ಮನೋರಂಜನೆ

ಬೆಚ್ಚಿ ಬೀಳಿಸೋ ಭಿನ್ನ ಭೂಗತ ಕಥೆ ‘ಹಫ್ತಾ’!

Pinterest LinkedIn Tumblr


ಬೆಂಗಳೂರು: ಕರಾವಳಿ ತೀರದ ಭೂಗತ ಲೋಕದ ಅಪರೂಪದ ಕಥೆಯ ಸುಳಿವಿನೊಂದಿಗೆ ಎಲ್ಲರನ್ನು ಆವರಿಸಿಕೊಂಡಿದ್ದ ಚಿತ್ರ ಹಫ್ತಾ. ಇಂಥಾ ಅಗಾಧ ನಿರೀಕ್ಷೆಗಳ ಜೊತೆಯೇ ಹಫ್ತಾ ಈಗ ತೆರೆ ಕಂಡಿದೆ. ನಿರೀಕ್ಷೆಯಂತೆಯೇ ನಿರ್ದೇಶಕ ಪ್ರಕಾಶ್ ಹೆಬ್ಬಾಳ ಇದುವರೆಗೆ ಯಾರೂ ಮುಟ್ಟದ ಅಪರೂಪದ ಕಥೆಯೊಂದನ್ನು ಪ್ರೇಕ್ಷಕರೆದುರು ತೆರೆದಿಟ್ಟಿದ್ದಾರೆ. ಮಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದಂತಿರೋ ರಗಡ್ ಶೈಲಿ, ಖಡಕ್ ಡೈಲಾಗ್ ಮತ್ತು ಪ್ರತಿ ಸೀನುಗಳಲ್ಲಿಯೂ ಹಿಡಿದು ನಿಲ್ಲಿಸುವಂಥಾ ಕುತೂಹಲದ ನಿರೂಪಣೆಗಳ ಮೂಲಕ ಹಫ್ತಾ ಪ್ರೇಕ್ಷಕರಿಗೆ ಆಪ್ತವಾಗಿದೆ.

ಅದೇ ಭೂಗತ ಜಗತ್ತು, ಅದೇ ಮಚ್ಚು ಲಾಂಗು ಮತ್ತು ಹೆಚ್ಚೆಂದರೆ ಪಿಸ್ತೂಲು… ಭೂಗತದ ಕಥೆಯೆಂದರೆ ಇಷ್ಟು ಮಾತ್ರವೇ ಅಲ್ಲ. ಭಿನ್ನವಾಗಿ ಆಲೋಚಿಸಿ ಹೊಸತೇನನ್ನೋ ಹುಡುಕಾಡೋ ಕಣ್ಣುಗಳಿದ್ದರೆ ಅದೇ ಭೂಗತದಲ್ಲಿ ಬೆರಗೊಂದನ್ನು ಆಯ್ದುಕೊಂಡು ಪ್ರೇಕ್ಷಕರನ್ನು ಚಕಿತಗೊಳಿಸಬಹುದೆಂಬುದಕ್ಕೆ ಹಫ್ತಾ ತಾಜಾ ಉದಾಹರಣೆಯಾಗಿ ನಿಲ್ಲುತ್ತದೆ. ಅದುವೇ ಇಡೀ ಸಿನಿಮಾದ ಶಕ್ತಿಯೂ ಹೌದು.

