ಸಾಮಾನ್ಯವಾಗಿ ಚಿತ್ರವೊಂದು ಹಿಟ್ ಆದರೆ ನಟ-ನಟಿಯರಿಗೆ ನೇಮು-ಫೇಮು ಬಂದು ಬಿಡುತ್ತದೆ. ಹಾಗೆಯೇ ಇಂತಹ ನಾಯಕ ನಾಯಕಿಯರ ಹಿಂದೆ ಒಂದಷ್ಟು ಅಭಿಮಾನಿಗಳ ಬಳಗ ಕೂಡ ಹುಟ್ಟಿಕೊಳ್ಳುವುದು ಸಹಜ. ಇಲ್ಲಿ ನಟರ ಹಿಂದೆ ಯುವತಿಯರು ಮುಗಿ ಬಿದ್ದರೆ, ನಟಿಮಣಿಯರಿಗಾಗಿ ಹೈಕ್ಳ ದಂಡೇ ಸೇರುವುದು ಸಾಮಾನ್ಯ. ಆದರೆ ಬಾಲಿವುಡ್ನ ಹೊಸ ನಟನೊಬ್ಬನ ಪರಿಸ್ಥತಿ ಮಾತ್ರ ತೀರಾ ವಿಭಿನ್ನ.
ಬಿಟೌನ್ನಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ಅರ್ಜುನ್ ಮಾಥುರ್ ಎಂಬ ನಟನಿಗೆ ಯುವಕರಿಂದ ಅಸಭ್ಯ ರೀತಿಯ ಸಂದೇಶಗಳು ಬರುತ್ತಿವೆಯಂತೆ. ಅದರಲ್ಲೂ ಕೆಲವರು ತನ್ನನ್ನು ಮದುವೆಯಾಗುವಂತೆ ಸಂದೇಶ ಕಳುಹಿಸುತ್ತಿದ್ದಾರೆ ಎಂದು ಯುವ ನಟ ಅಳಲು ತೋಡಿಕೊಂಡಿದ್ದಾರೆ.
ಇದಕ್ಕೆಲ್ಲಾ ಕಾರಣವಾಗಿರುವುದು ಅರ್ಜುನ್ ನಟಿಸಿರುವ ಹೊಸ ವೆಬ್ ಸಿರೀಸ್. ‘ಮೇಡ್ ಇನ್ ಹೆವೆನ್’ ಎಂಬ ವೆಬ್ ಸರಣಿಯಲ್ಲಿ ಸಲಿಂಗಿ ಪಾತ್ರವನ್ನು ಅರ್ಜುನ್ ನಿರ್ವಹಿಸಿದ್ದರು. ದಿನ ಬೆಳಗಾಗುವುದರೊಳಗೆ ಈ ವೆಬ್ ಸಿರೀಸ್ ಹಿಟ್ ಆಗಿದೆ. ಒಂದಷ್ಟು ಚಿತ್ರಗಳಲ್ಲಿ ಬಣ್ಣ ಹಚ್ಚಿದರೂ ಸಿಗದ ಜನಪ್ರಿಯತೆ ವೆಬ್ ಸಿರೀಸ್ನಿಂದ ಸಿಕ್ಕಿದ ಖುಷಿಯಲ್ಲಿದ್ದರು ಯುವ ನಟ.
ಆದರೆ ಈ ಫೇಮ್ ಇದೀಗ ನಟನ ನಿದ್ದೆಗೆಡಿಸಿದೆ. ದಿನಂಪ್ರತಿ ಅರ್ಜುನ್ಗೆ ನೂರಾರು ಮೆಸೇಜ್ಗಳು ಬರುತ್ತಿದೆಯಂತೆ. ಅದರಲ್ಲಿ ಹೆಚ್ಚಿನವು ಅಸಭ್ಯದಿಂದ ಕೂಡಿರುತ್ತದೆ. ಮತ್ತೆ ಕೆಲವರು ನೀವು ಸಲಿಂಗಿ ನಾ ಎಂದು ಕೇಳುತ್ತಿದ್ದಾರೆ. ಇನ್ನು ಕೆಲವರು ತನ್ನನ್ನು ಮದುವೆಯಾಗುವಂತೆ ಕೇಳಿಕೊಳ್ಳುತ್ತಿದ್ದಾರೆ ಎಂದು ನಟ ನೋವು ತೋಡಿಕೊಂಡಿದ್ದಾರೆ.
ನಾನು ಈ ಹಿಂದೆ ಕೂಡ ಸಲಿಂಗಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದೇನೆ. ಆದರೆ ಈ ಬಾರಿ ನನ್ನ ಪಾತ್ರವನ್ನು ಎಲ್ಲರೂ ಗುರುತಿಸಿಕೊಂಡಿದ್ದಾರೆ. ನಮ್ಮ ಸಮಾಜದಲ್ಲಿ ಸಲಿಂಗಿಗಳಿಗೆ ಗೌರವ ನೀಡುತ್ತಿಲ್ಲ. ಆದರೆ ಈ ವೆಬ್ ಸಿರೀಸ್ನಿಂದ ಅದು ದೂರವಾಗುವ ಆತ್ಮ ವಿಶ್ವಾಸವಿದೆ ಎಂದು ಮೆಸೇಜ್ ಮಾಡಿದವರು ಇದ್ದಾರೆ. ಇದೆಲ್ಲವೂ ಖುಷಿ ಕೊಟ್ಟರೂ, ಅದಕ್ಕಿಂತ ಹೆಚ್ಚಾಗಿ ನನಗೆ ಬರುತ್ತಿರುವ ಕೆಟ್ಟ ಮೆಸೇಜ್ಗಳೇ ಈಗ ಚಿಂತೆಯಾಗಿದೆ ಎಂದಿದ್ದಾರೆ ಅರ್ಜುನ್.
ಹಾಗೆಯೇ ನಾನು ತೆರೆ ಮೇಲೆ ಕಾಣಿಸಿಕೊಳ್ಳುವ ಪಾತ್ರಕ್ಕೂ ನಿಜ ಜೀವನಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರಗಳಲ್ಲಿ ಮೂಡಿ ಬರುವ ರೋಲ್ಗಳನ್ನು ಹೋಲಿಸಿ ನನಗೆ ಮೆಸೇಜ್ ಮಾಡಬೇಡಿ ಎಂದು ಅರ್ಜುನ್ ಮಾಥುರ್ ಮನವಿ ಮಾಡಿಕೊಂಡಿದ್ದಾರೆ. ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನಿಮಾದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಾತ್ರದಲ್ಲಿ ಅರ್ಜುನ್ ಅಭಿನಯಿಸಿದ್ದರು. ಈ ಪಾತ್ರದ ಬಳಿಕ ಅರ್ಜುನ್ಗೆ ಅವಕಾಶ ಮಹಾಪೂರವೇ ಹರಿದು ಬರುತ್ತಿವೆಯಂತೆ.
Comments are closed.