ಮನೋರಂಜನೆ

ರಾಜ್ ಕುಟುಂಬದಿಂದ ಮತ್ತೊಬ್ಬ ಹೀರೋ ಎಂಟ್ರಿಗೆ ಭರ್ಜರಿ ಸಿದ್ದತೆ!

Pinterest LinkedIn Tumblr


ನಟ ಸಾರ್ವಭೌಮ ಕನ್ನಡಿಗರ ಕಣ್ಮಣಿ ಡಾ.ರಾಜ್​ಕುಮಾರ್ ಅವರ ಕುಟುಂಬದಿಂದ ಮೂರನೇ ತಲೆಮಾರಿನ ನಟ-ನಟಿಯರ ಎಂಟ್ರಿ ಜೋರಾಗಿ ನಡೆಯುತ್ತಿದೆ. ಈಗಾಗಲೇ ವರನಟನ ಹಾದಿಯಲ್ಲಿ ವಿನಯ್ ರಾಜ್​ಕುಮಾರ್ ಸ್ಯಾಂಡಲ್​ವುಡ್​ನಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಯುವರಾಜ್ ಕುಮಾರ್ ಹಾಗೂ ಧೀರನ್‌ ರಾಮ್​ಕುಮಾರ್‌ ಮೊದಲ ಚಿತ್ರದ ಸಿದ್ಧತೆಯಲ್ಲಿದ್ದಾರೆ. ಹಾಗೆಯೇ ಅಣ್ಣಾವ್ರ ಕುಟುಂಬದಿಂದ ಮೊದಲ ಹೀರೋಯಿನ್ ಆಗಿ ಧನ್ಯಾ ರಾಮ್​ಕುಮಾರ್ ಸಹ ಹೊಸ ಹೆಜ್ಜೆಯಿಡಲು ಅಣಿಯಾಗುತ್ತಿದ್ದಾರೆ.

ಈ ಪಟ್ಟಿಗೆ ಹೊಸ ಸೇರ್ಪಡೆ ಸೂರಜ್ ಕುಮಾರ್. ಇವರು ರಾಜ್​ಕುಮಾರ್ ಅವರ ಪತ್ನಿ ಪಾರ್ವತಮ್ಮ ರಾಜ್​ಕುಮಾರ್ ಅವರ ಸಹೋದರ ಎಸ್​.ಎ ಶ್ರೀನಿವಾಸ್ ಅವರ ಪುತ್ರ. ಕನ್ನಡದಲ್ಲಿ ಒಂದಷ್ಟು ಚಿತ್ರಗಳನ್ನು ನಿರ್ಮಿಸಿರುವ ಶ್ರೀನಿವಾಸ್ ಮಗನಿಗೂ ಬಣ್ಣದ ಲೋಕದ ದಾರಿ ತೋರಿಸಿದ್ದಾರೆ.

ಹೀಗಾಗಿ ಸೂರಜ್ ಮೊದಲಿಂದಲೂ ಚಿತ್ರರಂಗ ಹಾಗು ಹೋಗುಗಳನ್ನು ಗಮನಿಸುತ್ತಾ ಬಂದಿದ್ದಾರೆ. ಈ ಹಿಂದೆ ದರ್ಶನ್ ಅಭಿನಯದ ‘ಐರಾವತ’ ಮತ್ತು ‘ತಾರಕ್’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಸಹ ಕೆಲಸ ಮಾಡಿದ ಅನುಭವವಿದೆ. ಇದೀಗ ನಾಯಕ ನಟನಾಗಿ ಭಡ್ತಿ ಪಡೆಯುವ ಹಾದಿಯಲ್ಲಿದ್ದಾರೆ ಸೂರಜ್.

ಈ ಹೊಸ ನಟನನ್ನು ಸ್ಯಾಂಡಲ್​ವುಡ್​ಗೆ ಪರಿಚಯಿಸುತ್ತಿರುವುದು ನಿರ್ದೇಶಕ ರಘು ಕೋವಿ. ಈಗಾಗಲೇ ಪ್ರಿ ಪೊಡಕ್ಷನ್ ಕೆಲಸಗಳನ್ನು ಆರಂಭಿಸಿರುವ ಚಿತ್ರತಂಡ ನಾಯಕಿಯಾಗಿ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್​ರನ್ನು ಕರೆ ತರುವ ಕಸರತ್ತಿನಲ್ಲಿದೆ. ಚಿತ್ರದಲ್ಲಿ ಕಾಣಿಸಿಕೊಳ್ಳುವ ಇತರೆ ಕಲಾವಿದರು ಮತ್ತು ತಂತ್ರಜ್ಞರ ಪಟ್ಟಿಯನ್ನು ಮತ್ತು ಟೈಟಲ್​ ಅನ್ನು ಇದೇ ತಿಂಗಳ ಅಂತ್ಯದಲ್ಲಿ ಪ್ರಕಟಿಸಲು ರಘು ಮತ್ತು ತಂಡ ಯೋಜನೆ ಹಾಕಿಕೊಂಡಿದೆ.

ತಮ್ಮ ಚೊಚ್ಚಲ ಚಿತ್ರಕ್ಕಾಗಿ ಸಾಹಸ ಹಾಗೂ ನೃತ್ಯ ತರಬೇತಿ ಪಡೆದುಕೊಂಡಿರುವ ಸೂರಜ್​, ನೀನಾಸಂ ಹಾಗೂ ಟೆಂಟ್‌ ಸಿನಿಮಾದಲ್ಲಿ ಅಭಿನಯ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಒಟ್ಟಿನಲ್ಲಿ ಭರ್ಜರಿ ತಯಾರಿಯೊಂದಿಗೆ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡಲು ಅಣ್ಣಾವ್ರ ಕುಟುಂಬದಿಂದ ಮತ್ತೊಬ್ಬ ಹೀರೋ ರೆಡಿಯಾಗುತ್ತಿದ್ದಾರೆ.

Comments are closed.