ಮನೋರಂಜನೆ

ನನ್ನ ಮೊದಲ ಚಿತ್ರ ಕನ್ನಡದಲ್ಲೇ ಬರಬೇಕು’: ಸಚಿವ ಜಮೀರ್ ಅಹ್ಮದ್ ಪುತ್ರ

Pinterest LinkedIn Tumblr


ಕುಮಾರ ಸ್ವಾಮಿ ಪುತ್ರ ನಿಖಿಲ್ ಕುಮಾರ್ ‘ಜಾಗ್ವಾರ್’, ಚೆಲುವರಾಯ ಸ್ವಾಮಿ ಪುತ್ರ ಸಚಿನ್ ‘ಹ್ಯಾಪಿ ಬರ್ತ್‌ ಡೇ’ , ಹಾಗೂ ಹೆಚ್. ಎಂ ರೇವಣ್ಣ ಪುತ್ರ ಅನೂಪ್ ‘ಲಕ್ಷಣ’ನಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ರಾಜಕಾರಣಿಗಳ ಮಕ್ಕಳ ಭರ್ಜರಿ ಎಂಟ್ರಿ ಸಂದರ್ಭದಲ್ಲಿ ಕೇಳಿ ಬಂದ ಮತ್ತೊಂದು ಹೆಸರು ಜೈದ್ ಖಾನ್. ಆದರೆ ಬಳಿಕ ಯಾವುದೇ ಸದ್ದು ಸುದ್ದಿಗಳಿರಲಿಲ್ಲ. ಆದರೀಗ ಜಮೀರ್ ಅಹ್ಮದ್ ಖಾನ್ ಪುತ್ರ ಜೈದ್ ಸರದಿ.

ಬಾಲಿವುಡ್​ನ ಯಾವುದೇ ಹೀರೋಗಳಿಗೂ ಕಡಿಮೆ ಇಲ್ಲವೆಂಬಂತೆ ಸುರಸುಂದರಾಂಗನಾಗಿರುವ ಜೈದ್ ಖಾನ್ ಸ್ಯಾಂಡಲ್​​ವುಡ್​ ಪಾದರ್ಪಣೆಗೆ ಸಕಲ ಸಿದ್ಧತೆಯಲ್ಲಿದ್ದಾರೆ. ಈ ಹಿಂದೊಮ್ಮೆ ಹಿಂದಿ ಚಿತ್ರದಲ್ಲಿ ಜೈದ್ ಖಾನ್ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಸದ್ಯದ ಮಾಹಿತಿ ಪ್ರಕಾರ ಕನ್ನಡ ನೆಲದಿಂದಲೇ ತನ್ನ ಸಿನಿ ಇನಿಂಗ್ಸ್ ಆರಂಭಿಸಲು ಯುವ ಹೀರೋ ಉತ್ಸುಕನಾಗಿದ್ದಾನೆ.

ಇದಕ್ಕಾಗಿ ಸಕಲ ಸಿದ್ಧತೆ ಮುಗಿಸಿರುವ ಜೈದ್ ಖಾನ್​ಗಾಗಿ ಭರ್ಜರಿ ಸ್ಕ್ರಿಪ್ಟ್​ವೊಂದು ರೆಡಿಯಾಗುತ್ತಿದೆ. ಇದಕ್ಕೆ ಸಾರಥ್ಯವಹಿಸಿರುವುದು ‘ಬೆಲ್​ಬಾಟಂ’ ಚಿತ್ರ ಖ್ಯಾತಿಯ ನಿರ್ದೇಶಕ ಜಯತೀರ್ಥ. ಜೈದ್​, ಸ್ಯಾಂಡಲ್​ವುಡ್​ನಲ್ಲೇ ತನ್ನ ಮೊದಲ ಚಿತ್ರ ಮೂಡಿ ಬರಬೇಕೆಂದು ಬಯಸಿದ್ದಾನೆ. ಹೀಗಾಗಿ ಆತನಿಗೆ ಹೋಲುವಂತಹ ಕಥೆಯೊಂದರ ಸಿದ್ಧತೆಯಲ್ಲಿದ್ದೇವೆ. ಈ ಚಿತ್ರದ ಕಥೆಯು ವಿಭಿನ್ನ ಲವ್​ ಸ್ಟೋರಿ ಆಗಿರಲಿದ್ದು, ಆ ಕಥೆಗೆ ಹೊಂದುವಂತಹ ಲೊಕೇಶನ್​ಗಳ ಹುಡುಕಾಟಕ್ಕಾಗಿ ಇತ್ತೀಚೆಗೆ ಕಾಶಿಗೆ ತೆರಳಿದ್ದೆ ಎಂದಿದ್ದಾರೆ ನಿರ್ದೇಶಕ ಜಯತೀರ್ಥ.

ಆತ ನಾನು ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲಿ. ನಾನು ಇಲ್ಲಿಯವನು. ಹೀಗಾಗಿ ಈ ನೆಲದಲ್ಲೇ ಸಿನಿ ಪಯಣದ ಮೊದಲ ಹೆಜ್ಜೆ ಕನ್ನಡದಿಂದ ಆರಂಭವಾಗಬೇಕು. ಈಗಾಗಲೇ 60 ನಿರ್ದೇಶಕರ ಕಥೆಗಳನ್ನು ಕೇಳಿದ್ದೇನೆ. ಆದರೆ ನನಗೆ ಜಯತೀರ್ಥರವರು ಹೇಳಿರುವ ಸ್ಟೋರಿ ಇಷ್ಟವಾಗಿದ್ದು, ಈ ಚಿತ್ರಕಥೆಯೊಂದಿಗೆ ಪಾದರ್ಪಣೆ ಮಾಡಲಿದ್ದೇನೆ ಎಂದು ಜೈದ್ ಖಾನ್ ಹೇಳಿದ್ದಾರೆ.

ಬಾಲಿವುಡ್​ನಲ್ಲೂ ಜಮೀರ್ ಅಹ್ಮದ್ ಪುತ್ರನಿಗೆ ಉತ್ತಮ ನಂಟಿದೆ. ಅಂತದ್ರಲ್ಲಿ ನಮ್ಮ ನೆಲದಿಂದಲೇ ಸಿನಿ ಕೆರಿಯರ್ ಆರಂಭಿಸಬೇಕು ಎಂಬ ಮಾತು ನನಗೆ ತುಂಬಾ ಖುಷಿ ಕೊಟ್ಟಿದೆ. ಹೀಗಾಗಿ ಒಂದು ಅತ್ಯುತ್ತಮ ಚಿತ್ರದ ಮೂಲಕ ಹೊಸ ಹೀರೋ ಪರಿಚಯಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಸದ್ಯ ಜೈದ್​ಗಾಗಿ ಭರ್ಜರಿ ಕಥೆಯೊಂದು ರೆಡಿಯಾಗುತ್ತಿದ್ದು, ಆಗಸ್ಟ್​ ತಿಂಗಳಲ್ಲಿ ಚಿತ್ರದ ಸಂಪೂರ್ಣ ಮಾಹಿತಿಗಳು ಹೊರ ಬೀಳಲಿದೆ ಎನ್ನಲಾಗಿದೆ. ಈ ಮೂಲಕ ಬಣ್ಣದ ಲೋಕದ ಅದೃಷ್ಟ ಪರೀಕ್ಷೆ ಮತ್ತೊಬ್ಬರು ರಾಜಕಾರಣಿಯ ಪುತ್ರ ಎಂಟ್ರಿಯಾಗುವುದು ಪಕ್ಕಾ ಆದಂತಾಗಿದೆ.

Comments are closed.