಮೂಡಲ ಮನೆ, ಲಕ್ಷ್ಮೀ ಬಾರಮ್ಮ, ಚಿ ಸೌ ಸಾವಿತ್ರಿ, ಪ್ರೀತಿ ಪ್ರೇಮ, ಅಳಗುಳಿ ಮನೆ, ಮದರಂಗಿ, ಜನುಮದ ಜೋಡಿ ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ. ಈಗ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಟಿಸುತ್ತಿದ್ದರು.
ರಾಜ್ಯ ಪ್ರಶಸ್ತಿ ವಿಜೇತ ಪಲ್ಲಟ ಸಿನಿಮಾದಲ್ಲಿ ಅನಿಲ್‍ಕುಮಾರ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೇಮಂತರಾವ್ ನಿರ್ದೇಶನದ ಕವಲುದಾರಿ ಸಿನಿಮಾದಲ್ಲಿ ನಟಿಸಿದ್ದಾರೆ. ಬಹು ಅಂಗಾಗ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಗೆಳೆಯ ಅನಿಲ್‍ಕುಮಾರ್ ಅವರನ್ನು ಕಂಡು ದರ್ಶನ್ ಮರುಗಿ, ಸಹಾಯ ಮಾಡಿದ್ದರು.
Comments are closed.