ನಮ್ಮ ರೇಟಿಂಗ್ : 3 / 5
ಓದುಗರ ರೇಟಿಂಗ್ : 4 / 5
ಕಲಾವಿದರು: ಅನಂತ್ ನಾಗ್, ಸುಹಾಸಿನಿ, ಸಾಧು ಕೋಕಿಲಾ, ರಂಗಾಯಣ ರಘು, ವೀಣಾ, ವೈಭವಿ, ವೈನಿಧಿ, ವೈಸಿರಿ, ಚಕ್ರವರ್ತಿ, ಅಭಿಷೇಕ್, ಸುಮುಖ
ನಿರ್ದೇಶಕ: ವಿಜಯಲಕ್ಷ್ಮಿ ಸಿಂಗ್
ಚಿತ್ರದ ವಿಧ: Drama
ಅವಧಿ: 2 hrs. 15 Min.
ವಿಜಯಲಕ್ಷ್ಮಿ ಸಿಂಗ್ ನಟನೆಯ ಕಾಲೇಜು ಸ್ಟೋರಿ ಪ್ರಾಯ ಪ್ರಾಯ ಪ್ರಾಯ ಚಿತ್ರ 1982ರಲ್ಲಿ ರಿಲೀಸ್ ಆದಾಗ ಹೊಸ ಪ್ರಯತ್ನವೆನ್ನಿಸಿಕೊಂಡಿತ್ತು. ಈಗ ಅದೇ ರೀತಿ ಅವರ ನಿರ್ದೇಶನದ ಯಾನ ಚಿತ್ರ ಕೂಡ ಕನ್ನಡ ಚಿತ್ರರಂಗದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದೆ ಎನ್ನಬಹುದು. ನಟ ಜೈಜಗದೀಶ್ ಪುತ್ರಿಯರಾದ ವೈಭವಿ, ವೈನಿಧಿ ಮತ್ತು ವೈಸಿರಿ ನಟನೆಯ ಯಾನ ಚಿತ್ರ ಫ್ರೆಶ್ ಆಗಿ ಪ್ರೇಕ್ಷಕರನ್ನು ರಂಜಿಸುತ್ತದೆ.
ಬಾಲಿವುಡ್‌ನಲ್ಲಿ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಹೊಸ ಪ್ರಯತ್ನಗಳನ್ನು ಕಾಣಬಹುದಾಗಿದೆ. ಸ್ಟೂಡೆಂಟ್ ಲೈಫ್ ಅನ್ನು ಬೋಲ್ಡ್ ಆಗಿ ತೋರಿಸಲಾಗುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಇಂಥದ್ದೊಂದು ಪ್ರಯತ್ನ ಯಾನದಲ್ಲಿ ಮಾಡಲಾಗಿದೆ. ಸ್ಟೂಡೆಂಟ್ ಲೈಫ್ ಅನ್ನು ಸ್ಟೈಲಿಶ್ ಆಗಿ, ಬೋಲ್ಡ್ ಆಗಿ ತೋರಿಸಲಾಗಿದೆ. ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಬಹಳ ಅಚ್ಚುಕಟ್ಟಾಗಿ, ಸುಂದರವಾಗಿ, ಸಹಜವಾಗಿ, ಅಷ್ಟೇ ಪ್ರಾಮಾಣಿಕವಾಗಿ ಚಿತ್ರಕತೆ ಮಾಡಿದ್ದಾರೆ.