ಅವರಿಬ್ಬರೂ ಒಟ್ಟಿಗೇ ಆಟವಾಡುತ್ತಾ ಬೆಳೆದ ಕುಚಿಕು ಗೆಳೆಯರು. ಆದರೆ ಬೆಳೆಯುತ್ತಾ ಬಂದಂತೆಲ್ಲ ಬದುಕಿನ ದಾರಿ ಟಿಸಿಲೊಡೆದು ಇಬ್ಬರದ್ದೂ ವಿರುದ್ಧ ದಿಕ್ಕಾಗಿ ಬಿಡುತ್ತೆ. ಅದರಲ್ಲೊಬ್ಬ ಭೂಗತ ಜಗತ್ತಿಗೆ ಎಂಟ್ರಿ ಕೊಟ್ಟು ಬಿಡುತ್ತಾನೆ. ಮತ್ತೊಬ್ಬನದ್ದು ನೀರಿನ ಕ್ಯಾನ್ ಮಾರೋ ಕಾಯಕ. ಹೀಗೆ ತನ್ನ ಪಾಡಿಗೆ ತಾನು ನೀರು ಮಾರೋ ಕೆಲಸ ಮಾಡಿಕೊಂಡಿದ್ದ ಹುಡುಗನಿಗೆ ಭರತನಾಟ್ಯ ವಿದ್ಯಾರ್ಥಿನಿಯೊಬ್ಬಳ ಮೇಲೆ ಮೋಹ. ಈ ವ್ಯವಹಾರ ನಿರ್ಣಾಯಕ ಹಂತ ತಲುಪೋದರೊಳಗೇ ಭರತನಾಟ್ಯದ ಗುರುವಿನ ಕಾಕದೃಷ್ಟಿ ಆ ಹುಡುಗಿಯ ಮೇಲೆ ಬಿದ್ದಿರುತ್ತೆ. ತನ್ನ ಪ್ರೀತಿಯ ಹುಡುಗಿಯನ್ನು ಆ ಕಾಮುಕನಿಂದ ಕಾಪಾಡಿಕೊಳ್ಳುವ ಸಲುವಾಗಿ ನೀರು ಮಾರುವ ಕೈಗೆ ರಕ್ತ ಮೆತ್ತಿಕೊಳ್ಳುತ್ತೆ.

ಈ ಕ್ರೈಂ ಮೂಲಕವೇ ನೀರಿನ ಕ್ಯಾನು ಮಾರೋ ಹುಡುಗನೂ ಭೂಗತಕ್ಕೆ ಎಂಟ್ರಿ ಕೊಟ್ಟಾಕ್ಷಣ ಹಳೇ ಗೆಳೆಯರ ಸಮಾಗಮ ಸಂಭವಿಸುತ್ತೆ. ಇಬ್ಬರೂ ಶಾರ್ಪ್ ಶೂಟರ್‍ಗಳಾಗಿ ವಿಜೃಂಭಿಸುತ್ತಾರೆ. ಇಷ್ಟಾಗುತ್ತಲೇ ವಿರೋಧಿ ಬಣ ಮಸಲತ್ತು ಮಾಡಿ ಈ ಇಬ್ಬರು ನಾಯಕರಲ್ಲೊಬ್ಬನನ್ನು ಅಪಹರಿಸಿ ಲಿಂಗ ಪರಿವರ್ತನೆ ಮಾಡಿ ಬಿಡುತ್ತೆ. ಅದರಾಚೆಗೆ ಇನ್ನಷ್ಟು ವೇಗ ಪಡೆದುಕೊಂಡು ಸಾಗುವ ಕಥೆ ಸಾಮಾನ್ಯರಿಗೆ ಗೊತ್ತಿಲ್ಲದ ವಿಕ್ಷಿಪ್ತ ಜಗತ್ತನ್ನು ತೆರೆದಿಡುತ್ತಾ ಸಾಗುತ್ತದೆ. ಕ್ಷಣ ಕ್ಷಣವೂ ಕುತೂಹಲ ಕೆರಳಿಸುತ್ತಾ ಸಾಗೋ ಕಥೆ ಕ್ಲೈಮ್ಯಾಕ್ಸಿನವರೆಗೂ ಒಂದೇ ವೇಗದಲ್ಲಿ ಪ್ರೇಕ್ಷಕರನ್ನು ಕೈ ಹಿಡಿದು ಕರೆದೊಯ್ಯುತ್ತದೆ. ಈ ನಿಟ್ಟಿನಲ್ಲಿ ನಿರ್ದೇಶಕರಾಗಿ ಪ್ರಕಾಶ್ ಹೆಬ್ಬಾಳ ಚೊಚ್ಚಲ ಚಿತ್ರದಲ್ಲಿಯೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

Comments are closed.