ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್, ಶೃತಿ ಹರಿಹರನ್ ಅಭಿನಯದ ನಾತಿಚರಾಮಿ ಚಿತ್ರಗಳು ಸೇರಿದಂತೆ ಕನ್ನಡಕ್ಕೆ ಒಟ್ಟು 11 ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಒಂದೇ ವರ್ಷದಲ್ಲಿ ಇಷ್ಟು ಪ್ರಶಸ್ತಿಗಳು ಬಂದಿರುವುದು ಇದೇ ಮೊದಲು.
ಪ್ರತಿಷ್ಠಿತ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ನವದೆಹಲಿಯಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಪ್ರಕಟಿಸಿದರು.
ಮಂಜುನಾಥ್ ಎಸ್. ಅವರ ನಿರ್ದೇಶನದ ತೇಜಸ್ವಿನಿ ಎಂಟರ್ ಪ್ರೈಸಸ್ ನಿರ್ಮಾಣದಲ್ಲಿ ಮೂಡಿಬಂದ ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್‌ಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿದೆ. ಅತ್ಯುತ್ತಮ ಸಾಹಸ ಸಿನಿಮಾ ಪ್ರಶಸ್ತಿಯು ಕೆಜಿಎಫ್ ಪಾಲಾಗಿದೆ. ಇದರೊಂದಿಗೆ ಬೆಸ್ಟ್ ಸ್ಪೆಷಲ್ ಎಫೆಕ್ಟ್ ವಿಭಾಗದಲ್ಲಿಯೂ ಕೆಜಿಎಫ್‌ಗೆ ಪ್ರಶಸ್ತಿ ದೊರಕಿದೆ.
ಕನ್ನಡದ ನಾತಿಚರಾಮಿ ಚಿತ್ರವು ಕೂಡ ಎರಡು ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ನಾತಿಚರಾಮಿ ಚಿತ್ರದ ಅಭಿನಯಕ್ಕಾಗಿ ನಟಿ ಶ್ರುತಿಹರಿಹರನ್ ಅವರಿಗೆ ವಿಶೇಷ ಉಲ್ಲೇಖದ ಆಧಾರದ ಮೇಲೆ ಪ್ರಶಸ್ತಿ ಸಿಕ್ಕಿದೆ. ಅಲ್ಲದೆ, ಬೆಸ್ಟ್ ಎಡಿಟಿಂಗ್‌ಗಾಗಿಯೂ ಇದೇ ಚಿತ್ರಕ್ಕೆ ಪ್ರಶಸ್ತಿ ದೊರಕಿದೆ. ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗೆ ದೊರಕುವ ಪ್ರಶಸ್ತಿಯು ಕೂಡ ನಾತಿ ಚರಾಮಿ ಸಿನಿಮಾದ ‘ಮಾಯಾವಿ ಮನವೇ’ ಹಾಡು ಹಾಡಿದ್ದ ಗಾಯಕಿ ಬಿಂದು ಮಾಲಿನಿ ಅವರಿಗೆ ದೊರಕಿದೆ.
ಅತ್ಯುತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ಅವರ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರಕ್ಕೆ ಪ್ರಶಸ್ತಿ ಲಭ್ಯವಾಗಿದೆ. ಅತ್ಯುತ್ತಮ ಬಾಲನಟ ಪ್ರಶಸ್ತಿಯು ಒಂದಲ್ಲ ಎರಡಲ್ಲ ಸಿನಿಮಾದ ನಟನೆಗಾಗಿ ಪಿ ವಿ ರೋಹಿತ್‌ಗೆ ಲಭ್ಯವಾಗಿದೆ. ಡಿ ಸತ್ಯ ಪ್ರಕಾಶ್ ನಿರ್ದೇಶನದ ಒಂದಲ್ಲಾ ಎರಡಲ್ಲಾ ಸಿನಿಮಾವು ರಾಷ್ಟ್ರೀಯ ಏಕೀಕರಣ ವಿಭಾಗದಲ್ಲಿ ನರ್ಗಿಸ್ ದತ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಪ್ರಶಸ್ತಿ ಪಟ್ಟಿ
* ಅತ್ಯುತ್ತಮ ಪ್ರಾದೇಶಿಕ ಚಿತ್ರ – ನಾತಿಚರಾಮಿ
* ಅತ್ಯುತ್ತಮ ಮಹಿಳಾ ಗಾಯಕಿ (ಮಾಯಾವಿ ಮಾನವೆ ಹಾಡು) (ಬಿಂಧು ಮಾಲಿನಿ ಗಾಯಕಿ) – ನಾತಿಚರಾಮಿ
* ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ – ನಾತಿಚರಾಮಿ
* ಅತ್ಯುತ್ತಮ ಸಂಕಲನ – ನಾತಿಚರಾಮಿ
* ಅತ್ಯುತ್ತಮ ಸಾಹಸ ಚಿತ್ರ – ಕೆಜಿಎಫ್
* ಅತ್ಯುತ್ತಮ ವಿಎಫ್ ಎಕ್ಸ್ ಚಿತ್ರ – ಕೆಜಿಎಫ್
* ಅತ್ಯುತ್ತಮ ರಾಷ್ಟ್ರೀಯ ಏಕತಾ ಚಿತ್ರ – ಒಂದಲ್ಲ, ಎರಡಲ್ಲ
* ಅತ್ಯುತ್ತಮ ಬಾಲ ಕಲಾವಿದ – ಒಂದಲ್ಲ, ಎರಡಲ್ಲ
* ಅತ್ಯುತ್ತಮ ಮಕ್ಕಳ ಚಿತ್ರ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು
* ಅತ್ಯುತ್ತಮ ರಾಷ್ಟ್ರೀಯ ಆಕ್ರ್ಸೂಸ್ ಚಿತ್ರ – ಮೂಕಜ್ಜಿಯ ಕನಸುಗಳು
* ನಾತಿಚರಾಮಿ ಚಿತ್ರದ ಅಭಿನಯಕ್ಕಾಗಿ ನಟಿ ಶೃತಿ ಹರಿಹರನ್ ಗೆ ವಿಶೇಷ ಪ್ರಶಸ್ತಿ
Comments are closed.