ಯಾನ ಚಿತ್ರ ಮೂವರು ಹುಡುಗಿಯರ ಹರೆಯದ ದಿನಗಳ ತಲ್ಲಣಗಳನ್ನು ಹೇಳುವ ಚಿತ್ರ. ಅನಂತ್ ನಾಗ್ ಮತ್ತು ಸುಹಾಸಿನಿ ಮಗಳಾದ ಮಾಯಗೆ ಸಂಗೀತವೆಂದರೆ ಹುಚ್ಚು. ನಂದಿನಿ ಬೋಲ್ಡ್ ಅಂಡ್ ಡೇರಿಂಗ್ ಹುಡುಗಿ, ಕಾಲೇಜಿನಲ್ಲಿ ಎಲೆಕ್ಷನ್‌ಗೆ ನಿಂತು ಎದುರಾಳಿಗೆ ಸೆಡ್ಡು ಹೊಡೆಯುತ್ತಾಳೆ. ಅಂಜಲಿ ಸಿಟಿ ಕಾಲೇಜಿನಲ್ಲಿ ಹಕ್ಕಿಯಂತೆ ಸ್ವತಂತ್ರವಾಗಿ ಇರಬೇಕು ಎಂದು ಬಯಸಿ ಬಂದ ಹಳ್ಳಿ ಹುಡುಗಿ. ಇವರೆಲ್ಲರ ಮುಗ್ಧ, ನಿಷ್ಕಲ್ಮಶ ಬದುಕಿನಲ್ಲಿ ಮೂವರು ಹುಡುಗರು ಅವರ ಬಾಳಲ್ಲಿ ಬಂದು ಅನಿರೀಕ್ಷಿತ ಘಟನೆಗಳಲ್ಲಿ ಸಿಕ್ಕಿಕೊಳ್ಳುತ್ತಾರೆ. ಸ್ನೇಹಿತರಲ್ಲದ ಈ ಮೂವರೂ ಹುಡುಗಿಯರು ನೊಂದು, ಹೆದರಿ ಊರು ಬಿಡುತ್ತಾರೆ. ಅಕಸ್ಮಾತ್ ಒಂದೆಡೆ ಭೇಟಿಯಾಗುತ್ತಾರೆ. ಇಲ್ಲಿಂದ ಅವರ ಯಾನ ಶುರುವಾಗುತ್ತದೆ. ಇದು ಮೂವರಿಗೂ ಜೀವನದ ಪಾಠ ಕಲಿಸುತ್ತದೆ. ಜೀವನವನ್ನು ಎದುರಿಸುವ ಸ್ಥೈರ್ಯವನ್ನು ನೀಡುತ್ತದೆ.
ಚಿತ್ರದಲ್ಲಿ ಮೊದಲರ್ಧ ಲವಲವಿಕೆಯಿಂದ ಕೂಡಿದ ಕಾಲೇಜು ಲೈಫ್ ಇದೆ. ಬೋರ್ ಆಗದಂತೆ ನೋಡಿಸಿಕೊಂಡು ಹೋಗುತ್ತದೆ. ದ್ವಿತಿಯಾರ್ಧದಲ್ಲಿ ಭಾವನಾತ್ಮಕವಾಗಿ ಕತೆ ಸಾಗುತ್ತದೆ. ಸಂಬಂಧಗಳಲ್ಲಿ ಯಾವುದು ರಿಯಲ್, ಯಾವುದು ಫೇಕ್ ಎನ್ನುವುದರ ಅರಿವು ಮಾಡಿಸುತ್ತದೆ. ಮೊದಲ ಚಿತ್ರವಾದರೂ ವೈಭವಿ, ವೈನಿಧಿ ಮತ್ತು ವೈಸಿರಿ ನಟನೆಯಿಂದ ಗಮನ ಸೆಳೆದಿದ್ದಾರೆ. ಇವರೆಲ್ಲರೂ ಹೀರೊಯಿನ್ಸ್ ಎನ್ನುವುದಕ್ಕಿಂತ ಕ್ಯಾರೆಕ್ಟರ್‌ಗಳಾಗಿ ಕಾಣಿಸುತ್ತಾರೆ. ಮೂವರು ಹುಡುಗಿಯರ ಕತೆ ಇರುವುದರಿಂದ ಹುಡುಗರಿಗೆ ಕಡಿಮೆ ಸ್ಪೇಸ್. ಚಕ್ರವರ್ತಿ, ಅಭಿಷೇಕ್ ಮತ್ತು ಸುಮುಖ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ ನಟರಾಗಿದ್ದಾರೆ.
ಚಿತ್ರ ಸ್ವಲ್ಪ ದೀರ್ಘ ಎನ್ನಿಸಿದರೂ, ಕರಂ ಚಾವ್ಲಾ ಅವರ ಛಾಯಾಗ್ರಹಣ ಕಣ್ಮನ ರಂಜಿಸುತ್ತದೆ. ಜೋಶ್ವಾ ಸಂಗೀತ ಕೂಡಾ ಇಷ್ಟವಾಗುತ್ತದೆ. ಸಂಭಾಷಣೆ ಚಿತ್ರದ ಹೈಲೈಟ್‌ಗಳಲ್ಲಿ ಒಂದು. ಮೆಟ್ರೋ ಸಿಟಿಗಳ ಕಾಲೇಜು ಲೈಫ್ ಚಿತ್ರದಲ್ಲಿದ್ದು, ಎಲ್ಲರೂ ನೋಡಿ ಎಂಜಾಯ್ ಮಾಡಬಹುದಾಗಿದೆ.
(ಪದ್ಮಾ ಶಿವಮೊಗ್ಗ -ವಿಜಯ ಕರ್ನಾಟಕ)
Comments are closed.