ಕೊಡಗು ಅಭಿಯಾನ ಇದೀಗ ಸ್ಯಾಂಡಲವುಡ್ ಮತ್ತು ಸರ್ಕಾರದ ನಡುವಿನ ಸಾಮರಸ್ಯ ಕದಡುತ್ತಿದೆ. ಹೌದು ಕೊಡಗು ಆಸ್ಪತ್ರೆ ಅಭಿಯಾನ ಬೆಂಬಲಿಸುವ ವೇಳೆ ನಟಿ ಹರ್ಷಿಕಾ ಪೂಣಚ್ಚ ನೀಡಿದ್ದ ಹೇಳಿಕೆಗೆ ಸಚಿವ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದು, ನಟಿ ಹರ್ಷಿಕಾ ಸಿನಿಮಾದ ಬಗ್ಗೆ ಮಾತನಾಡಲಿ ಸಾಕು ಎಂದು ಟೀಕಿಸಿದ್ದಾರೆ.
ನಿನ್ನೆ ಕೊಡಗಿನಲ್ಲಿ ನೆರೆ ಸಂತ್ರಸ್ಥರಿಗಾಗಿ ನಿರ್ಮಾಣವಾಗುತ್ತಿರುವ ಮನೆಗಳ ಕ್ವಾಲಿಟಿ ಬಗ್ಗೆ ಮಾತನಾಡಿದ್ದ ನಟಿ ಹರ್ಷಿಕಾ ಪೂಣಚ್ಚ, ಈ ಮನೆಗಳು ಗುಣಮಟ್ಟದಿಂದ ಕೂಡಿಲ್ಲ. ಕಳಪೆ ಕಾಮಗಾರಿ ಮಾಡಲಾಗುತ್ತಿದೆ ಎಂದಿದ್ದರು. ಹರ್ಷಿಕಾ ಪೂಣಚ್ಚ ಈ ಹೇಳಿಕೆಗೆ ಮೈಸೂರಿನ ಸಚಿವ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದು, ಯಾರವರು..? ಹರ್ಷಿಕಾ ಪೂಣಚ್ಚ ಏನಾಗಿದ್ದಾರೆ.? ಹರ್ಷಿಕಾ ಪೂಣಚ್ಚ ಸಿನಿಮಾ ನಟಿ. ಅವರು ಸಿನಿಮಾ ಬಗ್ಗೆ ಮಾತ್ರ ಮಾತನಾಡಬೇಕು. ಕೊಡಗು ಸಂತ್ರಸ್ತರ ಮನೆಗಳ ಬಗ್ಗೆ ಹರ್ಷಿಕಾ ಪೂಣಚ್ಚ ಅವರಿಗೆ ಏನು ಗೊತ್ತು..? ಅವರ ವಿದ್ಯಾಭ್ಯಾಸ ಹಿನ್ನೆಲೆ ಏನು.? ವಾಸ್ತವ ಅರ್ಥ ಮಾಡಿಕೊಳ್ಳದೆ ತಜ್ಞರಂತೆ ಮಾತನಾಡಬಾರದು ಎಂದು ಸಚಿವ ಸಾ.ರಾ. ಮಹೇಶ್ ಕಿಡಿಕಾರಿದ್ದಾರೆ.
ಅಲ್ಲದೇ ಕೊಡಗು ಜಿಲ್ಲೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ ಸಚಿವ ಮಹೇಶ್, ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ಕೊಡಗು ಜಿಲ್ಲಾಸ್ಪತ್ರೆ ಅಭಿವೃದ್ಧಿಗೆ ನೂರು ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅಭಿಯಾನ ಮಾಡೋದು ಸುಮ್ಮನೇ ವ್ಯರ್ಥ. ಕೆಲವರು ಪ್ರಚಾರಕ್ಕಾಗಿ ಇಂತಹ ಪ್ರಯತ್ನ ಮಾಡ್ತಿದ್ದಾರೆ ಎಂದರು.
Comments are closed.