ಪ್ರತಿ ರಂಜಾನ್ ಹಬ್ಬದಂದು ಬಾಲಿವುಡ್ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಚಿತ್ರ ತೆರೆ ಕಾಣುವುದು ಸಾಮಾನ್ಯ. ನಿನ್ನೆ ಬಹುನಿರೀಕ್ಷಿತ ಚಿತ್ರ ಭಾರತ್ ಬಿಡುಗಡೆಗೊಂಡಿದ್ದು, ಮೊದಲ ದಿನವೇ 42 ಕೋಟಿ ರೂ. ಗಲ್ಲಾ ಪೆಟ್ಟಿಗೆ ತುಂಬಿಸುವ ಮೂಲಕ ಈ ಹಿಂದಿನ ಎಲ್ಲಾ ಸಲ್ಮಾನ್ ಚಿತ್ರ ಗಳಿಕೆಯನ್ನು ಹಿಂದಿಕ್ಕಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಇದಲ್ಲದೆ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಮೊದಲ ದಿನದ ಗಳಿಕೆಯಲ್ಲಿ ಹೊಸ ದಾಖಲೆ ನಿರ್ಮಿಸಿದ “ಬಾರತ್” ಫಸ್ಟ್ ಡೇ ಕಲೆಕ್ಷನ್ ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಚಿತ್ರ ಎನಿಸಿಕೊಂಡಿದೆ. ಇನ್ನು ಹಿಂದಿ ಚಿತ್ರಗಳ ಪೈಕಿ ಅತಿ ಹೆಚ್ಚಿನ ಪ್ರಮಾಣದ ಮೊದಲ ದಿನದ ಗಳಿಕೆ ಕಂಡಿರುವ ಚಿತ್ರ ಅಮೀರ್ ಖಾನ್ ಹಾಗೂ ಅಮಿತಾಬ್ ಬಚ್ಚನ್ ಅಭಿನಯದ “ಥಗ್ಸ್ ಆಫ್ ಹಿಂದೂಸ್ಥಾನ್” ಕಳೆದ ವರ್ಷ ದೀಪಾವಳಿಯಂದು ಬಿಡುಗಡೆಯಾಗಿದ್ದ ಈ ಚಿತ್ರ ಮೊದಲ ದಿನದ ಬಾಕ್ಸ್ ಆಫೀಸ್ ನಲ್ಲಿ 48.27ಕೋಟಿ ರು. ಗಳಿಸಿತ್ತು.
ಅಲಿ ಅಬ್ಬಾಸ್ ಜಫರ್ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ‘ಭಾರತ್’ ಚಿತ್ರ ಮೊದಲ ದಿನವೇ 42.30ಕೋಟಿ ರೂ. ಗಳಿಕೆ ಮಾಡಿದ್ದು, ಬಂಪರ್ ಶುಭಾರಂಭ ಕಂಡಿದೆ.
ಸಲ್ಮಾನ್ ಈ ಚಿತ್ರದಲ್ಲಿ ಕೊಂಚ ವಿಭಿನ್ನವಾಗಿ ನಟಿಸುವ ಪ್ರಯತ್ನ ಮಾಡಿದ್ದಾರೆ. ‘ಭಾರತ್’ ಎಂಬುದು ಒಬ್ಬ ವ್ಯಕ್ತಿಯ ಕತೆಯಾಗಿದ್ದು, ಆ ಮೂಲಕ ಭಾರತ-ಪಾಕಿಸ್ತಾನ ವಿಭಜನೆಯ ನಂತರ ದೇಶದ ಬದಲಾದ ಸ್ವರೂಪ ಹಾಗೂ ಅದರೊಂದಿಗೆ ಬದಲಾಗುವ ಆಂತರಿಕ ಭಾವನೆಯನ್ನು ತೋರಿಸಲಾಗಿದೆ. ಈ ಚಿತ್ರ ಒಂದು ಕೌಟುಂಬಿಕ ಕಥೆಯಾಗಿದ್ದು, ಭಾರತ್-ಪಾಕ್ ವಿಭಜನೆಯಲ್ಲಿ ತಂದೆ, ಮಕ್ಕಳು ಬೇರ್ಪಡುತ್ತಾರೆ.
Comments are closed.